ಗುರುವಾರ , ಡಿಸೆಂಬರ್ 3, 2020
20 °C

ಕರಾವಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ; ಕಾವೇರಿ ತೀರದಲ್ಲಿ ಪ್ರವಾಹದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ಬೆಳಿಗ್ಗೆ ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುರ್ತು ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.

‘ಮುಂದಿನ 24 ಗಂಟೆಗಳ ಕಾಲ ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಸಮುದ್ರ ಅಥವಾ ನದಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು. ತಗ್ಗು ಪ್ರದೇಶ ಮತ್ತು ನದಿ ತೀರದಲ್ಲಿ ವಾಸಿಸುತ್ತಿರುವ ಜನರು ಪ್ರವಾಹ ಸ್ಥಿತಿ ಇರುವ ತಗ್ಗು ಪ್ರದೇಶ ಅಥವಾ ನದಿಗೆ ತೆರಳಬಾರದು. ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಿದ್ದು,  ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶ ಅಥವಾ ನದಿ ತೀರಕ್ಕೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಗೆ ಮಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1077ಗೆ ಕರೆಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
**
ಕೆಆರ್‌ಎಸ್‌ನಿಂದ 1 ಲಕ್ಷ ಕ್ಯೂಸೆಕ್ ನೀರು ನದಿಗೆ
ಮಂಡ್ಯ:
ಕಾವೇರಿ ಕಣಿವೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ  ಹೆಚ್ಚಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ.

ಮಂಗಳವಾರ ಮಧ್ಯಾಹ್ನ ವೇಳೆಗೆ 1.20 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**
ಉಡುಪಿ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕಾರ್ಕಳ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿಗೆ ಹಾಕಿದ್ದ ಹೆಂಚುಗಳು ಹಾರಿಹೋಗಿವೆ. ಶಾಲೆಯ ಗೋಡೆ ಕುಸಿದುಬಿದ್ದಿದೆ.

ಉಡುಪಿಯ ಮಲ್ಪೆ ಕಡಲ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಬೋಟ್‌ಗಳು ತೀರಕ್ಕೆ ವಾಪಾಸಾಗಲು ಸಾಧ್ಯವಾಗುತ್ತಿಲ್ಲ. ಕಡಲು ಪ್ರಕ್ಷುಬ್ಧಗೊಂಡಿದ್ದು ಬಂದರಿನಲ್ಲಿ ಲಂಗರು ಹಾಕಿದ್ದ ಹಲವು ಬೋಟ್‌ಗಳು ಮಗುಚಿಕೊಂಡಿವೆ. ಬೋಟ್‌ಗಳಿಗೆ ಅಳವಡಿಸಲಾಗಿದ್ದ ಯಂತ್ರಗಳು ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
 


ಕಾರ್ಕಳ ತಾಲ್ಲೂಕಿನ ಸರ್ಕಾರಿ ಶಾಲೆ

***
ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ– ಅಪಾರ ಹಾನಿ: ಚಿನ್ನಿಗಾ ಸರ್ಕಾರಿ ಶಾಲೆಯ ಕೊಠಡಿ ನೆಲಸಮ​

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಜನ್ನಾಪುರ ಗ್ರಾಮದ ಚಿನ್ನಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಪೂರ್ಣ ಕುಸಿದಿದೆ.

7ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದ್ದು, ಮಂಗಳವಾರ ಶಾಲೆಗೆ ರಜೆ ಇದ್ದಿದ್ದರಿಂದ ಬಾರಿ ದುರಂತ ತಪ್ಪಿದಂತಾಗಿದೆ ಎಂದು ಹಳೆ ವಿದ್ಯಾರ್ಥಿ ಜಯಪಾಲ್ ತಿಳಿಸಿದರು.

ಮಳೆಯಿಂದ ಹೆಸ್ಗಲ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ನಿನ್ನೆ ರಾತ್ರಿಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಕಳಸದ ಕೆ.ಎಂ.ರಸ್ತೆಯಲ್ಲಿರುವ ಸದಾನಂದ ಅವರ ಹೆಂಚಿನ ಮನೆ ಮಳೆಗೆ ಧರಾಶಾಯಿಯಾಗಿದೆ. ಹಲವೆಡೆ ತೋಟಕ್ಕೆ ಪ್ರವಾಹ ನುಗ್ಗಿ, ಬೆಳೆಗೆ ಹಾನಿಯಾಗಿದೆ.

ಎನ್‌.ಆರ್‌.ಪುರ ತಾಲ್ಲೂಕಿನ ಶಂಕರಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ದುರ್ಗಾಂಬ ಬಸ್‌ ಹಳ್ಳ ದಾಟುವಾಗ ಎಂಜಿನಿಗೆ ನೀರು ಹೋಗಿ, ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಟಬೇಕಾಯಿತು. ಬಸ್‌ ಬೆಂಗಳೂರಿನತ್ತ ಸಾಗುತ್ತಿತ್ತು.
 


ಮೂಡಿಗೆರೆ ತಾಲ್ಲೂಕಿನಲ್ಲಿ ನೆಲಸಮವಾದ ಚೆನ್ನಿಗ ಸರ್ಕಾರಿ ಶಾಲೆ

**
 


ಕಳಸದಲ್ಲಿ ಮಳೆಗೆ ಪ್ರವಾಹ ಬಂದು ಬೆಳೆಗೆ ಹಾನಿಯಾಗಿದೆ

ಹೊಸಪೇಟೆ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ. ಶನಿವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಸೋಮವಾರ ಸ್ವಲ್ಪ ಬಿಡುವು ನೀಡಿತ್ತು. ಮಂಗಳವಾರ ಬೆಳಿಗ್ಗೆ ಆರರಿಂದಲೇ ವರ್ಷಧಾರೆಯಾಗುತ್ತಿದ್ದು, ಶಾಲಾ-ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರಿಗೆ ತೊಂದರೆ ಆಯಿತು.

ಸ್ವಾತಂತ್ರ್ಯ ದಿನದ ಅಂಗವಾಗಿ ಬುಧವಾರ ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಲಿದ್ದು, ಅದಕ್ಕಾಗಿ ನಡೆಯುತ್ತಿದ್ದ ಸಿದ್ಧತಾ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಲಿದ್ದು, ಅಂತಿಮ ಹಂತದ ಸಿದ್ಧತಾ ಕೆಲಸಗಳು ಮಳೆಯ ನಡುವೆಯೇ ಮುಂದುವರಿದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು