ಚೀನಾ ಉತ್ಪನ್ನಗಳಿಗೆ ಹಳ್ಳಿಯಿಂದಲೇ ಸಡ್ಡು!

7
ಕೈಗಾರಿಕಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ; ಗ್ರಾಮಗಳಲ್ಲಿ ಬಿಡಿಭಾಗಗಳ ಉತ್ಪಾದನೆ

ಚೀನಾ ಉತ್ಪನ್ನಗಳಿಗೆ ಹಳ್ಳಿಯಿಂದಲೇ ಸಡ್ಡು!

Published:
Updated:

ಬೆಂಗಳೂರು: ರಾಜ್ಯದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿರುವ ಚೀನಾದ ಉತ್ಪನ್ನಗಳಿಗೆ ಜಿಲ್ಲಾಮಟ್ಟದಿಂದಲೇ ಸಡ್ಡು ಹೊಡೆಯುವ ಗುರಿ ಇಟ್ಟುಕೊಂಡು ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಪೀಠೋಪಕರಣ, ಎಲ್‌ಐಡಿ ಬಲ್ಬ್‌, ಟೈಲ್ಸ್, ಸ್ಯಾನಿಟರಿ ಉಪಕರಣಗಳು, ‌ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಮೊಬೈಲ್‌ಗಳು... ಹೀಗೆ ಎಲ್ಲ ಉತ್ಪನ್ನಗಳ ಮೇಲೂ ಚೀನಾ ಹಿಡಿತ ಸಾಧಿಸಿರುವ ಕಾರಣ ದೇಶದ ಉದ್ದಿಮೆಗಳು ಮುಚ್ಚುವ ಸ್ಥಿತಿ ತಲುಪಿವೆ. ಹೀಗಾಗಿ, ‘ಉತ್ಪಾದಿಸು ಇಲ್ಲವೇ ನಾಶವಾಗು’ ಎಂಬ ಘೋಷವಾಕ್ಯದಡಿ ‘ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಯೋಜನೆ ಜಾರಿಗೆ ತರಲಾಗುತ್ತಿದೆ.

ರಾಜ್ಯದ ಯಶಸ್ವಿ ಉದ್ದಿಮೆದಾರರ ನೇತೃತ್ವದಲ್ಲಿ ಯೋಜನಾ ಗುರಿ ಘಟಕಗಳನ್ನು (ಪಿಎಂಯು) ಸ್ಥಾಪಿಸಲಾಗುವುದು. ಆ ಮೂಲಕ ಹಳ್ಳಿಗಳಲ್ಲೇ ಬಿಡಿ ಭಾಗಗಳನ್ನು ಉತ್ಪಾದಿಸಿ, ಅವುಗಳನ್ನು ತಾಲ್ಲೂಕು ಮಟ್ಟದಲ್ಲಿ ಜೋಡಣೆ ಮಾಡಲಾಗುವುದು. ಈ ರೀತಿ ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಜಿಲ್ಲೆಗಳಲ್ಲಿ ಮಾಲ್‌ಗಳನ್ನು ತೆರೆಯಲಾಗುವುದು.

ಕಲಬುರ್ಗಿಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸೌರವಿದ್ಯುತ್‍ ಉತ್ಪಾದಿಸಲು ಅಗತ್ಯವಿರುವ ಸೋಲಾರ್ ಪ್ಯಾನಲ್‌ಗಳು, ಇನ್ವರ್ಟರ್‌ ಗಳು ಕೆಪಾಸಿಟರ್‌ಗಳು ಹಾಗೂ ಲುಮಿನೇಟರ್‌ಗಳನ್ನು ಈ ಜಿಲ್ಲೆಯಲ್ಲೇ ಉತ್ಪಾದಿಸಲಾಗುವುದು.

ದೇಶದಲ್ಲಿನ ಸ್ಥಳೀಯ ವಿದ್ಯುತ್ ಬಲ್ಬ್ ಉದ್ಯಮವು ₹ 46 ಸಾವಿರ ಕೋಟಿ ಮೌಲ್ಯದ್ದಾಗಿದೆ. ಆದರೆ, ಈ ಮಾರುಕಟ್ಟೆಯನ್ನು ಚೀನಾದಿಂದ ಆಮದಾಗುತ್ತಿರುವ ಎಲ್‌ಇಡಿ ಬಲ್ಬ್‌ಗಳು ಕಬಳಿಸುತ್ತಿವೆ.

ಹೀಗಾಗಿ, ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಉತ್ಪಾದಿಸುವ ಉದ್ಯಮ ಅಭಿವೃದ್ಧಿಪಡಿಸ ಲಾಗುವುದು.‌ ಬ್ಯಾಟರಿ ಮತ್ತು ವಿದ್ಯುತ್‌ಚಾಲಿತ ಆಟಿಕೆಗಳಲ್ಲಿ ಐಸಿಬಿ, ಚಿಪ್, ಮೈಕ್ರೊ ಡಿಸಿ ಮೋಟರ್‌ಗಳನ್ನು ಅಳವಡಿಸಲಾಗುತ್ತದೆ. ಚೀನಾ ದೇಶದಲ್ಲಿ ತಯಾರಾಗುವ ಈ ಆಟಿಕೆಗಳು, ಇಡೀ ಪ್ರಪಂಚಕ್ಕೇ ಸರಬರಾಜಾಗುತ್ತಿವೆ. ಹಾಗಾಗಿ, ಕೊಪ್ಪಳ ಜಿಲ್ಲೆಯಲ್ಲೇ ಅಂಥ ಆಟಿಕೆಗಳ ತಯಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಐಸಿಬಿ ಚಿಪ್‌ ತಯಾರಿಕಾ ಘಟಕವನ್ನು ಮೈಸೂರಿನಲ್ಲಿ ಪ್ರಾರಂಭಿಸಲಾಗುವುದು.

ಹಾಸನವನ್ನು ಸ್ನಾನಗೃಹದ ಟೈಲ್ಸ್‌, ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಒತ್ತು ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಭಾಗಗಳ ತಯಾರಿಕಾ ಘಟಕ ಸ್ಥಾಪಿಸಲಾಗುವುದು.

23 ಕ್ರೀಡೆಗಳಿಗೆ ಬೇಕಾದ ಹಾಗೂ ದೇಹದಾರ್ಢ್ಯತೆಗೆ (ಫಿಟ್ನೆಸ್‌) ಸಂಬಂಧಿಸಿದ ಪರಿಕರಗಳನ್ನು ಉತ್ಪಾದಿಸಲು ತುಮಕೂರಿನಲ್ಲಿ ಕಾರ್ಖಾನೆ ಶುರು ಮಾಡಲಾಗುವುದು.

ರಾಜ್ಯದಲ್ಲಿನ ಬೇಸಾಯದ ಕ್ರಮಗಳಿಗೆ ಹೊಂದುವಂಥ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸಲು ನಿರ್ಧರಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಯಂತ್ರಗಳನ್ನು ಉತ್ಪಾದಿಸಲು ಕಂಪನಿಗಳಿಗೆ ಅವಕಾಶ ಕೊಡಲಾಗುವುದು.

ತೆಂಗು ನಾರಿನ ವಲಯಕ್ಕೆ ಉತ್ತೇಜನ ನೀಡಲು ಆ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳಿಗೆ ವಾರ್ಷಿಕ ₹ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಈ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳಿಗೆ, ಶೇ.10ರಷ್ಟು ಅಭಿವೃದ್ಧಿ ಸಹಾಯಧನ ನೀಡಲಾಗುವುದು.

**

8 ಲಕ್ಷ ಉದ್ಯೋಗ ಸೃಷ್ಟಿ

ಈ ಕೈಗಾರಿಕಾ ಕ್ರಾಂತಿಯಿಂದ ಜಿಲ್ಲಾ ವಲಯದಲ್ಲಿ 8 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮುಂದಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಕೈಗಾರಿಕಾ ಕ್ಷೇತ್ರಕ್ಕೇ ₹14,000 ಕೋಟಿ ಬಂಡವಾಳ ಹೂಡಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ನೇಕಾರರಿಗೆ ಹೊಸ ವಿನ್ಯಾಸದ ತಂತ್ರಜ್ಞಾನ ಒದಗಿಸಲು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ ಮೂಲಕ ಅತ್ಯಾಧುನಿಕ ಕೈಮಗ್ಗ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು.

**

35 ವಿದ್ಯುತ್ ಉಪಕೇಂದ್ರ ಸ್ಥಾಪನೆ

ವಿದ್ಯುತ್ ಪ್ರಸರಣ ಜಾಲದ ಬಲವರ್ಧನೆಗಾಗಿ ಈ ವರ್ಷ ಹೊಸ 35 ವಿದ್ಯುತ್ ಉಪಕೇಂದ್ರಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಸ್ಥಾಪಿಸಲಾಗುವುದು. ಅಲ್ಲದೆ, 75 ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಬೆಂಗಳೂರು ನಗರದಲ್ಲಿನ ಎಲ್ಲ ವಿದ್ಯುತ್‌ ಮಾರ್ಗಗಳನ್ನು ಭೂಗತ ಮಾರ್ಗಗಳಾಗಿ ಪರಿವರ್ತಿಸಲು ವಿಸ್ತೃತ ಯೋಜನೆ ತಯಾರಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

**

ಪಿಡಬ್ಲ್ಯುಡಿಗೆ ಏಕಮಾತ್ರ ಯೋಜನೆ!

ಹಾಸನಕ್ಕೆ ವರ್ತುಲ ರಸ್ತೆ ಮುಖ್ಯಮಂತ್ರಿ ಅವರ ಹಿರಿಯ ಸೋದರ ಎಚ್.ಡಿ.ರೇವಣ್ಣ ನಿರ್ವಹಿಸುತ್ತಿರುವ ಲೋಕೋಪಯೋಗಿ ಖಾತೆಗೇ ಬಜೆಟ್‌ನಲ್ಲಿ ವಿಶೇಷ ಆದತ್ಯೆ ಸಿಕ್ಕಿಲ್ಲ.

ಈ ಇಲಾಖೆಗೆ ಕುಮಾರಸ್ವಾಮಿ ಅವರು ಏಕಮಾತ್ರ ಯೋಜನೆ ಪ್ರಕಟಿಸಿದ್ದು, ಅದೂ ಜೆಡಿಎಸ್ ತವರು ನೆಲೆ ಹಾಸನ ಜಿಲ್ಲೆಗೆ ಮೀಸಲಾಗಿದೆ. ಹಾಸನದ ಸುಗಮ ಸಂಚಾರಕ್ಕಾಗಿ ₹30 ಕೋಟಿ ವೆಚ್ದದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

**

ಭೂಸಾರಿಗೆ ಪ್ರಾಧಿಕಾರ ರಚನೆ

ಸಾರ್ವಜನಿಕ ಸಾರಿಗೆ ಸೇವೆ ಸುಧಾರಣೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಏಕೀಕೃತ ಭೂಸಾರಿಗೆ ಪ್ರಾಧಿಕಾರ’ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.‌ ಬಿಎಂಆರ್‌ಸಿಎಲ್, ಬಿಎಂಟಿಸಿ, ಬಿಡಿಎ, ಬಿಬಿಎಂಪಿ ಸಂಸ್ಥೆಗಳ ನಡುವೆ ಸಮನ್ವಯ ತಂದು, ಕೈಗೆಟಕುವ ದರದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವುದು ಈ ಪ್ರಾಧಿಕಾರದ ಉದ್ದೇಶವಾಗಿದೆ.

**

ಹೊಸ ಬಸ್ ಖರೀದಿ

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ 4,236 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಆ ಪೈಕಿ 80 ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಅಡಿ ಕಾರ್ಯಚರಣೆ ಮಾಡಲಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ 100 ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ₹4 ಕೋಟಿ ವಿನಿಯೋಗಿಸಲಾಗುತ್ತಿದೆ.

**

ಪಾಲಿಕೆಗಳಲ್ಲಿ ಬಹುಮಹಡಿ ಪಾರ್ಕಿಂಗ್‌

ಮೊದಲ ಹಂತದಲ್ಲಿ 5 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗುವುದು. ನಗರ ಪ್ರದೇಶದಲ್ಲಿ ವಾಹನ ಸಂಚಾರ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಮತ್ತು ವಾಹನ ದಟ್ಟಣೆ ತಪ್ಪಿಸಲು ಈ ಯೋಜನೆ ಜಾರಿಗೆ ತರಲು ಉದ್ದೇಶಿಸಿದೆ.

**

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಶುಲ್ಕ

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳು ಅವುಗಳ ವ್ಯಾಪ್ತಿಯಲ್ಲಿ ಮಾರಾಟವಾಗುವ ಪ್ಲಾಸ್ಟಿಕ್‍ನಿಂದ ಪ್ಯಾಕ್ ಮಾಡಿದ ವಸ್ತುಗಳ ಮೇಲೆ ಎಂ.ಆರ್.ಪಿ ಆಧಾರದಲ್ಲಿ ಶೇ.3ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸಲಾಗುವುದು. ಈ ರೀತಿ ಸಂಗ್ರಹವಾದ ಶುಲ್ಕದ ಮೊತ್ತವನ್ನು ಪ್ಲಾಸ್ಟಿಕ್ ಸಂಸ್ಕರಣೆಗಾಗಿ ಬಳಸಿ ಪರಿಸರ ಸಂರಕ್ಷಣೆ ಮಾಡಲು ಉದ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !