ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ತೀರ್ಮಾನದತ್ತ ಕಾಂಗ್ರೆಸ್ ನಾಯಕರ ಚಿತ್ತ

ಸಂಪುಟ: ದೆಹಲಿಗೆ ರಾಜ್ಯ ನಾಯಕರು
Last Updated 20 ಡಿಸೆಂಬರ್ 2018, 20:56 IST
ಅಕ್ಷರ ಗಾತ್ರ

ಬೆಳಗಾವಿ: ಸಂಪುಟ ವಿಸ್ತರಣೆಯೊ, ಪುನಾರಚನೆಯೊ ಎಂಬ ಗೊಂದಲದಲ್ಲಿಯೇ ಕಾಂಗ್ರೆಸ್‌ ರಾಜ್ಯ ನಾಯಕರು ದೆಹಲಿಗೆ ದೌಡಾಯಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತೆಗೆದುಕೊಳ್ಳುವ ತೀರ್ಮಾನದತ್ತ ಎಲ್ಲರ ಚಿತ್ತ ನೆಟ್ಟಿದೆ.

ಬೆಂಗಳೂರಿನಿಂದ ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ದೆಹಲಿಗೆ ದೌಡಾಯಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಈಗಾಗಲೇ ಅಲ್ಲಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಗುರುವಾರ ಸಂಜೆಯೇ ದೆಹಲಿಯಲ್ಲಿ ಭೇಟಿ ಮಾಡಿ ಸಂಪುಟಕ್ಕೆ ಯಾರನ್ನೆಲ್ಲ ಪರಿಗಣಿಸಬೇಕು, ನಿಗಮ ಮಂಡಳಿ ಮತ್ತು ಸಂಸದೀಯ ಕಾರ್ಯದರ್ಶಿ ಸ್ಥಾನ ಯಾರಿಗೆ ನೀಡಬೇಕು ಎಂಬ ಬಗ್ಗೆ ಮೊದಲ ಸುತ್ತಿನ ಚರ್ಚೆ ನಡೆಸಲು ರಾಜ್ಯ ನಾಯಕರು ತೀರ್ಮಾನಿಸಿದ್ದರು. ಆದರೆ, ರಾಜ್ಯ ನಾಯಕರು ಅಲ್ಲಿಗೆ ತಲುಪುವುದು ವಿಳಂಬವಾಗಿದ್ದರಿಂದ ಈ ಸಭೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲು ನಿರ್ಧರಿಸಲಾಗಿದೆ.

ಶಿಮ್ಲಾದಲ್ಲಿರುವ ರಾಹುಲ್‌ ಗಾಂಧಿ ಗುರುವಾರ ರಾತ್ರಿ ದೆಹಲಿಗೆ ಮರಳಿದ್ದಾರೆ. ಆದರೆ, ಅವರ ಜೊತೆ ರಾಜ್ಯ ನಾಯಕರ ಭೇಟಿ ಇನ್ನೂ ನಿಗದಿಯಾಗಿಲ್ಲ. ಆದರೆ, ನಾಯಕರ ಮಧ್ಯೆ ಶುಕ್ರವಾರವೇ ಚರ್ಚೆ ನಡೆಯುವುದು ಖಚಿತ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಈ ಮಧ್ಯೆ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಇನ್ನಷ್ಟೆ ಸಂಪುಟ ರಚನೆ ಆಗಬೇಕಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಳೆದುತೂಗಿ ಖಾತೆ ಹಂಚಿಕೆ ಮಾಡಬೇಕಾಗಿದೆ. ಅಲ್ಲಿನ ಗೊಂದಲ ಮುಗಿದ ಬಳಿಕ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಕಾಂಗ್ರೆಸ್‌ ಕೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳುವಸಾಧ್ಯತೆ ಇದೆ ಎಂಬ ಮಾತೂ ಇದೆ.

ಸಂಪುಟ ವಿಸ್ತರಿಸುವಂತೆ ಸಚಿವಸ್ಥಾನ ಆಕಾಂಕ್ಷಿ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಮುಗಿದ ಮರುದಿನವೇ (ಡಿ. 22) ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಿರ್ಧಾರದಿಂದ ಹಿಂದೆ ಸರಿದರೆ ಎದುರಾಗಬಹುದಾದ ಆಂತರಿಕ ಬಿಕ್ಕಟ್ಟಿನ ಬಗ್ಗೆಯೂ ರಾಜ್ಯ ನಾಯಕರು ರಾಹುಲ್‌ ಗಾಂಧಿ ಜೊತೆ ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT