ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ’ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು

ತುಮಕೂರು ನಗರ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಕಡಿಮೆ ಮತದಾನ
Last Updated 14 ಮೇ 2018, 8:58 IST
ಅಕ್ಷರ ಗಾತ್ರ

ತುಮಕೂರು: 2013ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ಮತದಾನದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಕಳೆದ ಬಾರಿ ಒಟ್ಟು ಶೇ 79.34 ಮತದಾನವಾಗಿತ್ತು. ಈ ಬಾರಿ ಶೇ 81.99 ಮತದಾನ ಆಗಿದೆ. ಇದು ಹೇಳಿಕೊಳ್ಳುವಂತಹ ಹೆಚ್ಚಳವೇನೂ ಅಲ್ಲ. ಈ ಹೆಚ್ಚಳಕ್ಕೆ ಕಾರಣ  ‘ನವಮತದಾರ’ರದ್ದು ಎನ್ನಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಮೊದಲ ಬಾರಿಗೆ ಹಕ್ಕು ಪಡೆದವರು ಸಾಲಾಗಿ ನಿಂತು ಮತ ಚಲಾಯಿಸಿದ್ದು ಕಂಡು ಬಂದಿದೆ. ಕೆಲವು ಮತಗಟ್ಟೆಗಳಲ್ಲಿ ಶೇ 90ಕ್ಕೂ ಹೆಚ್ಚಿನ ಮತದಾನವಾಗಿದೆ.

ಮಧುಗಿರಿಯಲ್ಲಿ ಶೇ 85.15ರಷ್ಟು ಮತದಾನವಾಗಿದ್ದು ಹೆಚ್ಚು ಮತದಾನವಾದ ತಾಲ್ಲೂಕು ಎನ್ನುವ ಹೆಗ್ಗಳಿಕೆ ಹೊಂದಿದೆ. ತುಮಕೂರು ನಗರದ ಕ್ಷೇತ್ರದಲ್ಲಿ ಶೇ 65.02 ಮತದಾನವಾಗಿದೆ. ಇದು ಜಿಲ್ಲೆಯಲ್ಲಿಯೇ ಕಡಿಮೆ ಮತದಾನ ನಡೆದ ಕ್ಷೇತ್ರ. ಕಳೆದ ಬಾರಿಗೆ ಹೋಲಿಸಿದರೂ ನಗರ ಕ್ಷೇತ್ರದ ಮತದಾನದ ಪ್ರಮಾಣ ಕಡಿಮೆ ಇದೆ. ಸುಶಿಕ್ಷಿತರು ಎನಿಸಿರುವ ನಗರದ ಮಂದಿಯೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ತೋರಿಲ್ಲ. ಈ ಕಡಿಮೆ ಮತದಾನ ಯಾವ ಅಭ್ಯರ್ಥಿಯ ಮತದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತದೆ ಎನ್ನುವುದನ್ನು ಮೇ 15ರ ಫಲಿತಾಂಶ ತಿಳಿಸಲಿದೆ.

ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ಮತದಾನ ಆಗಿದೆ. ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಪಾವಗಡ, ಶಿರಾ, ಮಧುಗಿರಿಯಲ್ಲಿ ಕಳೆದ ಬಾರಿಗಿಂತ ಉತ್ತಮವಾಗಿಯೇ ಜನರು ಮತಗಟ್ಟೆಗೆ ಎಡತಾಕಿದ್ದಾರೆ. ಉಳಿದ ಕಡೆಗಳಲ್ಲಿ ಅಲ್ಪ‍ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಭಾನುವಾರ ಅಧಿಕಾರಿಗಳಿಂದ ಮತದಾನ ಪ್ರಮಾಣದ ಪೂರ್ಣ ವಿವರಗಳನ್ನು ಪಡೆದಿರುವ ಅಭ್ಯರ್ಥಿಗಳು, ಮತಗಟ್ಟೆವಾರು ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಯಾವ ಮತಗಟ್ಟೆಯಲ್ಲಿ ಎಷ್ಟು ಮತದಾನ ಆಗಿದೆ, ಕಳೆದ ಬಾರಿ ನಮ್ಮ ಪಕ್ಷ ಎಷ್ಟು ಮತಗಳನ್ನು ಪಡೆದಿತ್ತು, ಯಾವ ಜಾತಿ, ಧರ್ಮದ ಜನರು ಅಲ್ಲಿ ಹೆಚ್ಚಿದ್ದಾರೆ, ಅದರಲ್ಲಿ ನಮ್ಮ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿರಬಹುದು ಎನ್ನುವ ಊಹೆಗಳು ಗರಿಗೆದರಿವೆ.

‘ಮರಿ’ನಾಯಕರು ಸಹ ಮತದಾನದ ವಿವರಗಳನ್ನು ಆಧರಿಸಿ ಬಲಾಬಲದ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಇಂತಹ ವಾರ್ಡ್‌ ಅಥವಾ ಹೋಬಳಿಗಳಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿತ್ತು. ಈ ಬಾರಿ ಆ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆಯೇ? ಎನ್ನುವ ಚರ್ಚೆಗಳು ಜೋರಾಗಿಯೇ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT