ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಕಾಂಗ್ರೆಸ್‌–ಜೆಡಿಎಸ್‌ ರಣಕಹಳೆ

ಬಳ್ಳಾರಿ ಲೋಕಸಭೆ ಕ್ಷೇತ್ರ: ಶಾಂತಾ ನೆಪಮಾತ್ರ, ಜೆಡಿಎಸ್‌ ಅಭ್ಯರ್ಥಿ ಇಲ್ಲದ ಮೊದಲ ಚುನಾವಣೆ
Last Updated 30 ಅಕ್ಟೋಬರ್ 2018, 19:44 IST
ಅಕ್ಷರ ಗಾತ್ರ

ಬಳ್ಳಾರಿ: ಬಿಜೆಪಿ ಶಾಸಕ ಬಿ.ಶ್ರೀರಾಮುಲು ರಾಜೀನಾಮೆಯಿಂದ ತೆರವಾದ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವರ ಸಹೋದರಿ ಜೆ.ಶಾಂತಾ ಅಭ್ಯರ್ಥಿ. ಅವರದ್ದು ಎರಡನೇ ಬಾರಿಯ ಸ್ಪರ್ಧೆ. ಇನ್ನು, ತನ್ನ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರವಾಗಿ ಕಾಂಗ್ರೆಸ್‌, ಜೆಡಿಎಸ್‌ ಜೊತೆಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಡೀ ಸಮ್ಮಿಶ್ರ ಸರ್ಕಾರವೇ ಇಲ್ಲಿ ಬೀಡುಬಿಟ್ಟಿದೆ.

ಪ್ರಚಾರದ ನೆಪದಲ್ಲಿ ನಡೆಯುತ್ತಿರುವ ಪ್ರತಾಪ ಪ್ರದರ್ಶನ, ಮಾತಿನ ಯುದ್ಧಗಳು, ಟೀಕಾ ಪ್ರಹಾರಗಳು ಒಬ್ಬರನ್ನೊಬ್ಬರು ಮುಗಿಸುವ, ಹಳಿಯುವ, ತುಳಿಯುವ ಹವಣಿಕೆಯನ್ನು ಎತ್ತಿ ತೋರಿಸುತ್ತಿವೆ.

ಜನರು ಮಾತ್ರ, ‘ಅಭಿವೃದ್ಧಿಯ ವಿಷಯ ಮಾತಾಡುವುದು ಬಿಟ್ಟು ಇವರೇಕೆ ಹೀಗೆ ಕಚ್ಚಾಡುತ್ತಿದ್ದಾರೆ?’ ಎಂದು ತಮಾಷೆಯಿಂದ ನೋಡುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದರಿಂದಾಗಿ ಬಂದಿರುವ ಈ ಉಪಚುನಾವಣೆ ಬೇಕಾಗಿಯೇ ಇರಲಿಲ್ಲ ಎಂದು ಎಲ್ಲ ಪಕ್ಷದವರೂ ಹೇಳುತ್ತಾರೆ. ಆದರೆ, ಅನಿವಾರ್ಯವಾದ ಚುನಾವಣೆಯಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ ಮಾತ್ರ ಕದನ ಕುತೂಹಲಕ್ಕೆ ದಾರಿ ಮಾಡಿದೆ.

2009ರ ಚುನಾವಣೆಯಲ್ಲಿ ಮೊದಲಿಗೆ ಸ್ಪರ್ಧಿಸಿದಂದಿನಿಂದಲೂ ‘ನನ್ನದೇನೂ ಇಲ್ಲ, ಎಲ್ಲವೂ ನನ್ನ ಅಣ್ಣ ಶ್ರೀರಾಮುಲುವೇ’ ಎಂದು ಹೇಳುವುದನ್ನು ರೂಢಿಸಿಕೊಂಡಿರುವ, ಹಾಗೇ ಇರುವ ಶಾಂತಾ, ‘ಬಳ್ಳಾರಿಯ ಮಗಳು’ ಎಂಬ ಅಸ್ತ್ರವೊಂದನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿಯವರೆಲ್ಲರ ಕೈಯಲ್ಲೂ ಇದೇ ಅಸ್ತ್ರವಿದೆ.

(ಜೆ.ಶಾಂತಾ)

ಉಳಿದಂತೆ, ಅವರು ಸಂಸದರಾಗಿ ಮಾಡಿದ ಕೆಲಸವೇನು ಎಂಬ ಬಗ್ಗೆ ಅಧಿಕೃತವಾಗಿ ಮಾತನಾಡಲು ಬಿಜೆಪಿಯಲ್ಲಿ ಯಾರೂ ಸಿದ್ಧರಿಲ್ಲ. ಸಂಸತ್ತಿನಲ್ಲಿ ಎಷ್ಟು ಬಾರಿ ಅವರು ಮಾತನಾಡಿದರು ಎಂಬ ಲೆಕ್ಕ ಸ್ವತಃ ಶಾಂತಾ ಅವರ ಬಳಿಯೂ ಇಲ್ಲ.

ಕಣದಲ್ಲಿ ಶಾಂತಾ ಇದ್ದರೂ, ಶ್ರೀರಾಮುಲು ಅವರನ್ನೇ ಕಾಂಗ್ರೆಸ್‌–ಜೆಡಿಎಸ್‌ ಗುರಿಯಾಗಿಸಿಕೊಂಡಿವೆ. ಅವರ ವಿರುದ್ಧದದ ವಾಗ್ದಾಳಿಗಳೇ ವಿಜೃಂಭಿಸುತ್ತಿವೆ. ಶ್ರೀರಾಮುಲು ಕೂಡ ತಾವೇ ಅಭ್ಯರ್ಥಿ ಎಂಬ ಆವೇಶದಲ್ಲಿಯೇ ಸಂಚರಿಸುತ್ತಿದ್ದಾರೆ.
ಯಡಿಯೂರಪ್ಪ ಆದಿಯಾಗಿ ಎಲ್ಲ ಮುಖಂಡರೂ ಅವರನ್ನೇ ಅನುಸರಿಸುತ್ತಿದ್ದಾರೆ. ಎದುರಾಳಿ ಕಾಂಗ್ರೆಸ್‌–ಜೆಡಿಎಸ್‌ ದಾರಿಯೂ ಭಿನ್ನವಾಗಿಲ್ಲ.

‘ಉತ್ತಮ ಸಂಸದೀಯ ಪಟು, ವಾಗ್ಮಿ, ಕಳಂಕ ರಹಿತ ರಾಜಕಾರಣಿ, ವಾಲ್ಮೀಕಿ ಸಮುದಾಯಕ್ಕೆ ನೀಡಿದ ಕೊಡುಗೆ ದೊಡ್ಡದು’ ಎಂದು ಉಗ್ರಪ್ಪ ಅವರನ್ನು ಕಾಂಗ್ರೆಸ್ ಮುಂದುಮಾಡಿದೆ. ಬಿಜೆಪಿ, ‘ಉಗ್ರಪ್ಪ ಹೊರಗಿನವರು, ಜನರಿಗೆ ಅವರ ಪರಿಚಯವಿಲ್ಲ’ ಎಂಬ ಘೋಷಣೆಯೊಂದಿಗೆ ‘ಬಳ್ಳಾರಿ ಮಗಳ’ನ್ನು ತೋರಿಸುತ್ತಿದೆ.

ಇದೊಂದು ಸೀಮಿತ ಲೆಕ್ಕಾಚಾರ. ಹೊರಗಿನವರೇ ಆಗಿದ್ದ ಬಸವರಾಜೇಶ್ವರಿ, ವಿ.ಕೆ.ಆರ್‌.ವಿ.ರಾವ್‌, ಸೋನಿಯಾಗಾಂಧಿ ಇಲ್ಲಿಂದಲೇ
ಆಯ್ಕೆಯಾಗಿದ್ದರು.

ಸ್ಥಳೀಯತೆ ಎಂಬ ಪರಿಧಿಯಾಚೆಗೆ ಪಕ್ಷ ರಾಜಕಾರಣ, ಸಮ್ಮಿಶ್ರ ಸರ್ಕಾರದ ಪ್ರಭಾವ, ಅಭ್ಯರ್ಥಿಗಳ ವರ್ಚಸ್ಸು, ಶ್ರೀರಾಮುಲು ಮೇಲಾಟದ ಪರಿಣಾಮವಾಗಿ ಎರಡೂ ಪಕ್ಷಗಳ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಟಿಕೆಟ್‌ ದೊರಕದೇ ಪಕ್ಷೇತರರಾಗಿ ಸ್ಪರ್ಧಿಸಿರುವ ಡಾ.ಟಿ.ಆರ್‌.ಶ್ರೀನಿವಾಸ್‌ ಯಾರಿಗೂ ಪೈಪೋಟಿ ನೀಡುವ ಸ್ಥಿತಿಯಲ್ಲಿ ಇಲ್ಲ.

ಬಿಜೆಪಿ ಸರ್ಕಾರವಿದ್ದಾಗಲೇ ನಡೆದಿದ್ದ 2009ರ ಚುನಾವಣೆಯಲ್ಲಿ ಶಾಂತಾ ಕೇವಲ 2,243 ಮತಗಳ ಅಂತರದಲ್ಲಿ ಗೆದ್ದಿದ್ದರು. ಈಗ ಈ ಅಂತರ ಏನಾಗುತ್ತದೆ ಎಂಬ ಕುರಿತ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ.

ಎರಡನೇ ಉಪಚುನಾವಣೆ

ಕ್ಷೇತ್ರದಲ್ಲಿ ಮೊದಲ ಬಾರಿಗೆ 2000ನೇ ಇಸ್ವಿಯಲ್ಲಿ ಉಪಚುನಾವಣೆ ಎದುರಾಗಿತ್ತು. 1999ರಲ್ಲಿ ಸೋನಿಯಾಗಾಂಧಿ ಬಳ್ಳಾರಿ –ಅಮೇಥಿ ಎರಡರಲ್ಲೂ ಗೆದ್ದಿದ್ದರು. ಬಿಜೆಪಿಯ ಸುಷ್ಮಾ ಸ್ವರಾಜ್‌ ಎದುರಾಳಿಯಾಗಿದ್ದರಿಂದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಸೋನಿಯಾ ರಾಜೀನಾಮೆಯಿಂದ ಇಲ್ಲಿ ಉಪಚುನಾವಣೆ ನಡೆದಿತ್ತು.

17,08,266 ಒಟ್ಟು ಮತಗಳು
8,53,490 ಪುರುಷರು
8,54,561 ಮಹಿಳೆಯರು
215 ಇತರರು

2014ರ ಫಲಿತಾಂಶ
ಅಭ್ಯರ್ಥಿ: ಪಕ್ಷ: ಪಡೆದ ಮತ
ಬಿ.ಶ್ರೀರಾಮುಲು: ಬಿಜೆಪಿ: 5,34,406
ಎನ್‌.ವೈ.ಹನುಮಂತಪ್ಪ: ಕಾಂಗ್ರೆಸ್‌:4,49,262
ಆರ್‌.ರವಿನಾಯಕ್‌: ಜೆಡಿಎಸ್‌: 12,613

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT