ಗುರುವಾರ , ಅಕ್ಟೋಬರ್ 17, 2019
21 °C

ಉಪ ಚುನಾವಣೆಯಲ್ಲಿ 10 ಕ್ಷೇತ್ರ ಗೆಲ್ಲುವ ಗುರಿ ಕೊಟ್ಟ ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಅದಕ್ಕಾಗಿ ಎಲ್ಲರೂ ಈಗಿನಿಂದಲೇ ತಯಾರಿ ನಡೆಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಮುಖಂಡರಿಗೆ ಸೂಚಿಸಿದರು.

ಕಾಂಗ್ರೆಸ್‌ ಮುಖಂಡರು ಹಾಗೂ 15 ಕ್ಷೇತ್ರಗಳ ವೀಕ್ಷಕರ ಜತೆ ಶನಿವಾರ ಸಭೆ ನಡೆಸಿದ ಅವರು, ಎಲ್ಲ ಕ್ಷೇತ್ರಗಳ ಮಾಹಿತಿ ಪಡೆದುಕೊಂಡರು.

ರಾಜೀನಾಮೆ ಕೊಟ್ಟ ಶಾಸಕರ 17 ಕ್ಷೇತ್ರಗಳ ಪೈಕಿ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ ಸೇರಿದ್ದ  ಆರ್. ಶಂಕರ್ ಸೇರಿದಂತೆ 14 ಜನ ಪಕ್ಷಕ್ಕೆ ಹಾಗೂ ನಮ್ಮ ಮೇಲೆ ವಿಶ್ವಾಸವಿಟ್ಟ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಅಧಿಕಾರದ ವ್ಯಾಮೋಹದಿಂದ ಪಕ್ಷ ತೊರೆದು ಮೋಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆಲ್ಲ ಪಾಠ ಕಲಿಸಲೇಬೇಕು ಎಂದು ಪ್ರತಿಪಾದಿಸಿದರು.

ಚುನಾವಣೆ ಘೋಷಣೆಯಾಗಿ ಮತ್ತೆ ಮುಂದಕ್ಕೆ ಹೋಗುವ ಮುನ್ನವೇ ಸಿದ್ಧತೆ ನಡೆಸಿದ್ದೇವೆ. ಎರಡು ಕಡೆ ಸಮಾವೇಶವನ್ನೂ ನಡೆಸಿದ್ದೇವೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಸಮಯ ಸಿಕ್ಕಿದೆ. ಜಿಲ್ಲಾ ಹಾಗೂ ಕ್ಷೇತ್ರಮಟ್ಟದಲ್ಲಿನ ಸಣ್ಣ ಪುಟ್ಟ ಭಿನ್ನತೆ ಮರೆತು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ 10 ಕ್ಷೇತ್ರಗಳನ್ನು ಸಲೀಸಾಗಿ ಗೆಲ್ಲಬಹುದು. ತಕ್ಷಣಕಾರ್ಯಪ್ರವೃತ್ತರಾಗಿ ಎಂದರು.

15ರಂದು ಅಭ್ಯರ್ಥಿ ಆಯ್ಕೆ?: ವೀಕ್ಷಕರು ನೀಡಿರುವ ವರದಿ ಆಧರಿಸಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದೆ. ಇದೇ 15ರಂದು ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬೆಂಗಳೂರಿಗೆ ಬರಲಿದ್ದು, ಅಂದೇ ಆಯ್ಕೆ ನಡೆಯುವ ಸಾಧ್ಯತೆ ಇದೆ.

Post Comments (+)