ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಅಜಯಸಿಂಗ್‌ಗೆ ತಪ್ಪಿದ ಸಚಿವ ಸ್ಥಾನ, ವಿಷ ಸೇವಿಸಿದ ಅಭಿಮಾನಿ ಅಸ್ವಸ್ಥ

Last Updated 22 ಡಿಸೆಂಬರ್ 2018, 10:14 IST
ಅಕ್ಷರ ಗಾತ್ರ

ಜೇವರ್ಗಿ: ಮತಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಾ.ಅಜಯಸಿಂಗ್ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಇಲ್ಲಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಅವರ ಬೆಂಬಲಿಗ ಮುಜೀಮ್ ಜೇವರ್ಗಿ (ಕೆ) ಎಂಬುವವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.

ಹುಮನಾಬಾದ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ–218ರಲ್ಲಿರುವ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಮಧ್ಯಾಹ್ನ 12ರ ಸುಮಾರಿಗೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ ನಡೆಸಿದರು.

ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಪಾಟೀಲ ಇಟಗಿ ಮಾತನಾಡಿ, ‘ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಧರ್ಮಸಿಂಗ್ ಅವರ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಅವರ ಪುತ್ರ ಶಾಸಕ ಡಾ.ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಭರವಸೆ ಕಾರ್ಯಕರ್ತರಲ್ಲಿತ್ತು. ಆದರೆ ಡಾ.ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ಹೈಕಮಾಂಡ್ ತಂದೆ ತೀರಿದ ಮಗನಿಗೆ ಅನ್ಯಾಯ ಮಾಡಿದೆ’ ಎಂದರು.

ಡಾ.ಅಜಯ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡದೆ ಕ್ಷೇತ್ರದ ಜನತೆಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ. ಅವರನ್ನು ದೆಹಲಿಗೆ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿರುವುದು ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ’ ಎಂದು ಅವರು ದೂರಿದರು.

ಒಂದು ಗಂಟೆ ಹೆದ್ದಾರಿ ತಡೆ

ಸುಮಾರು ಒಂದು ಗಂಟೆ ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ಶಾಂತಿ, ಸುವ್ಯವಸ್ಥೆ ಕಾಪಾಡಲು ಸಿಪಿಐ ಡಿ.ಬಿ.ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರು ಸೊನ್ನ ಕ್ರಾಸ್ ಮತ್ತು ಚಿಗರಳ್ಳಿ ಕ್ರಾಸ್ ಬಳಿ ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT