ಗುರುವಾರ , ಡಿಸೆಂಬರ್ 5, 2019
19 °C

ವೈಟ್‌ ಟಾಪಿಂಗ್ ಕಾಮಗಾರಿ: ದೊಡ್ಡಿಹಾಳ್‌ ಸಮಿತಿ ವರದಿ ಒಪ್ಪಿದ ಸಿ.ಎಂ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರದ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಟೆಂಡರ್‌ಶ್ಯೂರ್ ಮಾದರಿಯಲ್ಲಿ ಕೈಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಗಳ ಕುರಿತು ಕ್ಯಾ.ಆರ್.ಆರ್‌.ದೊಡ್ಡಿಹಾಳ್‌ ನೇತೃತ್ವದ ಸಮಿತಿ ಸಲ್ಲಿಸಿರುವ ತನಿಖಾ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ.

ಟೆಂಡರ್‌ಶ್ಯೂರ್ ಮಾದರಿಯಲ್ಲಿ ಮೊದಲ ಹಂತದಲ್ಲಿ ಕೈಗೊಂಡ 12 ರಸ್ತೆ ಕಾಮಗಾರಿಗಳು, ಎರಡನೇ ಹಂತದ 13 ರಸ್ತೆ ಕಾಮಗಾರಿಗಳು, 2016–17ನೇ ಸಾಲಿನಲ್ಲಿ ಮಂಜೂರಾಗಿದ್ದ ₹ 800 ಕೋಟಿ ಮತ್ತು 2017–18ನೇ ಸಾಲಿನ ₹ 690 ಕೋಟಿ ಅನುದಾನಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳ ತನಿಖೆಯನ್ನು ಸಮಿತಿಗೆ ವಹಿಸಲಾಗಿತ್ತು. ತನಿಖಾ ವರದಿಯನ್ನು ಸಮಿತಿಯು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿತ್ತು. ಇದರ ಪ್ರತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (bbmp.gov.in/) ಈಗ ಅಧಿಕೃತವಾಗಿ ಪ್ರಕಟಿಸಲಾಗಿದೆ.

‘ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಆದರೆ, ಸಮಿತಿಯು, ‘ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಲುವಾಗಿ ಅಂದಾಜು ವೆಚ್ಚದಲ್ಲಾಗಲೀ ಹಾಗೂ ವಿನ್ಯಾಸದಲ್ಲಾಗಲೀ ಉದ್ದೇಶಪೂರ್ವಕವಾಗಿ ಯಾವುದೇ ವ್ಯತ್ಯಾಸಗಳನ್ನು ಮಾಡಿರುವುದು ಕಂಡುಬಂದಿಲ್ಲ’ ಎಂದು ಸ್ಪಷ್ಟಪಡಿಸಿತ್ತು. 

ವೈಟ್‌ಟಾಪಿಂಗ್‌ ಕಾಮಗಾರಿಗಳಿಂದಾಗುವ ಪ್ರಯೋಜನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಮಿತಿ, ಡಿಪಿಆರ್‌ಗಳಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚ ಕಡಿಮೆ ಮಾಡುವಂತಹ ಕೆಲವು ಅಂಶಗಳನ್ನು ಸುಧಾರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿತ್ತು. ಕಾಮಗಾರಿಯಲ್ಲಿ ಕಂಡುಬಂದಿದ್ದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸುವಂತೆ ಸಲಹೆ ನೀಡಿತ್ತು.

ಟೆಂಡರ್‌ಶ್ಯೂರ್‌ ಹಾಗೂ ವೈಟ್‌ಟಾಪಿಂಗ್ ಕಾಮಗಾರಿ ವೆಚ್ಚ ಕಡಿಮೆ ಮಾಡುವ ಹಾಗೂ ಗುಣಮಟ್ಟ ಕಾಪಾಡುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿತ್ತು. ಈ ವರದಿಯ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ತನಿಖಾ ವರದಿ ಓದಿಲ್ಲ: ಮೇಯರ್‌

‘ವೈಟ್‌ಟಾಪಿಂಗ್‌ ಕಾಮಗಾರಿಗಳ ಕುರಿತು ದೊಡ್ಡಿಹಾಳ್‌ ಸಮಿತಿಯ ವರದಿಯನ್ನು ನಾನು ಓದಿಲ್ಲ. ಈ ವರದಿಯನ್ನು ಸರ್ಕಾರ ಒಪ್ಪಿರುವುದಾಗಲೀ, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದ್ದು ಗಮನಕ್ಕೆ ಬಂದಿಲ್ಲ. ತನಿಖಾ ವರದಿಯನ್ನು ಓದಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಳ್ಳು ಆರೋಪಕ್ಕೆ ಕ್ಷಮೆಯಾಚಿಸಲಿ’

‘ವೈಟ್‌ಟಾಪಿಂಗ್‌ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಬಿಜೆಪಿಯ ಎನ್‌.ಆರ್‌.ರಮೇಶ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದಿಕ್ಕು ತಪ್ಪಿಸಿದ್ದರು. ಈಗ ಸತ್ಯ ಹೊರ ಬಂದಿದೆ. ಬಿಜೆಪಿಯವರು ಗುಡ್ಡ ಅಗೆದು ಇಲಿ ಹೊರಕ್ಕೆ ತೆಗೆದಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡಿದ್ದ ರಮೇಶ್‌ ಅವರು ಮುಖ್ಯಮಂತ್ರಿ ಅವರಲ್ಲಿ ಹಾಗೂ ಬೆಂಗಳೂರಿನ ಜನತೆಯಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಒತ್ತಾಯಿಸಿದರು.

‘ಸತ್ಯಸಂಗತಿ ಬಹಿರಂಗವಾಗಿದೆ’

‘ವೈಟ್‌ಟಾಪಿಂಗ್‌ ಕಾಮಗಾರಿಗಳ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಎರಡು ವರ್ಷಗಳಿಂದ ಸುಳ್ಳು ಆರೋಪ ಮಾಡುತ್ತಿದ್ದರು. ಅವರೇ ನೇಮಿಸಿದ ಸಮಿತಿ ಈ ಸತ್ಯಸಂಗತಿಯನ್ನು ಬಹಿರಂಗಪಡಿಸಿದೆ. ವೈಟ್‌ ಟಾಪಿಂಗ್‌ ಮಾಡಿರುವ ರಸ್ತೆಗಳು ಕನಿಷ್ಠ 30 ವರ್ಷ ಬಾಳಿಕೆ ಬರುತ್ತವೆ. ಇನ್ನಾದರೂ ರಾಜಕೀಯ ಬಿಟ್ಟು ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ಕೆ ಬಿಜೆಪಿ ಮುಂದಾಗಲಿ’ ಎಂದು ಶಾಸಕ ರಾಮಲಿಂಗಾ ರೆಡ್ಡಿ ಹೇಳಿದರು. 

ಪ್ರತಿಕ್ರಿಯಿಸಿ (+)