ಪ್ರಧಾನಿ ವಿರುದ್ಧ ತನಿಖೆ ನಡೆಯಲಿ

ಮಂಗಳವಾರ, ಮಾರ್ಚ್ 26, 2019
33 °C
ಪರಿವರ್ತನಾ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಗ್ರಹ

ಪ್ರಧಾನಿ ವಿರುದ್ಧ ತನಿಖೆ ನಡೆಯಲಿ

Published:
Updated:
Prajavani

ಮಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ನಗರದ ಹೊರವಲಯದ ಅಡ್ಯಾರ್‌ನಲ್ಲಿ ಬುಧವಾರ ಆಯೋಜಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳುವಾಗಿವೆ ಎಂದು ಕೇಂದ್ರ ಸರ್ಕಾರ ಈಗ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಬಯಲಾಗಿರುವ ದಾಖಲೆಗಳು ಸುಳ್ಳು ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ಬಹಿರಂಗವಾಗಿರುವ ದಾಖಲೆಗಳು ಭ್ರಷ್ಟಾಚಾರ ನಡೆದಿರುವುದನ್ನು ಎತ್ತಿ ತೋರಿಸುತ್ತಿವೆ’ ಎಂದರು.

ಭ್ರಷ್ಟಾಚಾರ ನಡೆದಿರುವುದು ಈಗಾಗಲೇ ಸಾಬೀತಾಗಿದೆ. ಪ್ರಧಾನಿಯವರ ಸಚಿವಾಲಯವೇ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಹಗರಣದಲ್ಲಿ ಮೋದಿ ನೇರವಾಗಿ ಭಾಗಿಯಾಗಿದ್ದಾರೆ. ಮೋದಿ ಚೌಕಿದಾರ್ ಅಲ್ಲವೇ ಅಲ್ಲ. ರಫೇಲ್ ವಿಚಾರದಲ್ಲಿ ಸಂಸತ್ತು, ನ್ಯಾಯಾಲಯ, ಇಡೀ ದೇಶದ ಜನರನ್ನು ದಿಕ್ಕು ತಪ್ಪಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚು ಯೋಧರ ಸಾವು: ಸಮಾವೇಶ ಉದ್ಘಾಟಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲೇ ಭಾರತ ಹೆಚ್ಚು ಯೋಧರನ್ನು ಕಳೆದುಕೊಂಡಿದೆ. ಆದರೆ, ಸತ್ಯ ಮರೆಮಾಚಲು ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪುಲ್ವಾಮಾದಲ್ಲಿ 49 ಯೋಧರ ಸಾವಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ಗುಪ್ತಚರ ಇಲಾಖೆ, ರಾ ಎಲ್ಲಿ ಹೋಗಿದ್ದವು? ದಾಳಿಯ ಸಾಧ್ಯತೆ ಕುರಿತ ಎಚ್ಚರಿಕೆಯನ್ನು ಏಕೆ ಹಗುರವಾಗಿ ಪರಿಗಣಿಸಿದರು? ಇದು ನಿಶ್ಚಿತವಾಗಿ ಕೇಂದ್ರ ಸರ್ಕಾರದ ವೈಫಲ್ಯದಿಂದ ಆದ ಹಾನಿ ಎಂದರು.

ಯಾವುದೇ ಪಕ್ಷದ ಸರ್ಕಾರ ಇರಲಿ. ಯೋಧರ ಹೆಣಗಳನ್ನು ರಾಜಕೀಯಕ್ಕೆ ಬಳಸುವುದು ನೀಚತನ. ಯೋಧರ ಸಾವಿನಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಅಕ್ಷಮ್ಯ. ನರೇಂದ್ರ ಮೋದಿ ಇಂತಹ ಹೀನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

1965 ಮತ್ತು 1971ರಲ್ಲಿ ಭಾರತೀಯ ಸೇನೆ ಪಾಕಿಸ್ತಾನವನ್ನು ಸೋಲಿಸಿತ್ತು. ಬಾಂಗ್ಲಾದೇಶದ ವಿಮೋಚನೆಗೆ ಇಂದಿರಾ ಗಾಂಧಿ ಕಾರಣ. ಆದರೆ, ಕಾಂಗ್ರೆಸ್ ಪಕ್ಷ ಯಾವತ್ತೂ ಅದನ್ನು ರಾಜಕೀಯ ಲಾಭಕ್ಕೆ ಬಳಸಲಿಲ್ಲ ಎಂದರು.

ಪ್ರಧಾನಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ

‘ಆರ್‌ಎಸ್‌ಎಸ್‌ ರಿಮೋಟ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುತ್ತಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

‘ರಾಜ್ಯ ಸರ್ಕಾರ ಕಾಂಗ್ರೆಸ್ ರಿಮೋಟ್ ಕಂಟ್ರೋಲ್‌ನಲ್ಲಿದೆ’ ಎಂದು ಪ್ರಧಾನಿಯವರು ಕಲಬುರ್ಗಿಯಲ್ಲಿ ಮಾಡಿದ ಆರೋಪಕ್ಕೆ ಅವರು ಬುಧವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.

‘ಪ್ರಧಾನಿಯವರು ರಾಜಕೀಯವಾಗಿ ಮಾತನಾಡಬೇಕು. ಆದರೆ ಅಸಂಬದ್ಧವಾಗಿ ಮಾತನಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾದರೂ ಒಂದು ರಿಮೋಟ್ ಅಂತಾ ಇರುತ್ತಾ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಕೂಡ ರಿಮೋಟ್ ಕಂಟ್ರೋಲ್‌ನಲ್ಲಿದ್ದಾರೆ. ಅವರನ್ನು ನಿಯಂತ್ರಿಸುವ ಯಾವುದು ಹೇಳಲಾ? ಆರ್‌ಎಸ್‌ಎಸ್‌ ರಿಮೋಟ್‌ನ ನಿಯಂತ್ರಣದಲ್ಲಿ ಅವರಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !