ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಜನಪ್ರತಿನಿಧಿಗಳು ಇದ್ದಾರೆಯೇ? : ಎಂ.ಎನ್‌. ಸೂರಜ್‌ ಹೆಗ್ಡೆ

ಎಐಸಿಸಿ ಮಾಜಿ ಕಾರ್ಯದರ್ಶಿ ಎಂ.ಎನ್‌. ಸೂರಜ್‌ ಹೆಗ್ಡೆ
Last Updated 15 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿಯಲ್ಲಿ ಜನಪ್ರತಿನಿಧಗಳು ಇದ್ದಾರೆಯೇ?’ ಎಂದು ಕಾಂಗ್ರೆಸ್ (ಎಐಸಿಸಿ) ಮಾಜಿ ಕಾರ್ಯದರ್ಶಿ ಎಂ.ಎನ್‌. ಸೂರಜ್‌ ಹೆಗ್ಡೆ ವ್ಯಂಗ್ಯವಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತ ಅಭಿಪ್ರಾಯ ಸಂಗ್ರಹಕ್ಕಾಗಿ ಕೆಪಿಸಿಸಿ ಉಸ್ತುವಾರಿಯಾಗಿ ಬಂದ ಅವರು, ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು.

‘ಭೀಕರ ನೆರೆಯ ಪರಿಣಾಮ ರಾಜ್ಯದ ಲಕ್ಷಾಂತರ ಜನತೆ ಮನೆ, ಆಸ್ತಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಆದರೆ, ಕೇಂದ್ರವು ಬಿಡಿಗಾಸು ನೆರವು ನೀಡಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ, ಚಕಾರ ಎತ್ತುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರ ಬಾಯಿಯೂ ಬಂದ್‌ ಆಗಿದೆ. ಹೀಗಾಗಿ, ಜನರ ಪರವಾಗಿ ಮಾತನಾಡುವ ಅಥವಾ ಕೆಲಸ ಮಾಡಬಲ್ಲ ಒಬ್ಬ ‘ಜನಪ್ರತಿನಿಧಿ’ಯಾದರೂ ಬಿಜೆಪಿಯಲ್ಲಿ ಇದ್ದಾರೆಯೇ?’ ಎಂದು ಕುಟುಕಿದರು.

‘ಇದು ರಾಷ್ಟ್ರೀಯ ವಿಕೋಪವಲ್ಲ ಎನ್ನುವ ಮೂಲಕ, ಸಹಜವಾಗಿ ಸಿಗಬೇಕಾದ ಪರಿಹಾರಕ್ಕೂ ಸಚಿವ ಮಾಧುಸ್ವಾಮಿ ಕಲ್ಲು ಹಾಕಿದ್ದಾರೆ’ ಎಂದು ದೂರಿದರು.

‘ಇತ್ತ ರೈತರ ಸಾಲ ಮನ್ನಾದ ಪ್ರಕ್ರಿಯೆಯೂ ನಿಂತು ಹೋಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರಧಾನಿ ಮೋದಿ ಜನರ ಸಂಕಷ್ಟಗಳನ್ನು ಕೇಳಲು ಸಿದ್ಧರಿಲ್ಲ. ಕೇಂದ್ರ ಸಚಿವರುಗಳು ವೈಮಾನಿಕ ವೀಕ್ಷಣೆ ಮಾಡಿದರೂ, ಪರಿಹಾರ ಬಿಡುಗಡೆಗೊಂಡಿಲ್ಲ’ ಎಂದರು.

‘ಶಾಸಕ ಡಿ.ಕೆ. ಶಿವಕುಮಾರ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ಧ ಇನ್ನೂ ಎಟಿಆರ್ (ಕ್ರಮ ಕೈಗೊಂಡ ವರದಿ), ದೋಷಾರೋಪಣಾ ಪಟ್ಟಿ, ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಯಾವುದನ್ನೂ ಜಾರಿ ನಿರ್ದೇಶನಾಲಯವು ದಾಖಲಿಸಿಲ್ಲ. ಅವರ ಕುಟುಂಬಕ್ಕೂ ಕಿರುಕುಳ ನೀಡುತ್ತಿದ್ದಾರೆ. ಕೇಂದ್ರವು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಉತ್ತರ ಪ್ರದೇಶದಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಹಿಂದಿ ಹೇರಿಕೆ ಮೂಲಕ ಕನ್ನಡಿಗರು ಹಾಗೂ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕಂಪೆನಿಯೊಂದರ ಆಸ್ತಿಯು ಕೇವಲ ಒಂದು ವರ್ಷದಲ್ಲಿ ₹15 ಸಾವಿರದಿಂದ ₹80 ಕೋಟಿಗೆ ಏರಿಕೆಯಾಗಿದೆ. ಶಾರದಾ ಚೀಟ್ ಫಂಡ್ ಆರೋಪಿ ಮುಕುಲ್ ರಾಯ್‌ ಬಿಜೆಪಿಗೆ ಸೇರಿದ ಬಳಿಕ ಪ್ರಕರಣವೇ ಮುಚ್ಚಿ ಹೋಗಿದೆ. ಬಿಜೆಪಿ ಭ್ರಷ್ಟಾಚಾರಿಗಳ ಆಶ್ರಯತಾಣವೇ?’ ಎಂದು ಪ್ರಶ್ನಿಸಿದರು.

ಬಿಜೆಪಿ ಪರ ಒಲವು ತೋರಿರುವ ಐಎಂಎ ಪ್ರಕರಣದ ಆರೋಪಿ ರೋಷನ್‌ ಬೇಗ್‌ಗೆ ರಕ್ಷಣೆ ನೀಡುವಂತೆ ರಾಜ್ಯಪಾಲರೇ ಪತ್ರ ಬರೆದಿದ್ದು, ಭ್ರಷ್ಟರ ಬಗೆಗಿನ ಬಿಜೆಪಿ ನಿಲುವಿಗೆ ಇನ್ನೊಂದು ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್‌ ಹೇಳಿದರು.

ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ವಿನಯ್‌ರಾಜ್, ಖಾಲಿದ್, ಗಣೇಶ್ ಇದ್ದರು.

‘ಗುಜರಾತ್ ಮಾದರಿ’ ಎಲ್ಲಿ ಹೋಯಿತು?

‘ಗುಜರಾತ್ ಮಾದರಿ’ ಎಂದು ಜನರಿಗೆ ಮೋಸ ಮಾಡಿದ ಪ್ರಧಾನಿ ನರೇಂದ್ರ ಮೋದಿ, ತಾಕತ್ತಿದ್ದರೆ ಈಗ ಹೋಗಿ ಹಿಂದಿ ಹೇರಿಕೆ ಹಾಗೂ ಮೋಟಾರು ವಾಹನ ಕಾಯ್ದೆ (ಟ್ರಾಫಿಕ್) ಕಾಯಿದೆಯನ್ನು ಗುಜರಾತ್‌ನಲ್ಲಿ ಯಥಾವತ್ತಾಗಿ ಜಾರಿಗೊಳಿಸಲಿ. ಈಗಾಗಲೇ ಅವರದ್ದೇ ಪಕ್ಷದ ಸರ್ಕಾರವೇ ಗುಜರಾತ್‌ನಲ್ಲಿ ಇವೆರಡನ್ನೂ ಜಾರಿಗೊಳಿಸಿಲ್ಲ. ಗುಜರಾತ್ ಮಾದರಿ ಎಲ್ಲಿ ಹೋಯಿತು? ಎಂದು ಸೂರಜ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT