ಶನಿವಾರ, ಸೆಪ್ಟೆಂಬರ್ 21, 2019
24 °C
ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಮಹತ್ವದ ತೀರ್ಪು

ಎರಡನೇ ಪತ್ನಿ ಮಕ್ಕಳೂ ಅನುಕಂಪ ಆಧಾರಿತ ನೌಕರಿಗೆ ಅರ್ಹ

Published:
Updated:
Prajavani

ಬೆಂಗಳೂರು: ‘ಎರಡನೇ ಪತ್ನಿಯ ಮಕ್ಕಳು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

‘ಎರಡನೇ ಪತ್ನಿಯ ಮಗನಿಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂಬ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆದೇಶ ಪ್ರಶ್ನಿಸಿ ವಿ.ಲೋಹಿತ್‌ ಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳ 25ರಂದು ಮಾನ್ಯ ಮಾಡಿದೆ.

ಪ್ರಕರಣವೇನು?: ‘ನನ್ನ ತಂದೆ ಎಚ್‌.ವರದೇಗೌಡ ಬಿಡಿಎ ಕಚೇರಿಯಲ್ಲಿ ಮೂಲಸೌಕರ್ಯ–2ರ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು 2013ರ ಜನವರಿ 26ರಂದು ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ವಿಚ್ಛೇದನ ಪಡೆದಿದ್ದಾರೆ. ನಾನು ಎರಡನೇ ಪತ್ನಿಯ ಮಗ. ನನಗೊಬ್ಬಳು  ಒಡಹುಟ್ಟಿದ ಸಹೋದರಿ ಇದ್ದಾಳೆ. ತಾಯಿಯೂ ನಮ್ಮ ಜೊತೆಗಿದ್ದಾರೆ. ನನಗೀಗ 23 ವರ್ಷ. ತಾಯಿಗೆ ಉದ್ಯೋಗವಿಲ್ಲ. ನನಗೆ  ಅನುಕಂಪದ ಆಧಾರದಲ್ಲಿ  ಕೊಡಬೇಕು’ ಎಂದು 2013ರ ಮಾರ್ಚ್‌ 16ರಂದು ಬಿಡಿಎ ಆಯುಕ್ತರಿಗೆ ಮನವಿ ಮಾಡಿದ್ದೆ’ ಎಂದು ಲೋಹಿತ್‌ ಗೌಡ ರಿಟ್‌ ಅರ್ಜಿಯಲ್ಲಿ ವಿವರಿಸಿದ್ದರು.

ಆದರೆ, ಈ ಮನವಿಯನ್ನು ತಿರಸ್ಕರಿಸಲಾಗಿತ್ತು. ‘ರಾಜ್ಯ ಸರ್ಕಾರ 2015ರ ಆಗಸ್ಟ್‌ 28ರಂದು ಹೊರಡಿಸಿರುವ ಸುತ್ತೋಲೆಯಂತೆ, ನೀವು ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಲ್ಲ’ ಎಂದು ತಿಳಿಸಲಾಗಿತ್ತು.

‘ಸರ್ಕಾರಿ ನೌಕರ, ಸೇವಾವಧಿಯಲ್ಲಿ ಎರಡನೇ ಮದುವೆಯಾದರೆ ಆ ಪತ್ನಿಗೆ ಜನಿಸಿದ ಮಕ್ಕಳು ಕಾನೂನು ಮಾನ್ಯತೆ ಪಡೆಯುತ್ತಾರಾದರೂ ಕುಟುಂಬ ಸದಸ್ಯರ ವ್ಯಾಖ್ಯಾನದ ಪರಿಧಿಯೊಳಗೆ ಬರುವುದಿಲ್ಲ’ ಎಂದು ಸ್ಪಷ್ಟನೆ ನೀಡಲಾಗಿತ್ತು.

ಅರ್ಜಿದಾರರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಲೋಹಿತ್‌ ಗೌಡ ಪರ ವಾದ ಮಂಡಿಸಿದ್ದ ವಕೀಲ ಎಂ.ಷಣ್ಮುಖಪ್ಪ ಅವರು, ‘ವರದೇಗೌಡ ಅವರ ಮೊದಲ ಪತ್ನಿ ವಿಚ್ಛೇದನ ಪಡೆದಿದ್ದಾರೆ ಮತ್ತು ಅವರಿಗೊಬ್ಬ ಪುತ್ರಿಯಿದ್ದಾರೆ. ಲೋಹಿತ್‌ ಗೌಡ ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಅವರಿಂದ ಯಾವುದೇ ತಕರಾರು ಇರುವುದಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇದಕ್ಕೆ ಪೂರಕವಾಗಿ, ಕೇಂದ್ರ ಸರ್ಕಾರ v/s ವಿ.ಆರ್‌. ತ್ರಿ‍‍ಪಾಠಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನೂ ಉಲ್ಲೇಖಿಸಿದ್ದರು.

ತ್ರಿಪಾಠಿ ಪ್ರಕರಣದಲ್ಲಿ ಹೇಳಿರುವುದೇನು?
‘ಸರ್ಕಾರಿ ನೌಕರನೊಬ್ಬನ ಎರಡನೇ ಪತ್ನಿಯ ಮಕ್ಕಳೂ ಕಾನೂನುಬದ್ಧ ವಾರಸುದಾರರು. ಮೊದಲನೇ ಪತ್ನಿಯ ಮಕ್ಕಳಂತೆ ಘನತೆಯಿಂದ ಜೀವಿಸುವ ಸಂವಿಧಾನಬದ್ಧವಾದ ಎಲ್ಲ ಹಕ್ಕಗಳೂ ಅವರಿಗೆ ಲಭಿಸಬೇಕು’ ಎಂದು ಈ ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ.

‘ಯಾವುದೇ ವೈವಾಹಿಕ ಸಂಬಂಧದ ನಂತರ ಹುಟ್ಟುವ ಮಕ್ಕಳು, ನಾವು ಇಂತಹವರ ಗರ್ಭದಲ್ಲೇ ಜನಿಸಬೇಕು ಎಂದು ಅಪೇಕ್ಷಿಸಿರುವುದಿಲ್ಲ. ಹಾಗಾಗಿ ಸಮಂಜಸವಲ್ಲದ ಕಾರಣಗಳನ್ನು ನೀಡಿ ಎರಡನೇ ಪತ್ನಿಯ ಮಕ್ಕಳಿಗೆ ಅನುಕಂಪ ಆಧಾರಿತ ನೌಕರಿ ಸಿಗದಂತೆ ಮಾಡುವ ಯಾವುದೇ ನಿಯಮ ಮತ್ತು ಆದೇಶಗಳು ಕಾನೂನುಬಾಹಿರ’ ಎಂದು ವಿವರಿಸಲಾಗಿದೆ.

**

ನೇಮಕಾತಿ ಕೋರಿ ವಿ. ಲೋಹಿತ್ ಗೌಡ ಸಲ್ಲಿಸಿರುವ ಮನವಿಯನ್ನು ಬಿಡಿಎ, ಈ ಆದೇಶ ಪ್ರಕಟವಾದ ಎರಡು ತಿಂಗಳ ಒಳಗಾಗಿ ಕಾನೂನಿನ ಚೌಕಟ್ಟಿನೊಳಗೆ ಪುನರ್‌ ಪರಿಶೀಲನೆ ಮಾಡಬೇಕು.
-ಆರ್.ದೇವದಾಸ್‌, ನ್ಯಾಯಮೂರ್ತಿ

Post Comments (+)