ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರದ ರಕ್ಷಣೆ ವಿಚಾರ: ‘ವಿಶ್ವಾಸ’ ಮೂಡಿಸಲು ಅನರ್ಹತೆ ಅಸ್ತ್ರ

Last Updated 15 ಜುಲೈ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರದ ರಕ್ಷಣೆ ವಿಚಾರದಲ್ಲಿ ಹಾವು– ಏಣಿ ಆಟ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರಲ್ಲಿ ಮತ್ತೆ ವಿಶ್ವಾಸ ಮೂಡಿದೆ. ಭಾನುವಾರದ ಬೆಳವಣಿಗೆ ಗಮನಿಸಿದ ಶಾಸಕರ ಮುಖದಲ್ಲಿ ಗೆಲುವು ಮರೆಯಾಗಿತ್ತು. ಆದರೆ ಸೋಮವಾರ ಹೊಸ ಚಿಗುರು ಮೂಡಿದಂತೆ ಕಾಣುತ್ತಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಅತೃಪ್ತ ಶಾಸಕರ ವಿಚಾರವೇ ಪ್ರಮುಖವಾಗಿ ಚರ್ಚೆಯಾಗಿದೆ. ‘ಮೈತ್ರಿ ಸರ್ಕಾರ ವಿಶ್ವಾಸ ಮತ ಗಳಿಸುವಲ್ಲಿ ಯಶಸ್ಸು ಕಾಣಲಿದೆ. ಯಾವ ಶಾಸಕರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಸರ್ಕಾರ ಉಳಿಯಲಿದೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

ಕಾನೂನು ಪ್ರಯೋಗ: ಈವರೆಗೆ ಮನವೊಲಿಸುವ ಪ್ರಯತ್ನ ಮಾಡಲಾಗಿದ್ದು, ಇನ್ನೂ ಇದಕ್ಕೆ ಬಗ್ಗುವಂತೆ ಕಾಣುತ್ತಿಲ್ಲ. ಏನಿದ್ದರೂ ಪಕ್ಷಾಂತರ ನಿಷೇಧ ಕಾಯಿದೆಯ ಅಸ್ತ್ರ ಬಳಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಶಾಸಕಾಂಗ ಪಕ್ಷದ ಸಭೆಗೂ ಬಂದಿಲ್ಲ, ವಿಧಾನಸಭಾ ಅಧಿವೇಶನದಲ್ಲೂ ಭಾಗವಹಿಸಿಲ್ಲ. ಇದು ಪಕ್ಷಾಂತರ ನಿಷೇಧ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ವಿಚಾರವನ್ನೇ ಮುಂದಿಟ್ಟುಕೊಂಡು ಅತೃಪ್ತರನ್ನು ಮಣಿಸುವ ಪ್ರಯತ್ನ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬೈ ಹೋಟೆಲ್‌ನಲ್ಲಿ ತಂಗಿರುವ ಅತೃಪ್ತರು, ತಮ್ಮ ರಾಜೀನಾಮೆ ಅಂಗೀಕರಿಸಲು ವಿಧಾನ ಸಭಾಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದ್ದು, ಕೋರ್ಟ್ ತೀರ್ಪು ನೋಡಿಕೊಂಡು ಅತೃಪ್ತರನ್ನು ಮಣಿಸಲು ಸಿದ್ದರಾಮಯ್ಯ ವ್ಯೂಹ ರಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ಮುಂಬೈನಲ್ಲಿ ತಂಗಿರುವ ಶಾಸಕರು ತಮ್ಮ ನಿಲುವಿಗೆ ಬದ್ಧರಾಗಿಕುಳಿತಿದ್ದಾರೆ. ಆದರೆ ಕಾನೂನಿಗೆ ಬಗ್ಗಲೇಬೇಕಿದ್ದು, ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ವಾಪಸ್ ಬರಲಿದ್ದಾರೆ. ಸರ್ಕಾರ ಅಪಾಯದಿಂದ ಪಾರಾಗಲಿದ್ದು, ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳವುದು ಬೇಡ’ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಮತ್ತೊಮ್ಮೆ ಸಭೆ: ಶಾಸಕರು ತಂಗಿ ರುವ ಯಶವಂತಪುರದಲ್ಲಿರುವ ತಾಜ್ ವಿವಾಂತಾ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಮತ್ತೊಮ್ಮೆ ಶಾಸಕರ ಜತೆ ಮುಖಂಡರು ಸಭೆ ನಡೆಸಿದರು. ಗುರುವಾರ ವಿಶ್ವಾಸ ಮತಯಾಚನೆ ನಡೆಯಲಿದ್ದು, ಒಗ್ಗಟ್ಟು ಕಾಪಾಡುವುದು ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆ ಚರ್ಚಿಸಲಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೇರುದಂತೆ ಹಿರಿಯ ಮುಖಂಡರು ಭಾಗವಹಿಸಿದ್ದರು.

ಸಭೆಗೆ ಬಂದ ಅಂಜಲಿ

ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸೋಮವಾರ ರಾತ್ರಿ ವಿವಾಂತಾ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲೇ ಇರುವುದಾಗಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಖರ್ಗೆ, ಆಜಾದ್‌ರಿಂದ ಬೆದರಿಕೆ: ದೂರು

ಮುಂಬೈ: ‘ಕಾಂಗ್ರೆಸ್‌ನ ಹಿರಿಯ ಮುಖಂಡರಿಂದ ನಮಗೆ ಬೆದರಿಕೆ ಇದೆ’ ಎಂದು ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ನ ಯಾವುದೇ ನಾಯಕರನ್ನು ಭೇಟಿ ಮಾಡುವ ಇಚ್ಛೆ ತಮಗೆ ಇಲ್ಲ ಎಂದೂ ಅವರು ಹೇಳಿದ್ದಾರೆ.

ಅತೃಪ್ತರ ಮನವೊಲಿಸಲು ಖರ್ಗೆ ಮತ್ತು ಆಜಾದ್‌ ಅವರು ಮುಂಬೈಗೆ ಭೇಟಿ ನೀಡಲಿದ್ದಾರೆ ಎಂಬ ವದಂತಿಗಳ ಬೆನ್ನಿಗೇ ಈ ಪತ್ರ ಬರೆಯಲಾಗಿದೆ.

ಒಟ್ಟು 14 ಅತೃಪ್ತ ಶಾಸಕರು ಮುಂಬೈನ ಪೋವೈನಲ್ಲಿರುವ ರಿನೈಸಾನ್ಸ್‌ ಹೋಟೆಲ್‌ನಲ್ಲಿ ತಂಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಗುಲಾಂ ನಬಿ ಆಜಾದ್‌ ಅವರಿಂದ ‘ಗಂಭೀರ ಬೆದರಿಕೆ’ ಇದೆ ಎಂದು ಪೋವೈ ಪೊಲೀಸ್‌ ಠಾಣಾಧಿಕಾರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ. ಪತ್ರದ ಪ್ರತಿಗಳನ್ನು ಪೊಲೀಸ್‌ ಉಪ ಆಯುಕ್ತರು ಮತ್ತು ಹೋಟೆಲ್‌ನ ಆಡಳಿತ ಮಂಡಳಿಗೂ ಕಳುಹಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್‌ ಅವರಿಂದ ಬೆದರಿಕೆ ಇದೆ ಎಂದು ಕಳೆದ ವಾರವೂ ಈ ಶಾಸಕರು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಶಾಸಕರನ್ನು ಭೇಟಿಯಾಗಲು ಶಿವಕುಮಾರ್‌ ಅವರು ಮುಂಬೈಗೆ ಹೋಗಿದ್ದರು. ಆದರೆ, ಹೋಟೆಲ್‌ನ ಹೊರ ಭಾಗದಲ್ಲಿಯೇ ಅವರನ್ನು ಪೊಲೀಸರು ತಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT