ರಾಕೆಟ್‌ ಬುಡದಲ್ಲಿ ಮಂಗಳಾರತಿ ಮಾಡಿದರೆ ಹೇಗೆ?: ಸಿ.ಎನ್‌.ಆರ್‌.ರಾವ್‌

7
ವಿಧಾನಸೌಧದಲ್ಲಿ ನಡೆಯುವ ಹೋಮ, ಹವನಗಳಿಗೆ ಪ್ರತಿಕ್ರಿಯೆ ನೀಡಿದ ವಿಜ್ಞಾನಿ

ರಾಕೆಟ್‌ ಬುಡದಲ್ಲಿ ಮಂಗಳಾರತಿ ಮಾಡಿದರೆ ಹೇಗೆ?: ಸಿ.ಎನ್‌.ಆರ್‌.ರಾವ್‌

Published:
Updated:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆಯ 200ನೇ ಕಂತಿನಲ್ಲಿ ಮಾತನಾಡಲು ಬಂದ ವಿಜ್ಞಾನಿ ಸಿ.ಎನ್.ಆರ್.ರಾವ್ ಹಾಗೂ ಅವರ ಪತ್ನಿ ಇಂದುಮತಿ ರಾವ್ –ಪ್ರಜಾವಾಣಿ ಚಿತ್ರ

ಬೆಂಗಳೂರು: ದೇವರು, ವಸ್ತು, ವಾಹನಗಳಿಗೆ ಮಂಗಳಾರತಿ ಮಾಡುತ್ತೇವೆ ನಿಜ. ಹಾಗೆಂದು ರಾಕೆಟ್‌ ಬುಡದಲ್ಲಿ ಮಂಗಳಾರತಿ ಎತ್ತಿದರೆ ಏನಾದೀತು ಊಹಿಸಿ...

– ಇದು ಭಾರತರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರು ವಿಧಾನಸೌಧದಲ್ಲಿ ನಡೆಯುವ ವಾಸ್ತು, ಹೋಮ, ಹವನಗಳಿಗೆ ಸಂಬಂಧಿಸಿ ನೀಡಿದ ಪ್ರತಿಕ್ರಿಯೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ‘ಮನೆಯಂಗಳದಲ್ಲಿ ಮಾತುಕತೆ–200’ ಕಾರ್ಯಕ್ರಮದಲ್ಲಿ ಅವರು ಮುಕ್ತವಾಗಿ ಮಾತನಾಡಿದರು.

‘ಮೊದಲು ಈ ಜಗತ್ತಿನಲ್ಲಿ ಚೆನ್ನಾಗಿರೋಣ. ಬಳಿಕ ಅಧ್ಯಾತ್ಮದ ಜಗತ್ತಿನಲ್ಲಿಯೂ ಚೆನ್ನಾಗಿರುವುದು ಸಾಧ್ಯ. ಜಾಗತಿಕ ತಾಪಮಾನಕ್ಕಿಂತಲೂ ನಮ್ಮ ನಡುವಿನ ತಾಪಮಾನ ತಿಳಿಯಾಗಬೇಕು. ನಂಬಿಕೆ ಇರಲಿ. ಮೂಢನಂಬಿಕೆಗೆ ಏನೆನ್ನಲಿ? ಹೋಮ ಹವನದಿಂದ ಮಳೆಬರುತ್ತದೆ ಎನ್ನುವುದನ್ನು ಒಪ್ಪಲಾಗದು. ದೇವರು, ನಂಬಿಕೆ, ಹಿರಿಯರಿಗೆಗೌರವ ಕೊಡಬೇಕು’ ಎಂದುಅಭಿಪ್ರಾಯಪಟ್ಟರು.

‘ನಾನು ಜ್ಯೋತಿಷ ನೋಡಲಿಲ್ಲ. ಮದುವೆಯಾದ ಬಳಿಕ ಹೆಂಡತಿ ಕೈಯಲ್ಲಿ ಹಾಲು ಉಕ್ಕಿಸಿದ್ದೂ ಇಲ್ಲ. 58 ವರ್ಷಗಳಿಂದ ಚೆನ್ನಾಗಿಯೇ ಇದ್ದೇವೆ. ಮನೆಯಲ್ಲಿ ಚೆನ್ನಾಗಿದ್ದರೆ ನಾವು ಮಾಡುವ ಎಲ್ಲ ಕ್ಷೇತ್ರದಲ್ಲೂ ಚೆನ್ನಾಗಿ ಸಾಧನೆ ಮಾಡಲು ಸಾಧ್ಯ. ಹೀಗಾಗಿ ನಾನು ತೃಪ್ತ ಜೀವನ ನಡೆಸುತ್ತಿದ್ದೇನೆ’ ಎಂದರು.

ರಾಮನ್‌ ಸ್ಫೂರ್ತಿಯ ಮಾತುಗಳು: ‘ಆಚಾರ್ಯ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಒಮ್ಮೆ ಸರ್‌ ಸಿ.ವಿ.ರಾಮನ್‌ ಅವರು ಬಂದು ಮೇಡಂ ಕ್ಯೂರಿ ಬಗ್ಗೆ ಉಪನ್ಯಾಸ ನೀಡಿದ್ದರು. ಸಾಧನೆ ಮಾಡಿದರೆ ಹೀಗೆ ಮಾಡಬೇಕು. ನಾನೂ ಅವರಂತಾಗಬೇಕು ಎಂದು ನಿರ್ಧರಿಸಿದೆ. ಆ ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕರಿದ್ದರು. ಅದರಲ್ಲೂ ರಸಾಯನಶಾಸ್ತ್ರ ಅಧ್ಯಾಪಕರಂತೂ ಅದ್ಭುತವಾಗಿ ಪಾಠ ಹೇಳುತ್ತಿದ್ದರು.’

ಸೆಂಟ್ರಲ್‌ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದಾಗ ಮುಂದೇನು ಮಾಡುತ್ತಿ? ಎಂದು ಅಲ್ಲಿನ ರಸಾಯನಶಾಸ್ತ್ರ ಉಪನ್ಯಾಸಕರು ಕೇಳಿದರು. ನಾನು ಎಂಎಸ್‌ಸಿ ಮಾಡಬೇಕು ಅಂದೆ. ಹಾಗಿದ್ದರೆ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಮಾಡು. ಅತ್ಯುತ್ತಮ ಪತ್ರಿಕೆಗಳಲ್ಲಿ ನಿನ್ನ ಲೇಖನಗಳನ್ನು ಪ್ರಕಟಿಸಲು ಅವಕಾಶವಿದೆ ಎಂದು ಅವರು ಸಲಹೆ ನೀಡಿದರು. 

ಹಾಗಿದ್ದರೆ ನನ್ನ ಹೆಸರನ್ನು ನಾನೇ ಹಾಕಿಕೊಳ್ಳಬಹುದೇ ಎಂದು ಮುಗ್ದನಾಗಿ ಕೇಳಿದೆ. ಸಂಶೋಧನಾ ಲೇಖನಗಳಲ್ಲಿ ನನ್ನ ಹೆಸರು ಬರುತ್ತದೆ ಎಂದು ಗೊತ್ತಾಗಿದ್ದೇ ಆಗ. 1953–54ರಲ್ಲಿ ನನ್ನ ಮೊದಲ ಲೇಖನ ಪ್ರಕಟವಾಯಿತು. ಒಟ್ಟಾರೆ ವಿಜ್ಞಾನ ಓದುವವನಿಗೆ ಛಲ ಮುಖ್ಯ.

ಬಹುಮಾನಕ್ಕಾಗಿ ಕೆಲಸ ಬೇಡ: ಯಾವುದೇ ಕ್ಷೇತ್ರದಲ್ಲಿ ಬಹುಮಾನಕ್ಕಾಗಿ ಕೆಲಸ ಮಾಡಬೇಡಿ. ಒಳ್ಳೆಯ ಸಂಶೋಧನೆ ಮಾಡಿ. ಕೆಲಸದಲ್ಲಿ ತೃಪ್ತಿ ಇದ್ದರೆ ಜೀವನವೂ ಚೆನ್ನಾಗಿರುತ್ತದೆ. ಲಕ್ಷ್ಮಿಯನ್ನು ಹೇಗೆ ಬೇಕಾದರೂ ಒಲಿಸಿಕೊಳ್ಳಬಹುದು. ಸರಸ್ವತಿಯನ್ನು ಮೆಚ್ಚಿಸುವುದು ಕಷ್ಟ.

ಪೋಷಕರ ಮನಸ್ಸು ಬದಲಾಗಲಿ: ಮೂಲ ವಿಜ್ಞಾನ ಓದುವವರಿಲ್ಲದೇ ಕೋರ್ಸ್‌ಗಳು ಮುಚ್ಚುತ್ತಿವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ರಾವ್‌, ‘ಮೊದಲು ಪೋಷಕರ ಮನಸ್ಸು ಬದಲಾಗಬೇಕು. ಮಕ್ಕಳನ್ನು ಬರೀ ಎಂಜಿನಿಯರ್, ಡಾಕ್ಟರ್‌ ಮಾಡಬೇಕು ಎಂಬ ಮನೋಭಾವದಿಂದ ಒತ್ತಡ ಹೇರುತ್ತಿದ್ದಾರೆ. ಮಕ್ಕಳು ಒತ್ತಡ ತಡೆಯಲಾರದೇ ಹುಚ್ಚು ಹಿಡಿಸಿಕೊಳ್ಳುತ್ತಿದ್ದಾರೆ’ ಎಂದರು.

‘ಐ.ಟಿ ಸಿಟಿಯಲ್ಲ, ವಿಜ್ಞಾನ ನಗರ’

ಬೆಂಗಳೂರು ಅಂದರೆ ಐಟಿ ನಗರ ಅನ್ನುತ್ತಾರೆ. ವಾಸ್ತವವಾಗಿ ಅದು ವಿಜ್ಞಾನ ನಗರ. ಐಟಿಯಲ್ಲಿ ದುಡ್ಡಿದೆ. ಅದಕ್ಕಾಗಿ ಐಟಿಯನ್ನೇ ಎಲ್ಲರೂ ಕೊಂಡಾಡುತ್ತಾರೆ. ಭಾರತೀಯ ವಿಜ್ಞಾನ ಸಂಸ್ಥೆ ಇಲ್ಲಿದೆ. ಇಡೀ ದೇಶದಲ್ಲಿ ವಿಜ್ಞಾನ ಕ್ಷೇತ್ರಕ್ಕೆ
ಕರ್ನಾಟಕದಷ್ಟು ಅನುದಾನವನ್ನು ಯಾವ ರಾಜ್ಯವೂ ಕೊಡುವುದಿಲ್ಲ ಎಂದು ಪ್ರೊ.ರಾವ್‌ ಹೇಳಿದರು. ಇಂದಿನ ಜನಾಂಗದವರು ನಿಮಗಿಂತಲೂ ಬುದ್ಧಿವಂತ ರಿದ್ದಾರೆ. ಆದರೆ ಅವರನ್ನು ಬಳಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಬುದ್ಧಿವಂತ ಅಲ್ಲವಲ್ಲ’ ಎಂದು ನಕ್ಕರು.

‘ಆರನೇ ತರಗತಿವರೆಗೆ ಶಾಲೆಗೆ ಹೋಗಲಿಲ್ಲ’

ಬಸವನಗುಡಿಯಲ್ಲಿ ಕಳೆದ ಬಾಲ್ಯವನ್ನು ನೆನಪಿಸಿಕೊಂಡ ರಾವ್‌, ಅಲ್ಲಿನ ಜನ ಸುಸಂಸ್ಕೃತರು. ಸಾತ್ವಿಕ ಭಾವದವರು. ಆರನೇ ತರಗತಿವರೆಗೆ ಶಾಲೆಗೇ ಹೋಗಲಿಲ್ಲ. ಎಲ್ಲವನ್ನೂ ಮನೆಯಲ್ಲೇ ಹೇಳಿಕೊಟ್ಟರು. ಹೈಸ್ಕೂಲಿಗೆ ಸೇರಬೇಕಾದರೆ ಯಾವ ಭಾಷಾ ಮಾಧ್ಯಮಕ್ಕೆ ಸೇರಿಸುವುದು ಎಂಬ ಪ್ರಶ್ನೆ ಎದುರಾಯಿತು. ತಂದೆಯವರು ಚೆನ್ನಾಗಿ ಆಲೋಚಿಸಿ ಕೊನೆಗೂ ಕನ್ನಡ ಮಾಧ್ಯಮಕ್ಕೇ ಸೇರಿಸಿದರು. 

ವಿಜ್ಞಾನವನ್ನು ಕನ್ನಡದಲ್ಲಾದರೂ ಬೋಧಿಸಿ ಸಂಸ್ಕೃತದಲ್ಲಾದರೂ ಬೋಧಿಸಿ. ಭಾಷೆಯೊಂದು ಸಮಸ್ಯೆಯೇ ಅಲ್ಲ. ಆದರೆ ಆಧುನಿಕ ವಿಜ್ಞಾನದ ಎಲ್ಲ ಪಠ್ಯಗಳು ಇಂಗ್ಲಿಷ್‌ನಲ್ಲೇ ಇವೆ ಎಂದರು.

* ದೇಶದಲ್ಲಿ ಕೋಟ್ಯಂತರ ಮಕ್ಕಳಿದ್ದಾರೆ. ಅವರಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ, ಕಲಿಸುವ ಮೇಷ್ಟ್ರುಗಳಲ್ಲಿಯೇ ಸಮಸ್ಯೆ ಇದೆ

–ಪ್ರೊ.ಸಿ.ಎನ್.ಆರ್. ರಾವ್‌

ಬರಹ ಇಷ್ಟವಾಯಿತೆ?

 • 89

  Happy
 • 4

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !