ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಿಂಗಾರೆಡ್ಡಿ ಹಿಂದೆ ಬಿದ್ದ ಕಾಂಗ್ರೆಸ್ಸಿಗರು

Last Updated 14 ಜುಲೈ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಪ್ರಯತ್ನವನ್ನು ಮೈತ್ರಿ ಪಕ್ಷಗಳ ಮುಖಂಡರು ಮುಂದುವರಿದಿದ್ದು, ರಾಜೀನಾಮೆ ವಾಪಸ್ ಪಡೆಯುವ ಯಾವುದೇ ಭರವಸೆಯೂ ಸಿಕ್ಕಿಲ್ಲ ಎನ್ನಲಾಗಿದೆ.

ಮ‌ುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇತರ ನಾಯಕರು ಭಾನುವಾರ ರಾತ್ರಿ ಮನವೊಲಿಸಿದರು. ಸುಮಾರು ಒಂದೂವರೆ ಗಂಟೆಕಾಲ ಚರ್ಚಿಸಿದ ನಂತರ ಕಾಂಗ್ರೆಸ್ ನಾಯಕರು ತೆರಳಿದರು. ನಂತರ ಮಾತುಕತೆ ಮುಂದುವರಿಸಿದ ಕುಮಾರಸ್ವಾಮಿ, ಶಿವಕುಮಾರ್ ಒಂದು ಗಂಟೆಗೂ ಹೆಚ್ಚು ಸಮಯ ಚರ್ಚಿಸಿ, ಮನಗೆಲ್ಲುವ ಪ್ರಯತ್ನ ನಡೆಸಿದರು.

‘ಪಕ್ಷ ಬಿಡದಂತೆ ಮುಖಂಡರು ಮನವಿ ಮಾಡಿದ್ದಾರೆ. ರಾಜೀನಾಮೆ ನೀಡಿದ ದಿನದಿಂದಲೂ ಇದೇ ಹೇಳುತ್ತಿದ್ದಾರೆ. ಮುಂದೆ ಏನಾಗುತ್ತದೊ ನೋಡೋಣ’ ಎಂದು ಸಭೆಯ ನಂತರ ರಾಮಲಿಂಗಾರೆಡ್ಡಿ ತಿಳಿಸಿದರು. ಬೆಳಿಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಭೇಟಿಯಾಗಿದ್ದರು.

ಎಂ.ಟಿ.ಬಿ.ನಾಗರಾಜ್ ಮುಂಬೈ ವಿಮಾನ ಹತ್ತಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಚುರುಕಾದವು. ದೆಹಲಿಯಿಂದ ವಾಪಸಾದ ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸರಣಿಸಭೆಗಳನ್ನು ನಡೆಸಿದರು.

‘ಸಭೆಯಲ್ಲಿ ಆಶಾದಾಯಕ ವಾತಾವರಣ ಕಂಡುಬಂದಿಲ್ಲ. ಶಾಸಕರು ಕೈಮೀರಿ ಹೋಗಿದ್ದಾರೆ, ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಇದ್ದರು. ಸರ್ಕಾರ ಉಳಿಸಿಕೊಳ್ಳುವುದು ಕಷ್ಟಕರ ಎಂಬ ಮಾತುಗಳು ಕೇಳಿಬಂದವು. ಅಂತಿಮ ಹಂತದವರೆಗೂ ಸತತ ಪ್ರಯತ್ನ ಮುಂದುವರಿಸುವುದು, ಮುಂದೆ ಏನಾಗೊತ್ತದೊ ನೋಡೋಣ ಎಂಬ ನಿರ್ಧಾರಕ್ಕೆ ಬಂದರು’ ಎಂದು ಮೂಲಗಳು ತಿಳಿಸಿವೆ.

ರೇವಣ್ಣ ವಿರುದ್ಧ ಕಿಡಿ: ಈ ಬೆಳವಣಿಗೆ ಮಧ್ಯೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ ಅವರು ಸಚಿವ ಎಚ್.ಡಿ.ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬೆಂಗಳೂರು ನಗರದ ಅಭಿವೃದ್ಧಿಗೆ ₹24 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಯೋಜನೆ ರೂಪಿಸಿದರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಎಲ್ಲವನ್ನೂ ರೇವಣ್ಣ ನಿರ್ಧರಿಸಿದ್ದಾರೆ. ಮೈಸೂರು ರಸ್ತೆ ನಾಯಂಡಹಳ್ಳಿಯಿಂದ ಗೊರಗುಂಟೆಪಾಳ್ಯ, ಹೆಬ್ಬಾಳದ ವರೆಗೆ ಸಿಗ್ನಲ್ ಮುಕ್ತ ರಸ್ತೆ ಮಾಡುವಂತೆ ಹೇಳಿದರೂ ಕಿವಿಗೊಡಲಿಲ್ಲ. ನೆಪಮಾತ್ರಕ್ಕೆ ಪರಮೇಶ್ವರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದು, ಎಲ್ಲವನ್ನೂ ರೇವಣ್ಣ ಮಾಡುತ್ತಿದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ತರಾಟೆಗೆ: ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲ್‌ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆದುಕೊಂಡಿದ್ದಾರೆ. ‘ಎಲ್ಲವೂ ನಿಮ್ಮಿಂದಲೇ ಆಗಿದ್ದು. ನಿಮ್ಮ ಭಾಗದ ಶಾಸಕರಿಂದಲೇ ಇಷ್ಟೆಲ್ಲ ಸಮಸ್ಯೆ’ ಎಂದು ಹೇಳಿದರು ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ನಿರ್ಧಾರಕ್ಕೆ ಬದ್ದ: ಮುನಿರತ್ನ

ಬೆಂಗಳೂರು: ‘ರಾಮಲಿಂಗಾರೆಡ್ಡಿ ಜತೆಗೆ ಚರ್ಚಿಸಿಯೇ ಬೆಂಗಳೂರು ನಗರದ ನಾಲ್ವರು ಶಾಸಕರು (ರಾಮಲಿಂಗಾರೆಡ್ಡಿ, ಎಸ್.ಟಿ.ಸೋಮಶೇಖರ್, ಬೈರರತಿ ಬಸವರಾಜ್, ಮುನಿರತ್ನ) ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇವೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದ’ ಎಂದು ಮುನಿರತ್ನ ತಿಳಿಸಿದ್ದಾರೆ.

‘ಸೋಮವಾರ ವಿಧಾನ ಸಭಾಧ್ಯಕ್ಷರನ್ನು ರಾಮಲಿಂಗಾರೆಡ್ಡಿ ಭೇಟಿಯಾಗಲಿದ್ದಾರೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ನಾವೂ ಅವರನ್ನು ಹಿಂಬಾಲಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

***

ಎಲ್ಲ ಆಪರೇಷನ್ ಮಾಡುತ್ತಿರುವುದು ಬಿಜೆಪಿಯವರು. ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ

-ಡಿ.ಕೆ.ಶಿವಕುಮಾರ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT