ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿದ ಆರೋಪ: ಬಿಎಸ್‌ವೈ ವಿರುದ್ಧ ದೂರು

7

ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿದ ಆರೋಪ: ಬಿಎಸ್‌ವೈ ವಿರುದ್ಧ ದೂರು

Published:
Updated:

ಬೆಂಗಳೂರು: ಜೆಡಿಎಸ್‌ ಶಾಸಕರನ್ನು ಪಕ್ಷಾಂತರ ಮಾಡಿಸಲು ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತಿತರ ನಾಯಕರನ್ನು ತಕ್ಷಣ ಬಂಧಿಸಿ, ತನಿಖೆ ನಡೆಸುವಂತೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಎರಡು ದೂರುಗಳು ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಹನುಮೇಗೌಡ ಮತ್ತು ಪ್ರಶಾಂತ್‌ ಎಂಬುವರು ಕೊಟ್ಟಿರುವ ಪ್ರತ್ಯೇಕ ದೂರುಗಳಿಗೆ ಪೂರಕವಾಗಿ ಆಡಿಯೊ ತುಣುಕುಗಳನ್ನು ಲಗತ್ತಿಸಲಾಗಿದೆ. ಗುರುಮಠಕಲ್‌ ಶಾಸಕ ನಾಗನಗೌಡ ಪಾಟೀಲ ಅವರ ಪುತ್ರ ಶರಣಗೌಡ ಪಾಟೀಲರ ಜತೆ ಮಾತುಕತೆ ನಡೆಸುವ ಯಡಿಯೂರಪ್ಪ, ಪಕ್ಷಾಂತರಕ್ಕೆ ಪ್ರಚೋದಿಸಿ ₹ 10 ಕೋಟಿ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ ಎನ್ನಲಾದ ಸಂಭಾಷಣೆ ಆಡಿಯೊದಲ್ಲಿದೆ.

ಈ ಆಡಿಯೊ ತುಣುಕನ್ನು ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಭಾನುವಾರ ಯಡಿಯೂರಪ್ಪನವರೇ ಆಡಿಯೊದಲ್ಲಿ ಇರುವುದು ತಮ್ಮ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ (ಪಿ.ಸಿ ಆ್ಯಕ್ಟ್‌) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅವರನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು ಎಂದು ಹನುಮೇಗೌಡ ಒತ್ತಾಯಿಸಿದ್ದಾರೆ.

ಇದಲ್ಲದೆ, ಕೋಲಾರದ ಜೆಡಿಎಸ್‌ ಶಾಸಕ ಶ್ರೀನಿವಾಸ ಗೌಡ ಅವರನ್ನು ಬಿಜೆಪಿಗೆ ಸೆಳೆಯಲು ₹ 25 ಕೋಟಿ ಆಮಿಷ ತೋರಿಸಿ, ₹ 5 ಕೋಟಿ ಮುಂಗಡವಾಗಿ ನೀಡಲಾಗಿತ್ತು. ಈ ಹಣವನ್ನು ಎರಡು ತಿಂಗಳು ತಮ್ಮ ಮನೆಯಲ್ಲೇ ಇಟ್ಟಿದ್ದಾಗಿ ಶಾಸಕರೇ ಹೇಳಿದ್ದಾರೆ. ಈ ಪ್ರಕರಣದಲ್ಲೂ ತನಿಖೆ ನಡೆಸುವಂತೆ ಪ್ರಶಾಂತ್‌ ದೂರು ನೀಡಿದ್ದಾರೆ. 

ಈ ಹಣವನ್ನು ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್‌ ತಲುಪಿಸಿದ್ದಾಗಿ ಶ್ರೀನಿವಾಸ ಗೌಡರು ಆರೋಪಿಸಿದ್ದಾರೆ.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯದ ಹಿತ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಶಾಸಕರು, ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ₹ 5 ಕೋಟಿಯನ್ನು ಎರಡು ತಿಂಗಳು ಮನೆಯಲ್ಲಿ ಇಟ್ಟುಕೊಂಡ ಶ್ರೀನಿವಾಸಗೌಡ ಹಾಗೂ ಹಣ ಕೊಟ್ಟ ಆರೋಪ ಹೊತ್ತ ಮೂವರು ಶಾಸಕರ ವಿರುದ್ಧ ತನಿಖೆ ಮಾಡಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಹೇಳಲಾಗಿದೆ.

ಎಸಿಬಿ ಅಧಿಕಾರಿಗಳು ಎರಡೂ ದೂರುಗಳನ್ನು ಪರಿಶೀಲಿಸುತ್ತಿದ್ದಾರೆ.

ಐ.ಟಿ ಕಣ್ಣು?

ಎರಡು ತಿಂಗಳು ತಮ್ಮ ಮನೆಯಲ್ಲಿ ₹ 5 ಕೋಟಿ ಇಟ್ಟುಕೊಂಡಿದ್ದಾಗಿ ಹೇಳಿರುವ ಕೆ. ಶ್ರೀನಿವಾಸಗೌಡರ ವಿರುದ್ಧ ಸ್ವಯಂಪ್ರೇರಿತ ವಿಚಾರಣೆ ನಡೆಸುವ ಕುರಿತು ಆದಾಯ ತೆರಿಗೆ ಇಲಾಖೆ ಗಂಭೀರವಾಗಿ ಚಿಂತಿಸುತ್ತಿದೆ ಎನ್ನಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿಯ ಇಬ್ಬರು ಹಾಲಿ ಮತ್ತು ಒಬ್ಬರು ಮಾಜಿ ಶಾಸಕರು ₹ 5 ಕೋಟಿ ಕೊಟ್ಟಿದ್ದರು. ಅದನ್ನು ಎರಡು ತಿಂಗಳು ಇಟ್ಟುಕೊಂಡು ಕುಮಾರಸ್ವಾಮಿ ಸಲಹೆಯಂತೆ ಹಿಂತಿರುಗಿಸಿದ್ದೆ ಎಂದು ಗೌಡರು ಭಾನುವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಐ.ಟಿ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಗೊತ್ತಾಗಿದೆ.

ಅಕ್ರಮವಾಗಿ ಇಷ್ಟೊಂದು ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದರೆ, ಸಂಬಂಧಪಟ್ಟ ಇಲಾಖೆಗಳಿಗೆ ದೂರು ಕೊಡದೆ ಹೇಗೆ ಅವರು  ಬಚ್ಚಿಟ್ಟುಕೊಂಡಿದ್ದರು ಎಂಬ ಅಂಶದ ಬಗ್ಗೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !