ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-–ಆಫೀಸ್‌ ಮೂಲಕ ವಿ.ವಿ ಕಡತ ರವಾನೆ: ಸಿ.ಎನ್‌.ಅಶ್ವತ್ಥನಾರಾಯಣ

ಉನ್ನತ ಶಿಕ್ಷಣ: ಆನ್‌ಲೈನ್‌ ಸಂಯೋಜನೆಯ ಪೋರ್ಟಲ್‌ಗೆ ಚಾಲನೆ * ಇದೇ 15ರಿಂದ ವ್ಯವಹಾರ ಆರಂಭ
Last Updated 30 ಜೂನ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಂಪೂರ್ಣ ಡಿಜಿಟಲೀಕರಣದತ್ತ ಹೆಜ್ಜೆ ಇಟ್ಟಿರುವ ಸರ್ಕಾರ, ಇದೇ 15ರಿಂದ ಎಲ್ಲ ವಿಶ್ವವಿದ್ಯಾಲಯಗಳೂ ಸರ್ಕಾರದ ಜತೆ ಇ-ಆಫೀಸ್‌ (ಆನ್‌ಲೈನ್‌) ಮೂಲಕವೇ ವ್ಯವಹರಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಉನ್ನತ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್‌ಲೈನ್‌ ಸಂಯೋಜನೆಯ ಪೋರ್ಟಲ್‌ ಅನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಂಗಳವಾರ ಇಲ್ಲಿ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಡಿಯೊ ಸಂವಾದದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಇ-ಆಫೀಸ್‌ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ? ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು’ ಎಂದು ಅವರು ಹೇಳಿದರು.

‘ಯಾವುದೇ ಕಾಲೇಜು ಅಥವಾ ಕೋರ್ಸ್‌ಗಳಿಗೆ ಮಾನ್ಯತೆ ನೀಡಬೇಕಾದರೂ ಅದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುತ್ತದೆ; ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು’ ಎಂದು ಅವರು ಹೇಳಿದರು.

'ಮಾನ್ಯತೆ ನೀಡುವುದಕ್ಕೂ ಮುನ್ನ ಎಲ್ಲ ರೀತಿಯ ಮಾನದಂಡಗಳನ್ನು ಸರಿಯಾಗಿ ವಿಶ್ವವಿದ್ಯಾಲಯಗಳು ಪರಿಶೀಲಿಸಿರಬೇಕು. ಸರ್ಕಾರಕ್ಕೆ ಕಳುಹಿಸುವ ಎಲ್ಲ ಪ್ರಸ್ತಾವನೆಗಳು ಕಾನೂನುಬದ್ಧವಾಗಿಯೇ ಇರಬೇಕು. ಮೂಲಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳಿಗೇ ವಿಶ್ವವಿದ್ಯಾಲಯಗಳು ಮಾನ್ಯತೆ ನೀಡಬೇಕು. ಒಟ್ಟಾರೆ ಸರ್ಕಾರಕ್ಕೆ ಕಳುಹಿಸುವ ಕಡತಗಳು ದೋಷರಹಿತವಾಗಿರಬೇಕು. ಒಂದು ವೇಳೆ ಲೋಪಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರನ್ನೇ ಹೊಣೆಗಾರರನ್ನಾಗಿಸುತ್ತೇನೆ' ಎಂದು ಎಚ್ಚರಿಕೆ ನೀಡಿದರು.

‘ಸಂಯೋಜನೆ ವಿಷಯದಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲ. ಮೂಲಸೌಲಭ್ಯ ಇರುವ ಸಂಸ್ಥೆಗೆ ಸಂಯೋಜನೆ ನೀಡಿದರೆ ಗುಣಮಟ್ಟದ ಶಿಕ್ಷಣ ತನ್ನಿಂತಾನೆ ಬರುತ್ತದೆ. ಈ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಪದವಿ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್ ಹಾಜರಿದ್ದರು.

ಏನಿದು ಆನ್‌ಲೈನ್ ಸಂಯೋಜನೆ?

* ಇದುವರೆಗೂ ವಿವಿಗಳು ಮತ್ತು ಸರ್ಕಾರದ ನಡುವೆ ಎಲ್ಲ ವ್ಯವಹಾರಗಳು ಕಡತ, ಟಪಾಲು ಇಲ್ಲವೇ ಪತ್ರ ಮುಖೇನ ನಡೆಯುತ್ತಿದ್ದವು. ಇನ್ನು ಮುಂದೆ ಇವೆಲ್ಲವೂ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯಲಿವೆ.

* ಕೈಯಲ್ಲಿ ಮಾಡುತ್ತಿದ್ದ ಪ್ರಕ್ರಿಯೆಯಲ್ಲಿ ಬಹಳಷ್ಟು ಲೋಪಗಳಿದ್ದವು. ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದ್ದವು. ಇದೆಲ್ಲವನ್ನೂ ಆನ್‌ಲೈನ್ ಸಂಯೋಜನೆ ನಿವಾರಿಸಲಿದೆ.

* ಇದನ್ನು ‘ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ’ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆ ತುಂಬಾ ಆಧುನಿಕವಾಗಿದೆ.

* ವಿವಿಗಳು ಹೊಸ ಕಾಲೇಜುಗಳಿಗೆ ಅನುಮತಿ, ಕೋರ್ಸುಗಳಿಗೆ ಒಪ್ಪಿಗೆಯೂ ಸೇರಿದಂತೆ ಮಾನ್ಯತೆ ನೀಡುವ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಇದರ ಮೂಲಕವೇ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT