ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಧರ್ಮ ಪಾಲನೆ ಇಲ್ಲ: ‘ಕೈ’ ಅಳಲು

ಜೆಡಿಎಸ್‌ ಹಸ್ತಕ್ಷೇಪ: ವೇಣುಗೋಪಾಲ್‌ ಎದುರು ಬೇಸರ ವ್ಯಕ್ತಪಡಿಸಿದ ಮುಖಂಡರು
Last Updated 13 ಅಕ್ಟೋಬರ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್‌ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. ಎಲ್ಲ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದಾಗಿ ಪಕ್ಷ ದಿನೇ ದಿನೇ ಸೊರಗುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡರು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎದುರು ಅಳಲು ತೋಡಿಕೊಂಡರು.

ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕರೆದಿದ್ದ ಕಾಂಗ್ರೆಸ್‌ ಸಚಿವರ ಸಭೆಯಲ್ಲಿ ಅಸಮಾಧಾನದ ಕಟ್ಟೆಯೊಡೆಯಿತು. ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಅಸಹನೆ ಹೊರ ಹಾಕಿದರು.

‘ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲೇ ಮೌಖಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿಧಾನಸಭಾ ಕ್ಷೇತ್ರವಾರು ವರ್ಗಾವಣೆ ಹಾಗೂ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಎಲ್ಲ ವಿಷಯಗಳಲ್ಲೂ ಜೆಡಿಎಸ್‌ನವರು ಮೂಗು ತೂರಿಸುತ್ತಿದ್ದಾರೆ. ಜೆಡಿಎಸ್‌ ಮುಖಂಡರ ದಬ್ಬಾಳಿಕೆ ಜೋರಾಗಿದೆ. ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ಮುಖಂಡರ ಮಾತಿಗೆ ಬೆಲೆ ಸಿಗುತ್ತಿದೆ. ಅವರು ಛಾಯಾ ಶಾಸಕರಂತೆ ವರ್ತಿಸುತ್ತಿದ್ದಾರೆ’ ಎಂದು ಮುಖಂಡರು ಕಿಡಿ ಕಾರಿದರು.

‘ಮೈಸೂರು ದಸರಾ ಜೆಡಿಎಸ್‌ ದಸರಾದಂತೆ ಆಗಿದೆ. ಎಲ್ಲ ಸಮಿತಿಗಳಲ್ಲೂ ಜೆಡಿಎಸ್‌ನವರೇ ಇದ್ದಾರೆ. ಕೈ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪೂರ್ವಭಾವಿ ಸಭೆಗಳಿಗೂ ಆಹ್ವಾನ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಶ್ರಯ ಸಮಿತಿ, ಎಪಿಎಂಸಿ, ಸ್ಥಳೀಯ ಪ್ರಾಧಿಕಾರಗಳ ಸದಸ್ಯರ ನೇಮಕದಲ್ಲಿ ಜೆಡಿಎಸ್‌ನವರು ಒಪ್ಪಂದವನ್ನು ಗಾಳಿಗೆ ತೂರಿದ್ದಾರೆ. ಸಮಿತಿಗಳಿಗೆ ಜೆಡಿಎಸ್‌ ಶಾಸಕರು ಇರುವ ಕಡೆಗೆ ಮೂವರು ಜೆಡಿಎಸ್‌ ಕಾರ್ಯಕರ್ತರನ್ನು ಹಾಗೂ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಲಾಗಿತ್ತು. ಆದರೆ, ಐದು ಸ್ಥಾನಗಳಿಗೂ ಜೆಡಿಎಸ್‌ನವರನ್ನೇ ನೇಮಕ ಮಾಡಲಾಗುತ್ತಿದೆ. ಇದರಿಂದಾಗಿ, ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಕೈಯಲ್ಲೇ ಅಧಿಕಾರ ಕೇಂದ್ರೀಕೃತವಾಗಿದೆ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಸಿ.ವೇಣುಗೋಪಾಲ್, ‘ಜೆಡಿಎಸ್‌ನ ಮಾದರಿಯನ್ನೇ ನಾವು ಅನುಸರಿಸೋಣ. ಮೈತ್ರಿ ಕಾರಣಕ್ಕೆ ಪಕ್ಷದ ಭವಿಷ್ಯ ನಾಶ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ ಶಾಸಕರು ಇರುವ ಕಡೆಗಳಲ್ಲಿ ಐದು ಸ್ಥಾನಗಳಿಗೂ ನಮ್ಮ ಕಾರ್ಯಕರ್ತರ ಹೆಸರನ್ನೇ ಶಿಫಾರಸು ಮಾಡಿ ಮುಖ್ಯಮಂತ್ರಿಗೆ ಕಳುಹಿಸಿ. ಜೆಡಿಎಸ್‌ನವರಿಗೂ ಅದರ ಬಿಸಿ ತಟ್ಟಲಿ’ ಎಂದು ಸೂಚಿಸಿದರು.

ಮಹೇಶ್‌ ವಿಷಯ ಚರ್ಚೆ ಬೇಡ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್. ಮಹೇಶ್ ಬಗ್ಗೆ ಯಾರೂ ಮಾತನಾಡಬಾರದು ಎಂದು ವೇಣುಗೋಪಾಲ್ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆಗೆ ಯಾವ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ತೀರ್ಮಾನವಾಗಿಲ್ಲ. ಮಹೇಶ್ ರಾಜೀನಾಮೆಗೆ ಕಾಂಗ್ರೆಸ್ ಸಚಿವರು, ಶಾಸಕರು ಕಾರಣ ಎಂಬ ಅಭಿಪ್ರಾಯ ಇದೆ. ಈ ಅಭಿಪ್ರಾಯ ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ವರ್ತಿಸಬೇಕು. ಅನಗತ್ಯವಾಗಿ ಬಿಎಸ್‌ಪಿಯನ್ನು ಟೀಕಿಸುವುದು ಬೇಡ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT