25 ಕಡೆ ಅಧಿಕಾರ ಚುಕ್ಕಾಣಿಗೆ ಕಾಂಗ್ರೆಸ್ ತಂತ್ರ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ 25 ಕಡೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ಅತಂತ್ರ ಫಲಿತಾಂಶ ಬಂದಿರುವ ಕಡೆಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕು ಎಂದು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಉಭಯ ಪಕ್ಷಗಳು ದೋಸ್ತಿ ಮಾಡಿಕೊಳ್ಳಲಿವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಈಗಾಗಲೇ ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಮುಂದುವರಿಕೆ ಹಾಗೂ ಲೋಕಸಭಾ ಚುನಾವಣೆ ತಯಾರಿ ಸಂಬಂಧ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಸಚಿವರ ಜತೆಗೆ ಶುಕ್ರವಾರ ಸಮಾಲೋಚನೆ ನಡೆಸಿದರು.
ಶಿವಮೊಗ್ಗ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ತುಮಕೂರು ಹಾಗೂ ಮೈಸೂರಿನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ. 102 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ಗೆ 32 ಕಡೆ, ಬಿಜೆಪಿಗೆ 25 ಕಡೆ, ಜೆಡಿಎಸ್ಗೆ 13 ಕಡೆ ಬಹುಮತ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಐದು ಕಡೆಗಳಲ್ಲಿ ಪಕ್ಷೇತರರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. 27 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
‘ಸ್ಥಳೀಯ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಗೆಲುವು ಪಡೆದಿದೆ. ಕೆಲವೆಡೆ ಅತಂತ್ರ ಸ್ಥಿತಿ ಇದೆ. ಹೀಗಾಗಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು ಅಲ್ಲಿಯೂ ನಾವೇ ಅಧಿಕಾರ ರಚಿಸಲು ನಿರ್ಧರಿಸಿದ್ದೇವೆ’ ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ, ಎಲ್ಲ ಜಿಲ್ಲಾ ಸಚಿವರು ತಮ್ಮ ಕ್ಷೇತ್ರಗಳಿಗೆ ತೆರಳುವಂತೆಯೂ ಸೂಚನೆ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದೆ. ಈ ಬಗ್ಗೆ ಹೆಚ್ಚು ಗಮನ ನೀಡಿ, ಸಮಸ್ಯೆ ಆಲಿಸಲು ಜಿಲ್ಲೆಗಳಿಗೆ ತೆರಳುವಂತೆ ಹೇಳಲಾಗಿದೆ’ ಎಂದರು.
ಗೋಕಾಕ್, ನಿಪ್ಪಾಣಿ, ಚಿಕ್ಕೋಡಿ, ಕೊಣ್ಣೂರು, ಖಾನಾಪುರಲ್ಲಿ ಪಕ್ಷೇತರರು ಅಧಿಕ ಸ್ಥಾನಗಳನ್ನು ಗಳಿಸಿದ್ದಾರೆ. ಈ ಪಕ್ಷೇತರರ ಜತೆಗೆ ಸಮಾಲೋಚನೆ ನಡೆಸಲು ಪಕ್ಷದ ಜಿಲ್ಲಾ ಮುಖಂಡರಿಗೆ ಸೂಚಿಸಲಾಗಿದೆ. ಚಾಮರಾಜನಗರ, ಉಳ್ಳಾಲ ಹಾಗೂ ಬಂಟ್ವಾಳದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಎಸ್ಡಿಪಿಐ ಜತೆಗೆ ಕೈಜೋಡಿಸಬೇಕಿದೆ.
ಮೇಯರ್ ಆಯ್ಕೆ ಸಂಬಂಧ ಸಹ ಸಭೆಯಲ್ಲಿ ಚರ್ಚಿಸಲಾಯಿತು. ಯಾವುದೇ ಕಾರಣಕ್ಕೂ ಮೇಯರ್ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡಬಾರದು ಎಂದು ಸಚಿವರು ಸಲಹೆ ನೀಡಿದರು. ಜಯನಗರದ ಪಾಲಿಕೆ ಸದಸ್ಯೆ ಗಂಗಾಂಬಿಕೆ (ವೀರಶೈವ–ಲಿಂಗಾಯತ) ಹಾಗೂ ಶಾಂತಿನಗರದ ಪಾಲಿಕೆ ಸದಸ್ಯೆ ಸೌಮ್ಯಾ ಶಿವಕುಮಾರ್ (ಒಕ್ಕಲಿಗ) ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.
ಆರ್.ವಿ.ದೇಶಪಾಂಡೆ, ಎನ್.ಎಚ್.ಶಿವಶಂಕರ ರೆಡ್ಡಿ, ಯು.ಟಿ.ಖಾದರ್, ಜಯಮಾಲಾ ಹಾಗೂ ರಮೇಶ್ ಜಾರಕಿಹೊಳಿ ಬಿಟ್ಟು ಉಳಿದೆಲ್ಲ ಕಾಂಗ್ರೆಸ್ ಸಚಿವರು ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದರು.
**
ಅಧಿಕಾರ ಚುಕ್ಕಾಣಿಗೆ ಮೀಸಲಾತಿ ಅಸ್ತ್ರ
ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
27 ಕಡೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಈ ಹಿಂದಿನ ಪಟ್ಟಿ ಬಿಜೆಪಿಗೆ ಹೆಚ್ಚು ಅನುಕೂಲಕಾರಿಯಾಗಿತ್ತು. ಚಿತ್ರದುರ್ಗ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸಲು ಹಾಗೂ ಕಾಂಗ್ರೆಸ್–ಜೆಡಿಎಸ್ಗೆ ಅನುಕೂಲ ಮಾಡಿಕೊಡಲು ಮೀಸಲಾತಿ ಬದಲಾಯಿಸಲಾಗಿದೆ ಎಂದು ಬಿಜೆಪಿ ದೂರಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.