ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಗೆ ‘ಕೈ’ ತಂತ್ರ: ಉಚ್ಚಾಟಿತರ ಕ್ಷೇತ್ರಕ್ಕೆ ತಂಡ ಕಳುಹಿಸಲು ನಿರ್ಧಾರ

Last Updated 31 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಿ, ಮುಂಬರುವ ಉಪಚುನಾವಣೆಗೆ ಸಜ್ಜುಗೊಳಿಸುವತ್ತ ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ.

ಆಪರೇಷನ್ ಕಮಲಕ್ಕೆ ತುತ್ತಾಗಿದ್ದ 14 ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಆ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಆರಂಭಿಸಿದೆ. ಪಕ್ಷದ ಹಿರಿಯರು, ಪ್ರಮುಖರನ್ನು ಒಳಗೊಂಡ ತಂಡವನ್ನು ರಚಿಸಿ ಆ ಕ್ಷೇತ್ರಗಳ ಪರಿಸ್ಥಿತಿ ಅಧ್ಯಯನ ನಡೆಸುವುದು. ಪರ್ಯಾಯ ನಾಯಕತ್ವ ಗುರುತಿಸುವ ಮೂಲಕ ಈಗಿನಿಂದಲೇ ಸಂಘಟನೆ ಚುರುಕುಗೊಳಿಸುವುದು. ಕ್ಷೇತ್ರದಲ್ಲಿ ಇನ್ನೂ ಯಾರೆಲ್ಲ ಪಕ್ಷ ತೊರೆದು ಅವರ ಜತೆಗೆ ಹೋಗಲಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲು ಕೆಪಿಸಿಸಿ ಮುಖಂಡರು ಮುಂದಾಗಿದ್ದಾರೆ.

14 ಕ್ಷೇತ್ರಗಳಲ್ಲಿ ಮುಂದೆ ಏನು ಮಾಡಬೇಕು, ಪಕ್ಷ ಸಂಘಟನೆಯ ಪರ್ಯಾಯ ಮಾರ್ಗಗಳು, ಪ್ರತಿ ಕ್ಷೇತ್ರಕ್ಕೆ ಯಾರ ನೇತೃತ್ವದಲ್ಲಿ ತಂಡ ಕಳುಹಿಸಬೇಕು, ಯಾರಿಗೆಲ್ಲ ಜವಾಬ್ದಾರಿ ವಹಿಸಬೇಕು ಎಂಬುದನ್ನು ಚರ್ಚಿಸಲು ಗುರುವಾರ ಕಾಂಗ್ರೆಸ್ ಪ್ರಮುಖರ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಂತಹ ಸಂದರ್ಭ ಎದುರಾದರೂ ಕೈಕೊಟ್ಟು ಹೋದವರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಲಾಗಿದೆ.

ಸಮಾವೇಶದ ಬದಲು ಪ್ರವಾಸ
ರಾಜ್ಯದಲ್ಲಿ ಪಕ್ಷ ಸಂಘಟಿಸಲು ದೊಡ್ಡ ಮಟ್ಟದ ಸಮಾವೇಶ ಮಾಡುವುದರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಿಂದೆ ಸರಿದಿದ್ದಾರೆ. ವಿಧಾನಸಭಾ ಕ್ಷೇತ್ರ, ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟಿಸಲು ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕಾಡುತ್ತಿದ್ದ ರಾಜಕೀಯ ಅಸ್ಥಿರತೆಯಿಂದಾಗಿ ಪಕ್ಷ ಸಂಘಟನೆ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈಗ ಒಂದು ಹಂತಕ್ಕೆ ಬಂದಿರುವುದರಿಂದ ಸಂಘಟನೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

‘ಶಾಸಕರ ಅನರ್ಹತೆ: ಜನರೇ ವಿಶ್ಲೇಷಿಸಲಿ’
‘ಆಪರೇಷನ್ ಕಮಲಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಸದಸ್ಯತ್ವವನ್ನು ಅನರ್ಹಗೊಳಿಸಿ ನ್ಯಾಯಬದ್ಧವಾಗಿತೀರ್ಪು ನೀಡಿದ್ದೇನೆ. ಈ ತೀರ್ಪಿನ ವಿಶ್ಲೇಷಣೆಯನ್ನು ಜನರಿಗೆ ಬಿಟ್ಟಿದ್ದೇನೆ’ ಎಂದು ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಸದಸ್ಯತ್ವ ಸ್ವೀಕರಿಸಿ ಮಾತನಾಡಿದರು. ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈಗ ಸಭಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಹೊಸದಾಗಿ ಸದಸ್ಯತ್ವ ಪಡೆದುಕೊಂಡರು.

‘ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದ್ದು, ನಾವು ಪಕ್ಷಕ್ಕೆ ಏನು ಕೊಡುತ್ತೇವೆ ಎಂಬುದು ಮುಖ್ಯವಾಗಬೇಕು. ಪ್ರಧಾನಿ ಹುದ್ದೆಯನ್ನೇಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದಾರೆ’ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಕ್ಷ ತೊರೆದು ಸ್ವಾರ್ಥ ರಾಜಕಾರಣ ಮಾಡಿದ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಮೂಲಕ ರಮೇಶ್ ಕುಮಾರ್ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದರಿಂದಾಗಿ ಪಕ್ಷ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಿದಂತಾಗಿದೆ’ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಗೋವಾ, ಉತ್ತರ ಪ್ರದೇಶದಲ್ಲಿ ವಿವಿಧ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಆಸೆ ತೋರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆಮಿಷಕ್ಕೆ ಬಗ್ಗದಿದ್ದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ತೋರಿಸಿ ಬೆದರಿಸಲಾಗುತ್ತಿದೆ. ಈಗ ಸುಪ್ರೀಂಕೋರ್ಟ್, ಚುನಾವಣೆ ಆಯೋಗಕ್ಕೂ ಕೈಹಾಕಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ನಾಶಮಾಡುತ್ತಿದ್ದಾರೆ. ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕೋಮುವಾದಿಗಳನ್ನು ಎದುರಿಸಲು ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು ಎಂದರು.

ಕೆಪಿಸಿಸಿಯಿಂದ ಕೇವಿಯಟ್‌ ಸಲ್ಲಿಕೆ
‘ಪಕ್ಷಾಂತರ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅನರ್ಹಗೊಂಡಿರುವ ಕಾಂಗ್ರೆಸ್‌ ಶಾಸಕರು, ವಿಧಾನಸಭಾ ಅಧ್ಯಕ್ಷರ ಆದೇಶ ಪ್ರಶ್ನಿಸಿ ರಿಟ್‌ ಅರ್ಜಿ ಸಲ್ಲಿಸಿದರೆ, ಯಾವುದೇ ಮಧ್ಯಂತರ ಆದೇಶ ಮಾಡುವ ಮುನ್ನ ನಮ್ಮ ವಾದವನ್ನೂ ಪರಿಗಣಿಸಬೇಕು’ ಎಂದು ಕೋರಿ ಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ಹೈಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದಾರೆ.

‘ನೋಟಿಸ್ ಜಾರಿಗೊಳಿಸಿ ವಾದ ಮಂಡಿಸಲು ನಮಗೂ ಅವಕಾಶ ಕಲ್ಪಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅನರ್ಹಗೊಂಡಿರುವ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT