‘ದೋಸ್ತಿ’ ಕಾರ್ಯವೈಖರಿಗೆ ‘ಕೈ’ ಶಾಸಕರ ಸಿಟ್ಟು

7

‘ದೋಸ್ತಿ’ ಕಾರ್ಯವೈಖರಿಗೆ ‘ಕೈ’ ಶಾಸಕರ ಸಿಟ್ಟು

Published:
Updated:

ಬೆಂಗಳೂರು: ‘ದೋಸ್ತಿ’ ಸರ್ಕಾರದ ಪ್ರಮುಖ ನೇತಾರರ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡಿರುವ ‘ಕೈ’ ಶಾಸಕರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ.

ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳೇ ನಡೆಯುತ್ತಿಲ್ಲ. ಸಚಿವರು, ಅದರಲ್ಲೂ ಜೆಡಿಎಸ್‌ ಸಚಿವರು ತಮ್ಮ ಕೈಗೇ ಸಿಗುತ್ತಿಲ್ಲ ಎಂಬುದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಶಾಸಕರು ಪರೋಕ್ಷವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ ವಿರುದ್ಧವೂ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

 ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಂಚಿಕೆಯಾಗಿದೆ. ಆದರೆ, ಅಧಿಕಾರಿಗಳಿಗಾಗಿ ಶಾಸಕರು ಸಚಿವರ ಬೆನ್ನ ಹಿಂದೆ ಓಡಾಡಬೇಕಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿದ್ದ ಪೊಲೀಸ್‌, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಕಾರಿಗಳು ಇಲ್ಲದೆ ಅಭಿವೃದ್ಧಿ ಕೆಲಸ ಮಾಡಿಸುವುದು ಹೇಗೆ ಎಂಬುದು ಶಾಸಕರ ಪ್ರಶ್ನೆ. 

ಸಮ್ಮಿಶ್ರ ಸರ್ಕಾರದಿಂದ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸವೇ ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ಇದ್ದೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ಪಕ್ಷಕ್ಕೂ ಹಿನ್ನಡೆ ಆಗುತ್ತದೆ ಎಂಬುದು ಶಾಸಕರು ಅಳಲು.

 ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಬಹುತೇಕ ಕಾಂಗ್ರೆಸ್‌ ನಾಯಕರಲ್ಲಿ ತೃಪ್ತಿ ಇಲ್ಲ. ಜೆಡಿಎಸ್‌ ಜತೆ ಕೈ ಜೋಡಿಸಬೇಕು ಎಂಬ ಹೈಕಮಾಂಡ್‌ ನಿರ್ಣಯವನ್ನು ಬೇರೆ ದಾರಿ ಇಲ್ಲದೆ ಇಲ್ಲದೇ ಒಪ್ಪಬೇಕಾಯಿತು. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಅತೃಪ್ತ ಶಾಸಕರಿಗೆ ರಾಜ್ಯ ನಾಯಕರು ಪೂಸಿ ಹೊಡೆಯುತ್ತಿದ್ದಾರೆ ಎಂದೂ ಮೂಲಗಳು ಹೇಳಿವೆ.

ಈ ತಿಂಗಳ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪಕ್ಷದ ಶಾಸಕರ ಸಭೆ ನಡೆಸಿದಾಗ ತಮ್ಮ ಆಕ್ರೋಶ ತೋಡಿಕೊಂಡಿದ್ದರು. ಆ ಸಭೆಯಲ್ಲಿ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ‘ಸಚಿವರು ಅಹಂಕಾರದಿಂದ ವರ್ತಿಸುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

‘ನಾವು ಸಚಿವರ ಕೊಠಡಿಗೆ ಹೋದರೆ, ನಮ್ಮ ಕಡೆ ನೋಡುವುದಿಲ್ಲ. ಅವರು ಶಾಸಕರಾಗಿದ್ದಾಗ ಸರಿಯಾಗೇ ಇದ್ದರು. ಸಚಿವರಾದ ಬಳಿಕ ವರಸೆಯೇ ಬದಲಾಗಿದೆ. ನಮ್ಮನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಲ ಮನ್ನಾ ಪ್ರಕಟಿಸಿರುವುದು ಬೆಂಗಳೂರಿನ ಹಲವು ಕಾಂಗ್ರೆಸ್‌ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ನಿರ್ಧಾರದಿಂದ ನಗರಕ್ಕೆ ಸಿಗಬೇಕಾದ ಅನುದಾನದಲ್ಲಿ ಕಡಿತ ಆಗುತ್ತದೆ ಎಂದು ಶಾಸಕರು ಹೇಳಿದ್ದಾರೆ.

ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಹೇಳುವ ಮೂಲಕ ಪಕ್ಷದ ನಾಯಕರ ಗಮನ ತಮ್ಮತ್ತ ಸೆಳೆಯಲು ಕೆಲವು ಶಾಸಕರು ತಂತ್ರ ಹೂಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !