ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಶಾಸಕರ ಸಭೆಗೆ ಸಿ.ಎಂ ಅನುಮಾನ

Last Updated 15 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಳಗಾವಿ: ಇದೇ 18ರಂದು ಇಲ್ಲಿನ ಸುವರ್ಣಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸುವ ಬಗ್ಗೆ ಅನುಮಾನಗಳು ಮೂಡಿವೆ.

ಬೆಂಗಳೂರಿನಲ್ಲಿ ಇದೇ 8ರಂದು ಸಿಎಲ್‌ಪಿ ಸಭೆ ನಿಗದಿಯಾಗಿತ್ತು. ಆ ಸಭೆಯಲ್ಲಿ ಭಾಗವಹಿಸಿ ಶಾಸಕರ ಅಹವಾಲುಗಳನ್ನು ಆಲಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಅದಕ್ಕೂ ಮೊದಲು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆದಿತ್ತು. ಬಳಿಕ ಸಿಎಲ್‌ಪಿ ಸಭೆಯನ್ನು 18ಕ್ಕೆ ಮುಂದೂಡಲಾಗಿತ್ತು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ನಾಮನಿರ್ದೇಶನದ ಸಂದರ್ಭದಲ್ಲಿ ‘ಮೈತ್ರಿ’ ಸೂತ್ರ ಪಾಲಿಸದಿರುವುದು, ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರಿಗೆ ಮನ್ನಣೆ ಸಿಗುತ್ತಿಲ್ಲ ಮತ್ತಿತರ ಕಾರಣಗಳಿಗೆ ಕಾಂಗ್ರೆಸ್‌ ಶಾಸಕರು ಅಸಮಾಧಾನಗೊಂಡಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸುವ ಮೂಲಕ ಈ ಅತೃಪ್ತಿಯನ್ನು ತಣಿಸುವುದು ಮುಖ್ಯಮಂತ್ರಿ ಉದ್ದೇಶವಾಗಿತ್ತು.

ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನೂ ಟೀಕಿಸಿರುವ ಕೆಲವು ಶಾಸಕರು, ಕುಮಾರಸ್ವಾಮಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಎಚ್‌.ಡಿ. ರೇವಣ್ಣ ಎಲ್ಲ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಈ ಶಾಸಕರು ಮಾಡುತ್ತಿದ್ದಾರೆ.

ಸಭಾಪತಿ ಸ್ಥಾನಕ್ಕೆ ಎಸ್‌.ಆರ್. ಪಾಟೀಲ ಅವರನ್ನು ಪರಿಗಣಿಸದಿರುವುದು ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಕೆರಳಿಸಿದೆ. ಅಲ್ಲದೆ, ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ ಆಗಬಹುದೆಂಬ ಸಂದೇಹವೂ ಸಚಿವಾಕಾಂಕ್ಷಿ ಶಾಸಕರನ್ನು ಕಾಡುತ್ತಿದೆ. ಅದರ ಬೆನ್ನಲ್ಲೆ ಸಿಎಲ್‌ಪಿ ಸಭೆ ನಡೆಯುತ್ತಿದ್ದು, ಶಾಸಕರು ತಮ್ಮ ಅತೃಪ್ತಿಯನ್ನು ಮುಕ್ತವಾಗಿ ಹೊರಹಾಕುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಿಎಲ್‌ಪಿ ಸಭೆಗೆ ಬರುವಂತೆ ಶಾಸಕರಿಗೆ ನೀಡಿದ ಆಹ್ವಾನ ಪತ್ರದಲ್ಲಿ ಕುಮಾರಸ್ವಾಮಿ ಹೆಸರು ಇಲ್ಲ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭಾಗವಹಿಸುತ್ತಾರೆ ಎಂದಷ್ಟೆ ನಮೂದಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ಕುಮಾರಸ್ವಾಮಿ ಅವರನ್ನು ಸಭೆಗೆ ಆಹ್ವಾನಿಸಲಾಗುವುದು. ಅವರು ಭಾಗವಹಿಸುತ್ತಾರೋ ಇಲ್ಲವೋ ಕಾದು ನೋಡೋಣ’ ಎಂದರು.

ಪಕ್ಷದ ಹಿರಿಯ ಶಾಸಕರು ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗಳನ್ನು ಹೊರ ಹಾಕುತಿದ್ದರೂ ಸಿದ್ದರಾಮಯ್ಯ ಮೌನವಾಗಿರುವುದು, ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸದೆ ಮಲೇಷ್ಯಾ ತೆರಳಿದ್ದು, ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ವಾಪಸು ಬಂದರೂ ಅಧಿವೇಶನದಲ್ಲಿ ಭಾಗವಹಿಸದಿರುವ ಬಗ್ಗೆ ಮುಖ್ಯಮಂತ್ರಿ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶಕ್ಕೆ ಎಚ್‌ಡಿಕೆ

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್‌ ಅವರು ಇದೇ 17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಅಲ್ಲಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ‘ಮೈತ್ರಿ’ ಬಲಗೊಳಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT