ಮಂಗಳವಾರ, ಮೇ 18, 2021
24 °C
ನಿತೇಶ್‌ ವಿಂಬಲ್ಡನ್‌ ಪಾರ್ಕ್‌ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ಪಕ್ಷ ಬೆಂಬಲಿಗರ ನಡುವೆ ಹೈಡ್ರಾಮಾ

ಪಕ್ಷೇತರರಿಗಾಗಿ ಕಾಂಗ್ರೆಸ್‌– ಬಿಜೆಪಿ ಜಟಾಪಟಿ; ಕಾರ್ಯಕರ್ತನ ಕೈ ಸೇರಿದ ಪಿಸ್ತೂಲ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಕಡೆಗೆ ವಾಲಿರುವ ಎಚ್‌. ನಾಗೇಶ್‌ (ಪಕ್ಷೇತರ/ಮುಳಬಾಗಿಲು) ಮತ್ತು ಆರ್‌. ಶಂಕರ್‌ (ಕೆಪಿಜೆಪಿ/ರಾಣೆಬೆನ್ನೂರು) ಅವರನ್ನು ಸೆಳೆಯಲು ಈ ಇಬ್ಬರೂ ತಂಗಿದ್ದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಿತೇಶ್‌ ವಿಂಬಲ್ಡನ್‌ ಪಾರ್ಕ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮುಂಭಾಗದಲ್ಲಿ ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ನಡುವೆ ಮಂಗಳವಾರ ಸಂಜೆ ಹೈಡ್ರಾಮಾ ನಡೆಯಿತು.

ವಿಧಾನಸಭೆ ಕಲಾಪಕ್ಕೆ ಗೈರಾಗಿರುವ ಈ ಇಬ್ಬರು ಶಾಸಕರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ (ಮಂಗಳವಾರ ಸಂಜೆ) ಹಾಜರಾಗಲು ಬಯಸಿದ್ದರು. ಮುಂಬೈಯಲ್ಲಿದ್ದ ಇಬ್ಬರೂ ಈ ಕಾರಣಕ್ಕೆ ನಗರಕ್ಕೆ ಬಂದಿದ್ದರು. ಸೋಮವಾರ ತಡರಾತ್ರಿ ಈ ಮಾಹಿತಿ ಅರಿತಿದ್ದ ಸಚಿವ ಡಿ.ಕೆ. ಶಿವಕುಮಾರ್‌, ಯಾವುದೇ ಕಾರಣಕ್ಕೂ ಈ ಇಬ್ಬರು ಕಲಾಪದಲ್ಲಿ ಹಾಜರಾಗದಂತೆ ತಡೆಯಲು ಯೋಜನೆ ರೂಪಿಸಿದ್ದರು. ಅಲ್ಲದೆ, ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೂ ಸೂಚನೆ ನೀಡಿದ್ದರು.

ಹೀಗಾಗಿ, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಮುಂಭಾಗದಲ್ಲಿ ಗುಂಪುಗೂಡಿದ ಕಾಂಗ್ರೆಸ್‌ ಕಾರ್ಯಕರ್ತರು, ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸು ಪಡೆದ ಪಕ್ಷೇತರ ಶಾಸಕರು ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಕೆಲಹೊತ್ತಿನ ಬಳಿಕ ಮತ್ತಷ್ಟು ಸಂಖ್ಯೆಯಲ್ಲಿ ‘ಕೈ’ ಕಾರ್ಯಕರ್ತರು ಜಮಾಯಿಸಿದರು. ವಿಧಾನಪರಿಷತ್‌ ಸದಸ್ಯರಾದ ಐವನ್ ಡಿಸೋಜಾ, ನಾರಾಯಣಸ್ವಾಮಿ, ಗೋಪಾಲಸ್ವಾಮಿ, ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌, ವಿನಯ್‌ ಕಾರ್ತಿಕ್‌ ನೇತೃತ್ವದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ತಂದೆಯನ್ನು ಭೇಟಿ ಮಾಡಲು ಬಂದಿದ್ದ ಆರ್‌. ಶಂಕರ್‌ ಅವರ ಪುತ್ರ ಅಪಾರ್ಟ್‌ಮೆಂಟ್‌ ಒಳಗೆ ಪ್ರವೇಶಿಸದಂತೆ ಕಾರ್ಯಕರ್ತರು ತಡೆದರು. ಜನಾಕ್ರೋಶ ಕಂಡು ಶಂಕರ್‌ ಪುತ್ರ ತಕ್ಷಣವೇ ಸ್ಥಳದಿಂದ ತೆರಳಿದರು.

ವಿಧಾನಸಭೆ ಕಲಾಪಕ್ಕೆ ಹೋಗಲು ಮುಂದಾಗಿದ್ದ ಪಕ್ಷೇತರ ಶಾಸಕರಿಗೆ ಕಾಂಗ್ರೆಸ್‌ ಬೆಂಬಲಿಗರು ತಡೆಯೊಡ್ಡುತ್ತಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಸದಸ್ಯ ಪದ್ಮನಾಭ ರೆಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ನಿಂತುಕೊಂಡ ಪೊಲೀಸರು, ಕೈ–ಕೈ ಮಿಲಾಯಿಸದಂತೆ ತಡೆದರು. ಅಲ್ಲದೆ, ಗುಂಪುಗೂಡಿದವರನ್ನು ಚದುರಿಸಲು ಹರಸಾಹಸಪಟ್ಟರು.

ನೂಕಾಟ, ತಳ್ಳಾಟ, ಜಟಾಪಟಿ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಎರಡೂ ಪಕ್ಷಗಳ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಈ ವೇಳೆ, ರೇಸ್‌ಕೋರ್ಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು.

ಕಾರ್ಯಕರ್ತನ ಕೈ ಸೇರಿದ ಇನ್‌ಸ್ಪೆಕ್ಟರ್‌ ಪಿಸ್ತೂಲ್‌!

ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯ ಮಧ್ಯೆ ಸಿಲುಕಿಕೊಂಡ ಪೊಲೀಸರು ಕೆಲಹೊತ್ತು ಮೂಕಪ್ರೇಕ್ಷಕರಾದರು. ಕಾಂಗ್ರೆಸ್‌ ಕಾರ್ಯಕರ್ತರನ್ನು ಚದುರಿಸುವ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ಒಬ್ಬರ ಬಳಿಯಲ್ಲಿದ್ದ ಪಿಸ್ತೂಲ್‌ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಕೈಸೇರಿದ ಘಟನೆಯೂ ನಡೆಯಿತು. ತಕ್ಷಣ ಎಚ್ಚೆತ್ತುಕೊಂಡ ಆ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ಗಳಿಗೆ ಸೂಚನೆ ನೀಡಿ ಪಿಸ್ತೂಲ್‌ ಮರಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಪತ್ರಕರ್ತರ ಮೇಲೆ ಇನ್‌ಸ್ಪೆಕ್ಟರ್‌ ದರ್ಪ

ಪ್ರತಿಭಟನೆಯ ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ಪತ್ರಕರ್ತರ ಮೇಲೆ ಹೈ ಗ್ರೌಂಡ್ಸ್‌ ಇನ್‌ಸ್ಪೆಕ್ಟರ್‌ ಇ.ಐ. ಸಿರಾಜುದ್ದೀನ್‌ ದರ್ಪ ಪ್ರದರ್ಶಿಸಿದರು. ‘ನಿಷೇಧಾಜ್ಞೆ ಜಾರಿಯಾಗಿದೆ (ಸೆಕ್ಷನ್‌ 144). ತಕ್ಷಣ ಜಾಗ ಖಾಲಿ ಮಾಡಿ’ ಎಂದು ಎಗರಾಡಿದ ಸಿರಾಜುದ್ದೀನ್‌, ಪತ್ರಕರ್ತರೆಂದು ಹೇಳಿಕೊಂಡರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಪೊಲೀಸರ ಸೂಚನೆಯಂತೆ ಅಪಾರ್ಟ್‌ಮೆಂಟ್‌ ಸಮೀಪದಿಂದ ದೂರ ಸರಿಯುತ್ತಿದ್ದಂತೆ ಪತ್ರಕರ್ತರನ್ನು ಹಿಂಬಾಲಿಸಿದ ಇನ್‌ಸ್ಪೆಕ್ಟರ್‌, ಡೆಕ್ಕನ್‌ ಹೆರಾಲ್ಡ್‌ ವರದಿಗಾರ ಉಮೇಶ ಯಾದವ್‌ ಅವರನ್ನು ಬಲವಂತವಾಗಿ ಎಳೆದೊಯ್ದು ಜೀಪು ಹತ್ತಿಸಿದರು. ಇನ್‌ಸ್ಪೆಕ್ಟರ್‌ ಅವರ ಈ ಕ್ರಮಕ್ಕೆ ಪತ್ರಕರ್ತರು ತೀವ್ರ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಂತೆ ಸ್ಥಳಕ್ಕೆ ಬಂದು ಹಿರಿಯ ಪೊಲೀಸ್‌ ಅಧಿಕಾರಿಗಳು, ನಡೆದ ಘಟನೆಗೆ ಕ್ಷಮೆ ಯಾಚಿಸಿದರು. ಘಟನೆಯ ಬಳಿಕ ಪ್ರತಿಕ್ರಿಯಿಸಿದ ಸಿರಾಜುದ್ದೀನ್‌, ‘ಪತ್ರಕರ್ತ ರೆಂದು ಗೊತ್ತಿರಲಿಲ್ಲ’ ಎಂದು ಸಬೂಬು ಹೇಳಿದರು.


ಶೆಟ್ಟರ್‌ಗೆ ಮುಹೂರ್ತ ಕೊಟ್ಟವನೂ ನಾನೇ: ಎಚ್‌.ಡಿ. ರೇವಣ್ಣ

ಬೆಂಗಳೂರು: ‘ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ ಮಂಡಿಸಲು ಯಡಿಯೂರಪ್ಪ ಅಡ್ಡಿ ಮಾಡಿದ್ದರು. ಆಗ ಅವರಿಗೆ ಬಜೆಟ್ ಮಂಡನೆಗೆ ನಾನೇ ಮುಹೂರ್ತ ಇಟ್ಟುಕೊಟ್ಟಿದ್ದೆ’ ಎಂದು ಎಚ್‌.ಡಿ.ರೇವಣ್ಣ ಅವರು ಹೇಳಿ ಎಲ್ಲರನ್ನೂ ಅಚ್ಚರಿಗೆ ಕೆಡವಿದರು.

ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಶೆಟ್ಟರ್‌ ಅವರಿಗೆ ಬಜೆಟ್‌ ಮಂಡನೆಗೆ ಅವಕಾಶ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪಟ್ಟು ಹಿಡಿದು ಕುಳಿತಿದ್ದರು. ನಾನು ಡೇಟ್ ಇಟ್ಟು ಕೊಡುತ್ತೇನೆ, ಯಾಕೆ ಅಂಗೀಕಾರ ಆಗುವುದಿಲ್ಲ ನೋಡೋಣ ಎಂದು ಅವರಿಗೆ ಹೇಳಿದ್ದೆ. ಆ ಬಳಿಕ ಬಜೆಟ್‌ ಮಂಡಿಸಿದರು’ ಎಂಬುದಾಗಿ ವಿವರಿಸಿದರು.

‘ಕುಮಾರಸ್ವಾಮಿ ಅಧಿಕಾರದಿಂದ ನಿರ್ಗಮಿಸುವುದರಿಂದ ಕುಮಾರಸ್ವಾಮಿಗೆ ನಷ್ಟ ಇಲ್ಲ. ಬಡವರಿಗೆ ನಷ್ಟ ಆಗುತ್ತದೆ’ ಎಂದೂ ರೇವಣ್ಣ ಹೇಳಿದರು.

‘ಪ್ರಾಮಾಣಿಕವಾಗಿ ಇರುವವರಿಗೆ ವಚನ ಭ್ರಷ್ಟರು ಎನ್ನುತ್ತೀರಲ್ಲ. ಬೋಪಯ್ಯ ಅವರ ಹಾಗೆ ನಡೆದುಕೊಂಡರೆ ನೀವು ವಚನ ಭ್ರಷ್ಟರು ಆಗುತ್ತಿರಲಿಲ್ಲ’ ಎಂದು ಸಭಾಧ್ಯಕ್ಷರನ್ನು ಉದ್ದೇಶಿಸಿ ರೇವಣ್ಣ ನುಡಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ್ರೆ ಅವರನ್ನು ಹೇಗೆ ಕಂಟ್ರೋಲ್‌ಗೆ ತಗೋಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಹೇಳಿದಾಗ ಸದನದಲ್ಲಿ ನಗುವಿನ ಅಲೆ ಹೊಮ್ಮಿತು.

ಕೆಲಸ ಆಗಿಲ್ಲ ಎಂದು ಪಕ್ಷಾಂತರ, ಇದೇ ಮೊದಲು: ಬಸವರಾಜ ಹೊರಟ್ಟಿ

ಬೆಂಗಳೂರು: ಮಂತ್ರಿ ಸ್ಥಾನ ಕೊಟ್ಟಿಲ್ಲ, ಕ್ಷೇತ್ರದಲ್ಲಿ ಕೆಲಸ ಆಗಿಲ್ಲ ಎಂದು ಆರೋಪಿಸಿ, ಪಕ್ಷಾಂತರ ಮಾಡಿದ ಪ್ರಥಮ ಪ್ರಕರಣ ರಾಜ್ಯದಲ್ಲಿ ಇದೀಗ ನಡೆದುಹೋಗಿದೆ.

ಈ ಮೊದಲು ದೇವರಾಜ ಅರಸು, ಎಸ್‌.ಆರ್‌.ಬೊಮ್ಮಾಯಿ, ಬಿ.ಎಸ್‌.ಯಡಿಯೂರಪ್ಪ ಮತ್ತು ಇದೀಗ ಎಚ್‌.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಮತ ವಿಭಜನೆ ಆಧಾರದಲ್ಲಿ ಬಹುಮತ ಕಳೆದುಕೊಂಡು ಅಧಿಕಾರ ತ್ಯಜಿಸಿದ್ದಾರೆ ಎಂದು ನೆನಪಿಸುತ್ತಾರೆ ಕರ್ನಾಟಕ ವಿಧಾನಮಂಡಲದಲ್ಲಿ ಹಾಲಿ ಇರುವ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ.

‘ಪಕ್ಷಾಂತರ ಕಾರಣಕ್ಕೆ ಹಲವಾರು ಸರ್ಕಾರಗಳು ಉರುಳಿವೆ. 1970ರ ದಶಕದಿಂದ ಇದು ಆರಂಭವಾಯಿತು. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೂ ಹಲವಾರು ಸರ್ಕಾರಗಳು ಇದೇ ಕಾರಣಕ್ಕೆ ಪತನವಾದವು. ಆದರೆ ರಾಜ್ಯದಲ್ಲಿ ಈ ಬಾರಿ ಉದ್ಭವಿಸಿರುವ ಸನ್ನಿವೇಶ ಇದೇ ಪ್ರಥಮ ಬಾರಿಗೆ ಕಂಡ ವಿದ್ಯಮಾನ. ರಾಜಕಾರಣದಲ್ಲಿ ಮೌಲ್ಯ ಪಾತಾಳಕ್ಕಿಳಿದ ಪ್ರಸಂಗ ಇದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘1980ರ ದಶಕಕ್ಕಿಂತ ಮೊದಲು ರಾಜಕೀಯ ಎಂದರೆ ಪವಿತ್ರ ಎಂಬ ಭಾವನೆ ಇತ್ತು. ಸಿ.ಎನ್‌.ಪಾಟೀಲ್‌ ಮಂತ್ರಿಯಾದಾಗ ಅವರಿಗೆ ಗೊತ್ತೇ ಇರಲಿಲ್ಲ, ರಾಯಚೂರಿನಲ್ಲಿ ಅವರು ತಮ್ಮ ತೋಟದಲ್ಲಿ ನೀರು ಹಾಕುತ್ತಿದ್ದರು. ಹುಚ್ಚುಮಾಸ್ತಿಗೌಡರು ಸರ್ಕಾರಿ ಬಸ್‌ನಲ್ಲಿ ಬಂದು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂತಹ ಆದರ್ಶಗಳನ್ನು ಇನ್ನು ಕಾಣಲು ಸಾಧ್ಯವೇ ಇಲ್ಲವೇನೋ’ ಎಂದು ಹೊರಟ್ಟಿ ವಿಷಾದದಿಂದ ನುಡಿದರು.

**

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...  

‘ದೋಸ್ತಿ’ ಮನೆಗೆ: ಅಧಿಕಾರ ಬಿಎಸ್‌ವೈಗೆ​

ಅಭಿವೃದ್ಧಿಯ ಹೊಸ ಪರ್ವ ಇಲ್ಲಿಂದ ಆರಂಭವಾಗುತ್ತೆ: ಯಡಿಯೂರಪ್ಪ ಭರವಸೆ 

ವಿಶ್ವಾಸಮತ ನಿರ್ಣಯದ ಪರ 99, ವಿರುದ್ಧ 105: ಉರುಳಿತು ಮೈತ್ರಿ ಸರ್ಕಾರ 

ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತೇನೆ: ಸದನದಲ್ಲಿ ಎಚ್‌ಡಿಕೆ ಮಾತು

ಐಎಂಎ ಮನ್ಸೂರ್‌ಖಾನ್‌ನನ್ನು ಬಂಧಿಸಿದ್ದು ನಮ್ಮ ಎಸ್‌ಐಟಿ ಅಧಿಕಾರಿಗಳು: ಎಚ್‌ಡಿಕೆ  

ರಾಜೀನಾಮೆ ಪತ್ರವನ್ನು ಯಡಿಯೂರಪ್ಪಗೆ ತೋರಿಸಿದ ಸ್ಪೀಕರ್ ರಮೇಶ್‌ಕುಮಾರ್ 

ಬೆಂಗಳೂರಿನಲ್ಲಿ 2 ದಿನ ನಿಷೇಧಾಜ್ಞೆ: ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಬಂಧನ

ಸೌಧದಲ್ಲಿ ವಿಲವಿಲ, ಮೀಮ್‌ಗಳಲ್ಲಿ ಕಿಲಕಿಲ

ವ್ಯಂಗ್ಯಚಿತ್ರಗಳಲ್ಲಿ ಕಂಡ ಕಲಾಪ ಪ್ರಸಂಗ

ಪಾಕ್‌ ಪ್ರಧಾನಿ ಜತೆ ಬಿರಿಯಾನಿ ತಿನ್ನುವವರು ನೀವು: ಬಿಜೆಪಿಗೆ ತಿವಿದ ಯು.ಟಿ.ಖಾದರ್

ಅತೃಪ್ತ ಶಾಸಕರ ಪರ ಸ್ಪೀಕರ್‌ ಭೇಟಿಯಾದ ವಕೀಲ ಅಶೋಕ್ ಹಾರನಹಳ್ಳಿ

ವಿಶ್ವಾಸಮತ: ಕಲಾಪದಲ್ಲಿ ಭಾಗವಹಿಸಲು ಆಡಳಿತ ಪಕ್ಷದ ನಿರಾಸಕ್ತಿ?

ವಿಧಾನಸಭೆ ಕಲಾಪ ಆರಂಭ: ಸದನಕ್ಕೆ ಬಂದ ಸ್ಪೀಕರ್, ಬಿಜೆಪಿ ಶಾಸಕರು, ಮೈತ್ರಿ ನಾಪತ್ತೆ

ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ ನಕಲಿ? ಚರ್ಚೆಗೆ ಗ್ರಾಸ 

ರಾಜೀನಾಮೆ ಕೊಡಲು ಹೇಳ್ರಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಪರೋಕ್ಷ ಸಿಡಿ ಮಿಡಿ 

ದೋಸ್ತಿಗೆ ಇನ್ನೂ ಸಿಗದ ‘ವಿಶ್ವಾಸ’; ಮತಕ್ಕೆ ಹಾಕಲು ಮಂಗಳವಾರ ಸಂಜೆ 6ರ ಗಡುವು 

ಕಾಯುವುದಷ್ಟೇ ಬಿಜೆಪಿ ಕಾಯಕ 

ಬಿರಿಯಾನಿ ತಿನ್ನದಿದ್ದರೆ ಹೇಗೆ: ಮುಖ್ಯಮಂತ್ರಿಗೆ ಸಭಾಧ್ಯಕ್ಷರ ಪ್ರಶ್ನೆ 

ರಾಜೀನಾಮೆ ಕೊಟ್ಟವರಿಗೂ ವಿಪ್‌ ಅನ್ವಯ; ಸ್ಪೀಕರ್ ರೂಲಿಂಗ್ 

‘ಬಿಜೆಪಿ ಕೈಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯ ರಕ್ತ’ 

ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ: ಅತೃಪ್ತ ‌ಶಾಸಕರಿಂದ ಸ್ಪೀಕರ್‌ಗೆ ಪತ್ರ 

ದೇವರ ವರ: ಇಬ್ಬರು ಮುಖ್ಯಮಂತ್ರಿ– ಎಚ್‌ಡಿಕೆ–ಬಿಎಸ್‌ವೈಗೆ ದೇವರ ಹೂ ಪ್ರಸಾದ 

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೊ: ಸದನದಲ್ಲಿ ಕಣ್ಣೀರಿಟ್ಟ ಲಿಂಬಾವಳಿ

ಸುಪ್ರೀಂಕೋರ್ಟ್ ಅಂಗಳದಲ್ಲಿ ಕರ್ನಾಟಕ ರಾಜಕಾರಣ: ಇಲ್ಲಿದೆ ಈವರೆಗಿನ ಸಮಗ್ರ ಮಾಹಿತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು