ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತ ‘ಕೈ’ ಶಾಸಕರ ನೆಲೆ ಇನ್ನೂ ನಿಗೂಢ

ಬಿಜೆಪಿ ತೆಕ್ಕೆಯಲ್ಲಿರುವ ಶಂಕೆ: ‘ಮಿತ್ರ’ ಪಕ್ಷಗಳ ಕಳವಳ
Last Updated 2 ಫೆಬ್ರುವರಿ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ತೆಕ್ಕೆಯಲ್ಲಿದ್ದಾರೆ ಎನ್ನಲಾಗಿರುವ ಕೈ ಪಾಳಯದ ಐವರುಅತೃಪ್ತ ಶಾಸಕರು ಇನ್ನೂ ನಿಗೂಢ ನೆಲೆಯಲ್ಲಿ ವಾಸ್ತವ್ಯ ಹೂಡಿರುವುದು ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಕಳವಳಕ್ಕೆ ಕಾರಣವಾಗಿದೆ.

ವಿಧಾನಮಂಡಲ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರುವರಿ 6ರಂದು ಮಿತ್ರಪಕ್ಷಗಳ ಜಂಟಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಚಿಂತನೆಯೂ ನಡೆದಿದೆ. ಸುಮಾರು 20 ದಿನಗಳಿಂದ ಕಾಂಗ್ರೆಸ್‌ ನಾಯಕರ ಸಂಪರ್ಕದಿಂದ ಅಂತರ ಕಾಯ್ದುಕೊಂಡಿರುವ ಅತೃಪ್ತರ ಗುಂಪು, ಬಿಜೆಪಿ ನಾಯಕರು ಹೆಣೆದಿರುವ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಬಜೆಟ್ ಅಧಿವೇಶನದ ಹೊತ್ತಿಗೆ ಸರ್ಕಾರಕ್ಕೆ ‘ತಲೆನೋವು’ ತರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

ಜನವರಿಯಲ್ಲಿ ನಡೆದ ಸಂಕ್ರಾಂತಿ ಹೊತ್ತಿಗೆ ಮೈತ್ರಿ ಸರ್ಕಾರ ಪತನಗೊಳಿಸುವ ಉಮೇದಿನಲ್ಲಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್‌ ಶಾಸಕರನ್ನು ಸೆಳೆದಿದ್ದರು. ಈ ಪೈಕಿ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಉಮೇಶ ಜಾಧವ, ಬಿ. ನಾಗೇಂದ್ರ ಅವರೆಲ್ಲರನ್ನೂ ಮುಂಬೈನ ಹೋಟೆಲ್‌ನಲ್ಲಿ ‘ಕೂಡಿ’ ಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದರು. ಅವರೆಲ್ಲರನ್ನೂ ಹೊರಗೆ ಬರುವಂತೆ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನು ಸಿದ್ದರಾಮಯ್ಯ ಕರೆದಿದ್ದರು. ನಾಯಕತ್ವಕ್ಕೆ ಸಡ್ಡು ಹೊಡೆದಿದ್ದ ಅತೃಪ್ತರು ಸಭೆಗೆ ಗೈರಾಗಿದ್ದರು. ವಿವರಣೆ ಕೇಳಿ ನೀಡಿದ ನೋಟಿಸ್‌ಗೆ ಉತ್ತರ ನೀಡಿದ್ದರು. ‘ಖುದ್ದಾಗಿ ಬಂದು ಭೇಟಿ ಮಾಡಬೇಕು’ ಎಂದು ಮತ್ತೊಂದು ನೋಟಿಸ್‌ ನೀಡಿ ವಾರ ಕಳೆದರೂ ಯಾವೊಬ್ಬ ಶಾಸಕನೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ.

ಈ ಬೆಳವಣಿಗೆಗಳ ಬೆನ್ನಲ್ಲೇ ಶಾಸಕರ ಮಧ್ಯೆ ನಡೆದ ‘ಬಳ್ಳಾರಿ ಜಗಳ’ದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಹೊಸಪೇಟೆ(ವಿಜಯನಗರ) ಶಾಸಕ ಆನಂದ್‌ ಸಿಂಗ್‌ ಮೇಲೆ ಭೀಕರ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದಾರೆ. ಗಣೇಶ್ ಕೂಡ ಅತೃಪ್ತ ಗುಂಪು ಸೇರಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಯತ್ನ ಬಿಡದ ಬಿಜೆಪಿ: ಅತೃಪ್ತ ಶಾಸಕರ ಜತೆಗೆ ಇನ್ನೂ ಏಳೆಂಟು ಮಂದಿಯನ್ನು ಸೇರಿಸಿಕೊಂಡು ಮೈತ್ರಿ ಸರ್ಕಾರ ಪತನಗೊಳಿಸುವ ಲೆಕ್ಕಾಚಾರ ಬಿಜೆಪಿಯದ್ದು. ಅಧಿವೇಶನದ ಹೊತ್ತಿಗೆ ಶಾಸಕರ ರಾಜೀನಾಮೆ ಕೊಡಿಸುವುದು ನಾಯಕರ ಚಿಂತನೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಜೆಟ್ ಅನುಮಾನ: ಅಶೋಕ್‌
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸುವುದು ಅನುಮಾನ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇಲೆ ವಿಶ್ವಾಸವಿಲ್ಲದ ಕೆಲವು ಶಾಸಕರು ಇವರ ಕೈಗೆ ಸಿಗದೇ ಓಡಾಡುತ್ತಿದ್ದಾರೆ. ಅವರೇನಾದರೂ ಬೆಂಬಲ ವಾಪಸ್‌ ಪಡೆದರೆ ಸರ್ಕಾರ ರಚನೆಗೆ ಮುಂದಾ
ಗುತ್ತೇವೆ. ಹಾಗೆಂದು ಸರ್ಕಾರದ ಪತನಕ್ಕೆ ಮುಂದಾಗುವುದಿಲ್ಲ’ ಎಂದರು.

ಪುಟ್ಟರಾಜು- ರೇಣುಕಾಚಾರ್ಯ ಭೇಟಿ
ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರನ್ನು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

‘ಕಾಂಗ್ರೆಸ್ ಜತೆಗಿನ ಮೈತ್ರಿಗಿಂತ ಹಿಂದೆ ಬಿಜೆಪಿ ಜತೆಗೆ ಸರ್ಕಾರ ರಚಿಸಿದಾಗ ಕೃಷ್ಣದೇವರಾಯರ ಕಾಲದ ಆಡಳಿತ ನೀಡಲು ಸಾಧ್ಯವಾಗಿತ್ತು’ ಎಂದು ಪುಟ್ಟರಾಜು ಇತ್ತೀಚೆಗೆ ಹೇಳಿದ್ದರು. ಈ ಬೆನ್ನಲ್ಲೇ, ಕಮಲ ಪಕ್ಷದ ಶಾಸಕರನ್ನು ಭೇಟಿಯಾಗಿರುವುದು ವದಂತಿಗಳಿಗೆ ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT