ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಮನವೊಲಿಕೆಗೆ ಹೈಕಮಾಂಡ್‌ ಪ್ರಯತ್ನಿಸಲಿ; ಸಹೋದರ ಲಖನ್‌ ಜಾರಕಿಹೊಳಿ

Last Updated 31 ಡಿಸೆಂಬರ್ 2018, 14:34 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ಸಚಿವ ಸಂಪುಟದಿಂದ ಕೈಬಿಟ್ಟಿರುವುದರಿಂದ ಸಹಜವಾಗಿ ರಮೇಶ ಜಾರಕಿಹೊಳಿ ಅವರಿಗೆ ನೋವಾಗಿದೆ. ಅವರ ಮನವೊಲಿಸುವ ಕೆಲಸವನ್ನು ಸಚಿವ ಸತೀಶ ಜಾರಕಿಹೊಳಿ ಅವರೊಬ್ಬರ ಮೇಲೆ ಹಾಕದೇ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಧ್ಯಪ್ರವೇಶಿಸಿ ಸಮಾಧಾನಪಡಿಸಬೇಕೆಂದು ಸಹೋದರ ಲಖನ್‌ ಜಾರಕಿಹೊಳಿ ಆಗ್ರಹಿಸಿದರು.

ಗೋಕಾಕ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘2–3 ದಿನಗಳಲ್ಲಿಯೇ ಹೈಕಮಾಂಡ್‌ ಅವರ ಮನವೊಲಿಸಬೇಕು. ಇಲ್ಲದಿದ್ದರೆ ಮುಂದೆ ಪಕ್ಷಕ್ಕೆ ಏನಾದರೂ ಧಕ್ಕೆಯಾದರೆ ನಾವು ಜವಾಬ್ದಾರರಲ್ಲ’ ಎಂದು ನುಡಿದರು.

‘ರಮೇಶ ಅವರು ಕಳೆದ 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಪಕ್ಷವನ್ನು ಕಟ್ಟಿದ್ದಾರೆ. ಅವರಿಗೆ ಜಿಲ್ಲೆಯಾದ್ಯಂತ ಅಭಿಮಾನಿಗಳು, ಕಾರ್ಯಕರ್ತರು ಇದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರವನ್ನು ಗೆಲ್ಲಬೇಕಾದರೆ ರಮೇಶ ಅವರ ಬೆಂಬಲ ಬೇಕೆಬೇಕು. ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಹೈಕಮಾಂಡ್‌ ಪ್ರಯತ್ನಿಸಲಿ’ ಎಂದು ಒತ್ತಾಯಿಸಿದರು.

ದೆಹಲಿಗೆ ಹೋಗಿರಬಹುದು:

‘ರಮೇಶ ಅವರು ತಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಆಗಾಗ ನವದೆಹಲಿ, ಮುಂಬೈಗೆ ಹೋಗುತ್ತಾರೆ. ಅದೇ ರೀತಿ ಈಗ ನವದೆಹಲಿಗೆ ಹೋಗಿರಬಹುದು. ಆದರೆ, ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

'ಸತೀಶ ಅವರ ದೂರವಾಣಿ ಕರೆಗಳನ್ನು ಕೂಡ ರಮೇಶ ಸ್ವೀಕರಿಸುತ್ತಿಲ್ಲ. ನನ್ನ ಜೊತೆಯೂ ಸಂಪರ್ಕದಲ್ಲಿಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕರೆ ಪಕ್ಷದಲ್ಲಿಯೇ ಉಳಿಯುವಂತೆ ಸಲಹೆ ನೀಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT