ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಕಿಕ್‌ ಇಳಿಸಿದ ಸಿಎಂ: ಅಬಕಾರಿ ಇಲಾಖೆ ಸಿಬ್ಬಂದಿ ವರ್ಗಾವಣೆ ತಡೆ

Last Updated 11 ಮೇ 2020, 2:12 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಮತ್ತೆ ಆರಂಭಗೊಂಡ ಬೆನ್ನಲ್ಲೇ ಇಡೀ ಅಬಕಾರಿ ಇಲಾಖೆಯ ಪುನಾರಚನೆಗೆ ದಿಢೀರ್ ಕೈಹಾಕಿದ ಸಚಿವ ಎಚ್‌. ನಾಗೇಶ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಪುನಾರಚನೆಗೆ ಏಕಾಏಕಿ ಒಪ್ಪಿಗೆ ನೀಡಿ ಗ್ರೂಪ್‌ ಎ, ಬಿ, ಸಿ ಮತ್ತು ಡಿ ವೃಂದದ 200ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ, ಸ್ಥಳ ನಿಯುಕ್ತಿಗೆ ಸಚಿವರು ಅನುಮೋದನೆ ನೀಡಿದ 24 ಗಂಟೆಯೊಳಗೆ ಆ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಡೆಹಿಡಿದಿದ್ದಾರೆ.

‘ಪುನಾರಚನೆಗೊಳಿಸುವ ಹಾಗೂ ಸಿಬ್ಬಂದಿ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಹಿಂದೆ ಇಲಾಖೆಯಿಂದ ನಿವೃತ್ತರಾಗಿರುವ ಮತ್ತು ಕರ್ತವ್ಯದಲ್ಲಿರುವ ಕೆಲವು ಅಧಿಕಾರಿಗಳ ಚಿತಾವಣೆ, ಭಾರಿ ಲಾಬಿ ಮತ್ತು ಹಣದ ವ್ಯವಹಾರವಿದೆ. ಇದೀಗ ಆದೇಶ ತಡೆ ಹಿಡಿಯುವ ವಿಷಯದಲ್ಲೂ ಕೆಲವು ಪ್ರಭಾವಿ ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂಬ ಗಂಭೀರ ಆರೋಪ ಅಧಿಕಾರಿಗಳ ವಲಯದಿಂದಲೇ ಕೇಳಿಬಂದಿದೆ.

ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನಗತ್ಯ ಆರ್ಥಿಕ ಹೊರೆ ಎಂಬ ಕಾರಣಕ್ಕೆ ಪುನಾರಚನೆ ಪ್ರಸ್ತಾವವನ್ನು ತಡೆ ಹಿಡಿಯಲಾಗಿತ್ತು. ಆದರೆ, ಆಯುಕ್ತರ ಕಚೇರಿಯಲ್ಲಿ ಶುಕ್ರವಾರ (ಮೇ 8) ತುರ್ತು ಸಭೆ ನಡೆಸಿದ್ದ ಸಚಿವರು, ಪುನಾರಚನೆ ಮತ್ತು ಅಧಿಕಾರಿಗಳ ವರ್ಗಾವಣೆಗೆ ಅನುಮೋದನೆ ನೀಡಿದ್ದರು. ಆದರೆ, ಶನಿವಾರ ಸಂಜೆ ವೇಳೆಗೆ ಆದೇಶಕ್ಕೆ ತಡೆ ನೀಡಲಾಗಿದೆ.

ಏನಿದು ಪುನಾರಚನೆ: ಇಲಾಖೆಯ ವಿಭಾಗೀಯ ಕಚೇರಿ, ಬೆಂಗಳೂರು ನಗರ, ಬೆಳಗಾವಿ ಮತ್ತು ಮೈಸೂರು ಜಿಲ್ಲಾ ಕಚೇರಿಗಳನ್ನು ಪುನಾರಚನೆಗೊಳಿಸುವ, ಕೆಲವು ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ, ಹೊಸ ಹುದ್ದೆಗಳನ್ನು ಸೃಜಿಸುವ ಮತ್ತು ರಾಜ್ಯ ವಿಚಕ್ಷಣಾ ದಳ ರದ್ದುಪಡಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ 2017ರ
ನ. 11ರಂದು ಮಂಜೂರಾತಿ ನೀಡಿತ್ತು.

ಅದರಂತೆ, ಬೆಂಗಳೂರು ನಗರ ಜಿಲ್ಲೆಯಲ್ಲಿರುವ ನಾಲ್ಕು ಅಬಕಾರಿ ಜಿಲ್ಲೆಯನ್ನು ಎಂಟು, 5 ಉಪ ವಿಭಾಗಗಳನ್ನು 16, 48 ವಲಯಗಳನ್ನು 52 ವಲಯಗಳನ್ನಾಗಿ ಹೆಚ್ಚಿಸಲಾಗಿದೆ. ಅಲ್ಲದೆ, ಬೆಳಗಾವಿ ಮತ್ತು ಮೈಸೂರು ಅಬಕಾರಿ ಜಿಲ್ಲೆಯನ್ನೂ ತಲಾ ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.

ಇಲಾಖೆ ಪುನಾರಚನೆಗೊಳಿಸಿದಾಗ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 256, ಬೆಳಗಾವಿಯಲ್ಲಿ 42, ಮೈಸೂರಿನಲ್ಲಿ 28 ಸೇರಿ ಒಟ್ಟು 326 ಹೊಸ ಹುದ್ದೆಗಳು ಸೃಷ್ಟಿಯಾಗುತ್ತವೆ. ಹೊಸತಾಗಿ ಸೃಜಿಸಿದ ಕಚೇರಿಗೆ ಮೇಲ್ದರ್ಜೆಗೇರಿಸಿದ ಅಬಕಾರಿ ಅಧೀಕ್ಷಕರ 5 ಹುದ್ದೆ ಸೇರಿ ಒಟ್ಟು 124 ಹುದ್ದೆಗಳ ಮರು ಹೊಂದಾಣಿಕೆಗೆ ಉದ್ದೇಶಿಸಲಾಗಿದೆ. ಈ ಹುದ್ದೆಗಳಿಗೆ ಆವರ್ತಕ ವೆಚ್ಚ
₹ 9.68 ಕೋಟಿ ಮತ್ತು ಅನಾವರ್ತಕ ವೆಚ್ಚ ₹ 7.06 ಕೋಟಿ ಸೇರಿ ಒಟ್ಟು ₹16.74 ಕೋಟಿ ಅಗತ್ಯವಿದೆ ಎಂದು ಪ್ರಸ್ತಾವನೆಯಲ್ಲಿ ಅಬಕಾರಿ ಆಯುಕ್ತರು ತಿಳಿಸಿದ್ದರು.

ಸದ್ಯಕ್ಕೆ ಆದೇಶ ತಡೆಹಿಡಿಯಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಕಾರಣ ಗೊತ್ತಿಲ್ಲ. ಇಲಾಖೆಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರವಿದು. ಪುನಾರಚನೆಯಿಂದ ಆರ್ಥಿಕ ಹೊರೆಯಾಗದು.
- ಎಚ್‌. ನಾಗೇಶ್, ಅಬಕಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT