ಕಾಂಗ್ರೆಸ್‌ ಹೈಕಮಾಂಡ್‌ಗೆ ಆತಂಕ ಮೂಡಿಸಿರುವ ‘ಪ್ರಭಾವ’

7
ಸಚಿವ ಸ್ಥಾನ, ನಿಗಮ, ಮಂಡಳಿ ನೇಮಕಕ್ಕೆ ಲಾಬಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಆತಂಕ ಮೂಡಿಸಿರುವ ‘ಪ್ರಭಾವ’

Published:
Updated:

ನವದೆಹಲಿ: ಸಚಿವ ಸ್ಥಾನ ಹಾಗೂ ನಿಗಮ, ಮಂಡಳಿಯ ನೇಮಕ ಕೋರಿ ಪಕ್ಷದ 10ರಿಂದ 15 ಜನ ಶಾಸಕರು ಸಚಿವರೊಬ್ಬರ ನೇತೃತ್ವದಲ್ಲಿ ಪ್ರಭಾವ ಬೀರುತ್ತಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಗೊಂದಲಕ್ಕೆ ಒಳಗಾಗಿದೆ.

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ 10 ಜನ ಶಾಸಕರ ಗುಂಪು ಕಳೆದ ಮೂರು ದಿನಗಳಿಂದ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಬೀಡು ಬಿಟ್ಟಿದೆ.

ಆಕಾಂಕ್ಷಿಗಳೆಲ್ಲರನ್ನೂ ಸೆಳೆಯಲು ಬಿಜೆಪಿ ಮುಖಂಡರು ಗಾಳ ಬೀಸಬಹುದು ಎಂಬ ಆತಂಕವೂ ಪಕ್ಷದ ವರಿಷ್ಠರನ್ನು ಕಾಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ, ‘ಬಿ.ಎಸ್‌. ಯಡಿಯೂರಪ್ಪ ಆದಿಯಾಗಿ ಅನೇಕರು ಸರ್ಕಾರ ಉರುಳಿಸಲು ಪ್ರಯತ್ನ ನಡೆಸುತ್ತಿದ್ದಾರೆ’ ಎಂಬ ಮಾತುಗಳೂ ಪಕ್ಷದೊಳಗೇ ಕೇಳಿಬರುತ್ತಿರುವುದರಿಂದ ಆ ಆತಂಕ ಇಮ್ಮಡಿಗೊಂಡಿದೆ.

ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ರಹೀಂಖಾನ್, ಬಿ.ನಾರಾಯಣ, ಬಿ.ನಾಗೇಂದ್ರ, ರಘು ಮೂರ್ತಿ, ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ಮತ್ತಿತರರನ್ನು ಕರೆದುಕೊಂಡು ಸ್ವತಃ ಸಚಿವ ರಮೇಶ ಜಾರಕಿಹೊಳಿ ಅವರೇ ವರಿಷ್ಠರನ್ನು ಭೇಟಿ ಮಾಡಿ ಪ್ರಭಾವ ಬೀರುತ್ತಿರುವುದು ಕಾಂಗ್ರೆಸ್‌ ಶಾಸಕರನ್ನು ಸೆಳೆಯುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಶಂಕೆ ಮೂಡುವುದಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದಷ್ಟೇ ಈ ಎಲ್ಲಾ ಶಾಸಕರೊಂದಿಗೆ ರಾಜಸ್ಥಾನದ ಆಜ್ಮೇರ್‌ ದರ್ಗಾ ಯಾತ್ರೆ ನಡೆಸಿ, ನಂತರ ನವದೆಹಲಿಗೆ ಬಂದು ವರಿಷ್ಠರನ್ನು ಕಂಡು ಹೋಗಿದ್ದ ಸಚಿವ ಜಾರಕಿಹೊಳಿ ಅವರು ಇದೀಗ ಮತ್ತೆ ಅದೇ ಗುಂಪಿನೊಂದಿಗೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್‌, ಅಹ್ಮದ್‌ ಪಟೇಲ್‌ ಹಾಗೂ ಗುಲಾಂ ನಬಿ ಆಜಾದ್‌ ಅವರನ್ನು ಭೇಟಿ ಮಾಡಿ 10 ಜನ ಶಾಸಕರಲ್ಲಿ ಕನಿಷ್ಠ ಇಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಲ್ಲದೆ, ಕನಿಷ್ಠ ಆರು ಜನರಿಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡಬೇಕು ಎಂಬ ಮನವಿಯೊಂದಿಗೆ ಒತ್ತಡ ಹೇರಿದ್ದಾರೆ. ಇವರಿಗೆ ರಾಯಚೂರು ಸಂಸದ ಬಿ.ವಿ. ನಾಯಕ್‌ ಅವರೂ ಬೆಂಬಲ ನೀಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ ಗಮನ ಸೆಳೆಯಲೆಂದೇ ಸೋಮವಾರ ರಾತ್ರಿ ನವದೆಹಲಿಗೆ ಬಂದಿರುವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರೂ ಮಂಗಳವಾರ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಂಸದ ಕೆ.ಎಚ್‌ ಮುನಿಯಪ್ಪ ಪುತ್ರಿ ರೂಪಾ ಶಶಿಧರ, ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಅವರೂ ಸಚಿವ ಸ್ಥಾನವನ್ನು ಕೋರಿದವರಲ್ಲಿ ಪ್ರಮುಖರಾಗಿದ್ದಾರೆ.

ಸ್ಥಾನಮಾನಗಳಿಗಾಗಿ ಬೇಡಿಕೆ ಹೆಚ್ಚಿರುವುದೂ ಪಕ್ಷದ ಹೈಕಮಾಂಡ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು, ಬಿಜೆಪಿ ಬೀಸಲಿರುವ ಗಾಳಕ್ಕೆ ಬಲಿಯಾಗದಂತೆ ತಡೆಯಲು ಪ್ರಬಲ ಅಸ್ತ್ರವನ್ನು ಬಳಸುವುದು ಅನಿವಾರ್ಯವಾಗಿದೆ.
**
ಮೋದಿ, ಶಾ ಜೊತೆ ಯಡಿಯೂರಪ್ಪ ಚರ್ಚೆ
ನವದೆಹಲಿ:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆದು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿ ಲೋಕಸಭೆ ಚುನಾವಣೆ ಎದುರಿಸಬೇಕೇ ಅಥವಾ ಯಾವುದೇ ಉಸಾಬರಿಗೆ ಹೋಗದೆ ಲೋಕಸಭೆ ಚುನಾವಣೆ ಎದುರಿಸಬೇಕೇ’ ಎಂಬ ಬಗ್ಗೆ ಅವರು ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿ 17 ಸ್ಥಾನ ಗಳಿಸಿರುವ ಬಿಜೆಪಿ ಈ ಬಾರಿ ಕನಿಷ್ಠ 20ರಿಂದ 22 ಸ್ಥಾನ ಗಳಿಸಬೇಕು ಎಂಬ ಗುರಿ ಹೊಂದಿದ್ದು, ಈ ಗುರಿ ತಲುಪಲು ಯಾವ ಕಾರ್ಯತಂತ್ರ ರೂಪಿಸಬೇಕು ಎಂಬ ಜಿಜ್ಞಾಸೆ ಇರುವುದರಿಂದ ಯಡಿಯೂರಪ್ಪ ಅವರೊಂದಿಗಿನ ವರಿಷ್ಠರ ಭೇಟಿ ಮಹತ್ವ ಪಡೆದಿದೆ.

ಸರ್ಕಾರ ರಚನೆಗಾಗಿ ‘ಆಪರೇಷನ್‌ ಕಮಲ’ಕ್ಕೆ ಕೈಹಾಕಿದಲ್ಲಿ, ಪಕ್ಷ ಎದುರಿಸುವ ಟೀಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಗೊಂದಲಗಳಿಗೆ ಅವಕಾಶ ನೀಡದೆಯೇ ಲೋಕಸಭೆ ಚುನಾವಣೆ ಎದುರಿಸಿದಲ್ಲಿ ಆಗಬಹುದಾದ ಲಾಭಗಳು ಏನು ಎಂಬ ಕುರಿತೂ ವರಿಷ್ಠರೊಂದಿಗಿನ ಮಾತುಕತೆ ಸಂದರ್ಭ ಯಡಿಯೂರಪ್ಪ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !