ಸಿದ್ದರಾಮಯ್ಯ ಸುತ್ತ ನೆರೆದ ಶಾಸಕರು; ಸಂಪುಟ ವಿಸ್ತರಣೆ ಅನುಮಾನ

7
ಉಪಚುನಾವಣೆ ಘೋಷಣೆ ಸಾಧ್ಯತೆ l ಸಚಿವ ಸ್ಥಾನಕ್ಕೆ ದುಂಬಾಲು

ಸಿದ್ದರಾಮಯ್ಯ ಸುತ್ತ ನೆರೆದ ಶಾಸಕರು; ಸಂಪುಟ ವಿಸ್ತರಣೆ ಅನುಮಾನ

Published:
Updated:

ಬೆಂಗಳೂರು: ಸಂಪುಟ ವಿಸ್ತರಣೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಗಳ ಮಧ್ಯೆಯೇ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ ಶಾಸಕರು ಲಾಬಿ ಮುಂದುವರಿಸಿದ್ದಾರೆ.

ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ಎಐಸಿಸಿ ಕಾರ್ಯಕಾರಿಣಿ ಮುಗಿಸಿ ರಾಜಧಾನಿಗೆ ವಾಪಸ್‌ ಆಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಶಾಸಕರು ಸಚಿವ ಸ್ಥಾನ ಅಥವಾ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವಂತೆ ಬೇಡಿಕೆ ಮಂಡಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಮನೆಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ 6 ಸಚಿವ ಸ್ಥಾನಗಳ ಭರ್ತಿ, 20 ನಿಗಮ–ಮಂಡಳಿಗೆ ಅಧ್ಯಕ್ಷರ ನೇಮಕ ಹಾಗೂ ಅತೃಪ್ತ ಶಾಸಕರನ್ನು ಓಲೈಸಲು ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ನೇಮಿಸುವ ಬಗ್ಗೆ ಚರ್ಚೆ ನಡೆಯಿತು.

ವಿಸ್ತರಣೆ ಅನುಮಾನ: ರಾಜೀನಾಮೆಯಿಂದ ತೆರವಾಗಿರುವ ಮೂರು ಲೋಕಸಭೆ, ಒಂದು ವಿಧಾನಸಭೆ ಹಾಗೂ ನಿಧನದಿಂದ ತೆರವಾಗಿರುವ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ ಸಂಪುಟ ವಿಸ್ತರಣೆಯ ‘ಸಾಹಸ’ಕ್ಕೆ ಕೈ ಹಾಕದೇ ಇರುವುದು ಸೂಕ್ತ ಎಂಬ ವಿಷಯವೂ ಚರ್ಚೆಯಲ್ಲಿ ಬಂದಿತು ಎಂದು ಮೂಲಗಳು ಹೇಳಿವೆ.

ಸಮ್ಮಿಶ್ರ ಸರ್ಕಾರಕ್ಕೆ ಈ ಐದು ಕ್ಷೇತ್ರಗಳ ಚುನಾವಣೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿವೆ. ಬಿಜೆಪಿ ಬಲವನ್ನು ಹಿಮ್ಮೆಟ್ಟಿಸಿ ಮೈತ್ರಿಗೆ ಬೆಂಬಲವಿದೆ ಎಂದು ಪ್ರದರ್ಶಿಸುವುದಕ್ಕೆ ಚುನಾವಣೆಯನ್ನು ಗೆಲ್ಲಲೇಬೇಕಾಗುತ್ತದೆ. ಚುನಾವಣೆ ಘೋಷಣೆಯಾದ ಬಳಿಕ ಸಂಪುಟ ವಿಸ್ತರಣೆ ಮಾಡಿದರೆ ಅಸಮಾಧಾನ ಭುಗಿಲೇಳಬಹುದು. ಇಂತಹ ಸವಾಲಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂದು ಉಭಯ ನಾಯಕರು ಒಮ್ಮತಕ್ಕೆ ಬಂದರು ಎಂದು ಮೂಲಗಳು ಹೇಳಿವೆ.

ಶಾಸಕರಾಗಿ ಆಯ್ಕೆಯಾದ ಕಾರಣಕ್ಕೆ ಸಂಸದ ಸ್ಥಾನಗಳಿಗೆ ಬಿ.ಎಸ್‌. ಯಡಿಯೂರಪ್ಪ(ಶಿವಮೊಗ್ಗ), ಬಿ.ಶ್ರೀರಾಮುಲು (ಬಳ್ಳಾರಿ) ಹಾಗೂ ಸಿ.ಎಸ್‌. ಪುಟ್ಟರಾಜು(ಮಂಡ್ಯ) ರಾಜೀನಾಮೆ ನೀಡಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದು, ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡ ನಿಧನದಿಂದ ಈ ಕ್ಷೇತ್ರವೂ ತೆರವಾಗಿದೆ.

ಶಾಸಕರ ಭೇಟಿ: ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರಾದ ಇ. ತುಕಾರಾಂ (ಸಂಡೂರು), ಡಾ. ಸುಧಾಕರ್‌ (ಚಿಕ್ಕಬಳ್ಳಾಪುರ) ಪಿ.ಟಿ. ಪರಮೇಶ್ವರ ನಾಯ್ಕ (ಹಡಗಲಿ) ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮಗೆ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದರು.

ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಹರಿಹರ ಶಾಸಕ ರಾಮಪ್ಪ ಕೋರಿಕೆ ಸಲ್ಲಿಸಿದರು.

ಸಚಿವ ಸ್ಥಾನಕ್ಕೆ ಬೇಡಿಕೆ: ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ತುಕಾರಾಂ, ‘ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಲು ಏನು ಕೊಡುಗೆ ನೀಡಿದ್ದೇನೆ ಎಂದು ಹೈಕಮಾಂಡ್‌ಗೆ ಗೊತ್ತಿದೆ. ಈ ಎಲ್ಲವನ್ನೂ ನನ್ನ ಬಯೋಡೇಟಾದಲ್ಲಿ ವಿವರಿಸಿದ್ದೇನೆ’ ಎಂದು ಹೇಳಿದರು.

8ಕ್ಕೆ ವೇಣುಗೋಪಾಲ್‌ ಬೆಂಗಳೂರಿಗೆ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಇದೇ 8ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರ ಜತೆ ಚರ್ಚೆ ನಡೆಸಿದ ಬಳಿಕವೇ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ವಿಷಯ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟರೊಳಗೆ ಉಪ ಚುನಾವಣೆ ಘೋಷಣೆಯಾಗದೇ ಇದ್ದರೆ, ವರಿಷ್ಠರ ಭೇಟಿಗಾಗಿ ದೆಹಲಿಗೆ ಯಾವಾಗ ಹೋಗಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗದು ಎಂದೂ ಮೂಲಗಳು ಹೇಳಿವೆ.

**

ಸಂಪುಟ ವಿಸ್ತರಣೆ ವೇಳೆ ಕುರುಬ ಸಮುದಾಯದ ಇಬ್ಬರಿಗೆ ಪ್ರಾತಿನಿಧ್ಯ ನೀಡಬೇಕು ಹಾಗೂ ಪರಿಷತ್ತಿನ ಸದಸ್ಯರಿಗೂ ಅವಕಾಶ ಕಲ್ಪಿಸಬೇಕು
- ಎಚ್.ಎಂ. ರೇವಣ್ಣ, ವಿಧಾನಪರಿಷತ್ ಸದಸ್ಯ

**

ಗಣಿ ವ್ಯವಹಾರದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ದೇಶ ನೋಡಿದೆ. ಅಂತಹ ಕಳಂಕಿತರನ್ನು ಬಿಟ್ಟು ಪಕ್ಷಕ್ಕಾಗಿ ದುಡಿಯುವವರಿಗೆ ಸಚಿವ ಸ್ಥಾನ ನೀಡಬೇಕು
- ಇ.ತುಕಾರಾಂ, ಸಂಡೂರು ಶಾಸಕ

**

ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನ ಕೊಡುವುದಾದರೆ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಲಿ. ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಿ
- ರಾಮಪ್ಪ, ಹರಿಹರ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !