ಭಾನುವಾರ, ಸೆಪ್ಟೆಂಬರ್ 15, 2019
23 °C
ವಾಣಿಜ್ಯ ಲೆಕ್ಕಪತ್ರ‌ಕ್ಕಷ್ಟೆ ಸೀಮಿತವಾಗಿ ಉಳಿದಿಲ್ಲ: ಸ್ನಾತಕೋತ್ತರ ಪದವಿ ಗಳಿಸಲು ಬೇಕಿರುವುದು ಗರಿಷ್ಠ ₹2 ಲಕ್ಷ

ಕಡಿಮೆ ಖರ್ಚು: ಅಧಿಕ ಸಂಪಾದನೆ

Published:
Updated:

ಬೆಂಗಳೂರು: ವಾಣಿಜ್ಯ (ಕಾಮರ್ಸ್‌) ತೆಗೆದುಕೊಂಡರೆ ಉದ್ಯೋಗಾವಕಾಶ ಅಧಿಕ ಎಂಬ ಮಾತು ಇದೀಗ ಕೇಳಿಬರುತ್ತಿದೆ. ಅಧ್ಯಯನ ವ್ಯಾಪ್ತಿ ಬಹಳ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದ್ದೇ ಈ ವಿದ್ಯಮಾನಕ್ಕೆ ಕಾರಣ.

ಎಸ್ಸೆಸ್ಸೆಲ್ಸಿ ಮುಗಿಸಿದವರು ಯೋಚಿಸಲೇಬೇಕಾದ ಸಮಯ ಇದು. ಪಿಯು ಕಾಲೇಜು ಸೇರುವ ಧಾವಂತದಲ್ಲಿರುವವರು ವಾಣಿಜ್ಯ ವಿಭಾಗವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಕಾರಣ ಇಲ್ಲಿದೆ.

ವಾಣಿಜ್ಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಲು ಬೇಕಾಗಿರುವುದು ಗರಿಷ್ಠ ₹2 ಲಕ್ಷ. ಆದರೆ ಗಳಿಸಬಹುದಾದ ವೇತನ ತಿಂಗಳಿಗೆ 24 ಲಕ್ಷಕ್ಕಿಂತಲೂ ಅಧಿಕ! ಸಾಂಪ್ರದಾಯಿಕ ಸಿಎ, ಐಸಿಡಬ್ಲ್ಯುಎ, ಎಸಿಎಸ್‌ ಜತೆಗೆ ಇನ್ನಷ್ಟು ಕ್ಷೇತ್ರಗಳಲ್ಲಿ ಇಂದು ವಾಣಿಜ್ಯ ಪದವೀಧರರು ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ. ಅದಕ್ಕೆ ಕಾರಣ ಕೆಲವು ಹೊಸ ಕೋರ್ಸ್‌ಗಳ ಸೇರ್ಪಡೆ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರೂ ಆಗಿದ್ದ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಪಿ.ಎಸ್‌. ಯಡಪಡಿತ್ತಾಯ.

ಉದ್ಯಮ, ವ್ಯವಹಾರ, ಹಣಕಾಸು, ನಿರ್ವಹಣೆಯಂಥ ವಿಚಾರಗಳಲ್ಲಿ ಪ್ರಬಲವಾದ ಬುನಾದಿ ಹೊಂದಿರುವವರು ವಾಣಿಜ್ಯ ಓದಿದವರು. ಆರಂಭದಿಂದಲೂ ಇದೇ ವಿಷಯದಲ್ಲಿ ಕೂಲಂಕಷ ಶಿಕ್ಷಣ ನೀಡಿರುವುದರಿಂದ ಪಿಯುಸಿ ಮುಗಿದು ಬಿ.ಕಾಂ ಆಗುವಾಗಲೇ ಪರಿಪೂರ್ಣ ವೃತ್ತಿಪರರಾಗುತ್ತಾರೆ. ಎಂ.ಕಾಂ ಮಾಡಿದಾಗ ಅದು ಇನ್ನಷ್ಟು ಪ್ರಖರವಾಗುತ್ತದೆ. ಹಾಗಿದ್ದರೂ ಎಂ.ಕಾಂ ಎಂದರೆ ಯಡಪಡಿತ್ತಾಯರ ಪ್ರಕಾರ ‘ಮಾಸ್ಟರ್‌ ಆಫ್‌ ಕಾಮರ್ಸ್ ಅಲ್ಲ, ಮೆಚ್ಯುಚರಿಟಿ ಇನ್‌ ಕಾಮರ್ಸ್‌’.

ಹಿಂದೆ ಬಿ.ಕಾಂ ಮಾಡಿದವರಿಗೆ ಬಿ.ಇಡಿ ಮಾಡುವ ಅವಕಾಶ ಇರಲಿಲ್ಲ. ಈಗ ಇದೆ. ಹೀಗಾಗಿ ವಾಣಿಜ್ಯ ಓದಿದವರು ಪ್ರೌಢಶಾಲಾ ಶಿಕ್ಷಕರೂ ಆಗಬಹುದು. ಎಂ.ಕಾಂ ಜತೆಗೆ ಡ್ಯುಯಲ್‌ ಸ್ಪೆಷಲೈಸೇಷನ್‌ ಮಾಡಬಹುದು. ಎಂ.ಕಾಂ–ಎಚ್‌ಆರ್‌, ಎಂ.ಕಾಂ–ಫೈನಾನ್ಸ್‌ನಂತಹ ಸ್ನಾತಕೋತ್ತರ ಪದವಿ ಉದ್ಯೋಗದ ಅವಕಾಶವನ್ನು ಹೆಚ್ಚಿಸಿಬಿಟ್ಟಿದೆ.

ಹಲವು ಕಾಲೇಜುಗಳಲ್ಲಿ ಇಂದು ಸಿಎ ಕೋಚಿಂಗ್‌ ಸಹ ಸೇರಿಕೊಂಡಿದೆ. ಹೀಗಾಗಿ ಬಿ.ಕಾಂ ಮಾಡಿದಾಗಲೇ ಸಿಎಗೂ ಅಡಿಪಾಯ ಗಟ್ಟಿಯಾಗಿಬಿಟ್ಟಿರುತ್ತದೆ. ಸಿಎ ಮಾಡಿದವರಿಗೆ ಐಸಿಡಬ್ಲ್ಯುಎ ಮಾಡುವುದು ಸುಲಭ. ಏಕೆಂದರೆ ಕೆಲವೊಂದು ಪತ್ರಿಕೆಗಳ ರಿಯಾಯಿತಿ ಸಿಗುತ್ತದೆ. ಎಸಿಎಸ್‌ ಮಾಡುವವರಿಗೆ ಕಂಪನಿ ಕಾನೂನಿನ ಅರಿವಿದ್ದರೆ ಅನುಕೂಲ. ಪಿಯು ಮುಗಿಸಿದೊಡನೆ ಫೌಂಡೇಶನ್‌ ಪರೀಕ್ಷೆಯಲ್ಲಿ ಪಾಸಾಗಿಬಿಟ್ಟರೆ ಸಿಎ ಪರೀಕ್ಷೆಗೇ ಕುಳಿತುಕೊಳ್ಳಬಹುದು. ಜಿಎಸ್‌ಟಿ ಜಾರಿಗೆ ಬಂದ ನಂತರ ಬಿ.ಕಾಂ ಪದವೀಧರರಿಗೆ ಬೇಡಿಕೆ ಬಹಳವಾಗಿದೆ.

ನಾವೆಲ್ಲ ತಿಳಿದಿರುವಂತೆ ವಾಣಿಜ್ಯ ಓದಿದವರು ಬ್ಯಾಂಕಿಂಗ್‌, ವಿಮೆ, ಉಪನ್ಯಾಸಕ, ಅಕೌಂಟೆಂಟ್‌, ಅಕೌಂಟೆಂಟ್‌ ಎಕ್ಸಿಕಿಟೀವ್‌, ಚಾರ್ಟರ್ಡ್‌ ಅಕೌಂಟೆಂಟ್‌, ಕಂಪನಿ ಸೆಕ್ರೆಟರಿ, ಕಾಸ್ಟ್‌ ಅಕೌಂಟೆಂಟ್‌, ಫೈನಾನ್ಸ್‌ ಅನಾಲಿಸಿಸ್ಟ್‌, ಫೈನಾನ್ಸ್‌ ಪ್ಲಾನರ್‌, ಫೈನಾನ್ಸ್‌ ಮ್ಯಾನೇಜರ್‌, ಫೈನಾನ್ಸ್‌ ಕಂಟ್ರೋಲರ್‌, ಫೈನಾನ್ಸ್‌ ಕನ್‌ಸಲ್ಟೆಂಟ್‌, ಇನ್‌ವೆಸ್ಟ್‌ಮೆಂಟ್‌ ಅನಾಲಿಸ್ಟ್‌, ಸ್ಟಾಕ್‌ ಬ್ರೋಕರ್‌, ಪೋರ್ಟ್‌ಪೋಲಿಯೊ ಮ್ಯಾನೇಜರ್‌, ಟ್ಯಾಕ್ಸ್‌ ಆಡಿಟರ್‌, ಟ್ಯಾಕ್ಸ್‌ ಕನ್ಸಲ್ಟೆಂಟ್‌, ಆಡಿಟರ್‌, ಲೆಕ್ಕಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ.. ಹೀಗೆ ನಾನಾ ಕ್ಷೇತ್ರಗಳಲ್ಲಿ ಪರಿಣಿತರಾಗಬಹುದು.

ಆದರೆ, ಕ್ಷೇತ್ರ ಇನ್ನೂ ದೊಡ್ಡದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಸಿಕ 24 ಲಕ್ಷಕ್ಕೂ ಅಧಿಕ ಸಂಬಳ ತರುವ ಉದ್ಯೋಗವೂ ಇದೆ.

ತೆರಿಗೆ ಸಲಹೆಗಾರರಿಗೆ ಶುಕ್ರದೆಸೆ

ತೆರಿಗೆ ಸಲಹೆಗಾರರು (ಟ್ಯಾಕ್ಸ್‌ ಕನ್ಸಲ್ಟೆಂಟ್ಸ್‌) ಇಂದು ಗಳಿಸುವ ಆದಾಯವನ್ನು ನಿರ್ದಿಷ್ಟವಾಗಿ ತಿಳಿಸುವುದು ಕಷ್ಟ. ಒಂದು ರೀತಿಯಲ್ಲಿ ಇದೊಂದು ಇಂದಿನ ಬಹು ಬೇಡಿಕೆಯ ಸೇವೆ. ‘ತೆರಿಗೆ ನಿವಾರಣೆ ಕಾನೂನುಬದ್ಧ, ತೆರಿಗೆ ವಂಚನೆ ಮಾತ್ರ ಕಾನೂನುಬಾಹಿರ’ ಎಂಬ ಒಂದೇ ಒಂದು ಸಾಲಿನಲ್ಲಿ ಈ ವೃತ್ತಿಯ ಸಂಪೂರ್ಣ ಚಿತ್ರಣ ಇದೆ. ತರಿಗೆಯನ್ನು ಕಾನೂನುಬದ್ದವಾಗಿ ನಿವಾರಿಸುವ ಅಥವಾ ಕಡಿಮೆಗೊಳಿಸುವ ಸಲಹೆಗಾರರಿಗೆ ಇಂದು ಬಹಳ ಬೇಡಿಕೆ ಇದೆ.

ಸ್ವಂತ ಉದ್ಯೋಗಕ್ಕೆ ಧೈರ್ಯ

ಸ್ವಂತ ಉದ್ಯೋಗ ಆರಂಭಿಸುವುದಾದರೆ ಎಲ್ಲಿ ಸಾಲ ಪಡೆಯಬಹುದು, ಹಣ ಹೇಗೆ ಖರ್ಚು ಮಾಡಬಹುದು ಎಂಬುದು ಸ್ವಂತ ಉದ್ಯೋಗದ ಪ್ರಮುಖ ಅಂಶ. ಕಾಮರ್ಸ್‌ ಓದಿದವರಿಗೆ ಆರಂಭದಿಂದಲೂ ಹೇಳಿಕೊಟ್ಟಿರುವ ವಿಷಯ ಇದೇ. ಬುನಾದಿ ಬಹಳ ಸುಸ್ಥಿರವಾಗಿರುವುದರಿಂದ ಸ್ವಂತ ಉದ್ಯೋಗ ಮಾಡುವ ಧೈರ್ಯ ಇವರಿಗೆ ಇರುವಷ್ಟು ಇತರರಿಗೆ ಇರುವುದಿಲ್ಲ.

ಕೈತುಂಬ ಸಂಬಳ ತರುವ ಉದ್ಯೋಗ

ವಾಣಿಜ್ಯ ಕ್ಷೇತ್ರದ ವ್ಯಾಸಂಗ; ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸರಾಸರಿ ಮಾಸಿಕ ವೇತನ (₹ಲಕ್ಷಗಳಲ್ಲಿ)

ಸಿ.ಎ; 20

ಎಂ.ಕಾಂ; 5

ಎಂ.ಬಿ.ಎ; 10

ಸರ್ಟಿಫೈಡ್‌ ಮ್ಯಾನೇಜ್‌ಮೆಂಟ್‌ ಅಕೌಂಟೆಂಟ್‌; 8

ಚಾರ್ಟರ್ಡ್‌ ಫೈನಾನ್ಸ್‌ ಅನಾಲಿಸ್ಟ್‌; 18

ಯುಎಸ್‌ ಸರ್ಟಿಫೈಡ್‌ ಪಬ್ಲಿಕ್‌ ಅಕೌಂಟಿಂಗ್‌; 20

ಫೈನಾನ್ಸಿಯಲ್‌ ರಿಸ್ಕ್‌ ಮ್ಯಾನೇಜರ್‌; 18

ಅಸೋಸಿಯೇಶನ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌; 16

ಬಿಸಿನೆಸ್‌ ಅಕೌಂಟಿಂಗ್‌ ಆಂಡ್‌ ಟ್ಯಾಕ್ಸೇಷನ್‌; 10

ಡಿಜಿಟಲ್‌ ಮಾರ್ಕೆಟಿಂಗ್‌; 8

ಫೈನಾನ್ಸಿಯಲ್‌ ಮಾಡೆಲಿಂಗ್‌; 12

ಸರ್ಟಿಫಿಕೇಟ್‌ ಇನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌; 24

 

Post Comments (+)