ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ನೀಡಿಕೆ ದಿನಾಂಕದಲ್ಲಿ ಗೋಲ್‌ಮಾಲ್‌?

ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಗೋಳು
Last Updated 15 ನವೆಂಬರ್ 2019, 23:41 IST
ಅಕ್ಷರ ಗಾತ್ರ

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರಿಗೆ ಹಿರಿಯ ವೇತನ ಶ್ರೇಣಿಯಿಂದ ಆಯ್ಕೆ ವೇತನ ಶ್ರೇಣಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸುವಾಗ ಪದೋನ್ನತಿ ಹೊಂದಿದ ದಿನಾಂಕ, ತಿಂಗಳು, ವರ್ಷವನ್ನು ಒಂದೇ ತೆರನಾಗಿ ನಮೂದಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2006, 2007 ಮತ್ತು 2008ರಲ್ಲಿ ವಿವಿಧ ದಿನಾಂಕಗಳಂದು ಉಪನ್ಯಾಸಕರು ನೇಮಕಗೊಂಡಿದ್ದರು. ಇವರಿಗೆಲ್ಲ 2015, 2016 ಮತ್ತು 2017ನೇ ಸಾಲಿನಲ್ಲಿ ಪದೋನ್ನತಿ ನೀಡಿ ಆದೇಶ ಹೊರಡಿಸಬೇಕಿತ್ತು. ವಿಳಂಬವಾಗಿ ಆದೇಶ ಹೊರಡಿಸಿದ ಮೇಲೂ ಹಲವರಿಗೆ ಒಂದೇ ದಿನಾಂಕ ನೀಡಲಾಗಿದೆ. ವಿಶೇಷವೆಂದರೆ ಇವರೆಲ್ಲರ ನೇಮಕಾತಿಯಲ್ಲಿ ಒಂದರಿಂದ ಆರು ತಿಂಗಳವರೆಗೆ ಅಂತರವಿದೆ.

ಈ ಉಪನ್ಯಾಸಕರ ಹುದ್ದೆ ಗ್ರೂಪ್‌–ಎ (ಪತ್ರಾಂಕಿತ ಅಧಿಕಾರಿ) ವರ್ಗಕ್ಕೆ ಸೇರುತ್ತದೆ. ಹೀಗಾಗಿ ಯುಜಿಸಿ ವೇತನ ಶ್ರೇಣಿ ವಿಸ್ತರಿಸಿರುವ ದಿನಾಂಕಕ್ಕೂ, ಅಕಾಡೆಮಿಕ್‌ ಪೇ ಗ್ರೇಡ್‌ (ಎಜಿಪಿ) ಅರ್ಹತಾ ದಿನಾಂಕಕ್ಕೂ ಕನಿಷ್ಠ 5 ವರ್ಷ ಅಂತರ ಇರಬೇಕು ಎಂಬ ನಿಯಮ ಇದೆ. ಆದರೆ ಹಲವರಿಗೆ ಒಂದು, ಎರಡು, ಮೂರು ವರ್ಷಗಳಲ್ಲಿ ಎಜಿಪಿ ಅರ್ಹತೆ ನೀಡಿದ್ದು ಸಹ ಇದೇ 11ರಂದು ಕಾಲೇಜು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯವರು ಹೊರಡಿಸಿದ ಸುತ್ತೋಲೆಯಲ್ಲಿ ಕಂಡುಬಂದಿದೆ.

ಈ ಸುತ್ತೋಲೆಯ ಉಲ್ಲೇಖಗಳು ರಾಜ್ಯಪತ್ರದಲ್ಲಿ ಸೇರಿಬಿಟ್ಟರೆ ತಪ್ಪು ಮತ್ತು ಅನ್ಯಾಯ ಶಾಶ್ವತವಾಗಿ ಉಳಿದಂತಾಗುತ್ತದೆಎಂದು ಹಲವು ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕಾಲೇಜು ಶಿಕ್ಷಣ ನಿರ್ದೇಶನಾಲಯದಿಂದ ತಪ್ಪಾಗಿಲ್ಲ. ಉನ್ನತ ಶಿಕ್ಷಣ ಇಲಾಖೆಯಿಂದ ಈ ತಪ್ಪು ಆಗಿರಬಹುದು. ರಾಜ್ಯಪತ್ರಕ್ಕೆ ಹೋಗುವ ಮುನ್ನ ಈ ತಪ್ಪನ್ನು ಸರಿಪಡಿಸಿ ತಿದ್ದುಪಡಿ ಸುತ್ತೋಲೆಯನ್ನು ಹೊರಡಿಸಲಾಗುವುದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

*
ತಕ್ಷಣ ತಿದ್ದುಪಡಿ ಆದೇಶ ಹೊರಡಿಸಬೇಕು, ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸಲು ಕೂಡಲೇ ಅಧಿಕಾರಿಗಳು ಮತ್ತು ಸಂಘದ ಪದಾಧಿಕಾರಿಗಳ ಸಭೆ ಕರೆಯಬೇಕು.
-ಡಾ.ಟಿ.ಎಂ.ಮಂಜುನಾಥ್‌, ಅಧ್ಯಕ್ಷರು, ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT