ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಪಕ್ಷೇತರರ ಪ್ರಮಾಣ ವಚನ ಇಂದು

‘ಮೈತ್ರಿ’ ಸರ್ಕಾರದ ಸಚಿವ ಸಂಪುಟ ವಿಸ್ತರಣೆ
Last Updated 14 ಜೂನ್ 2019, 0:30 IST
ಅಕ್ಷರ ಗಾತ್ರ

ಬೆಂಗಳೂರು:‘ಮೈತ್ರಿ’ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಇಬ್ಬರು ಪಕ್ಷೇತರ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಖಾಲಿ ಉಳಿಯುವ ಮತ್ತೊಂದು ಸ್ಥಾನವನ್ನು ಭರ್ತಿಮಾಡಬೇಕೊ, ಇಲ್ಲವೆ ಖಾಲಿ ಉಳಿಸಿಕೊಳ್ಳಬೇಕೊ ಎಂಬ ಗೊಂದಲ ಜೆಡಿಎಸ್‌ನಲ್ಲಿ ಮುಂದುವರಿದಿದೆ.

ಪಕ್ಷೇತರ ಶಾಸಕರಾದ ಆರ್.ಶಂಕರ್, ಎಚ್.ನಾಗೇಶ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೂರನೇ ಸ್ಥಾನ ಭರ್ತಿ ಮಾಡುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ರಾಜಕೀಯ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಒಂದು ಸ್ಥಾನವನ್ನು ಖಾಲಿ ಉಳಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ. ಕೊನೆ ಕ್ಷಣದಲ್ಲಿ ಒಂದು ಸ್ಥಾನದ ಭರ್ತಿಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ಕರ್ನಾಟಕ ಪ್ರಜಾಕೀಯ ಪಕ್ಷದಿಂದ ಆರ್.ಶಂಕರ್ ಆಯ್ಕೆಯಾಗಿದ್ದು, ಈ ಪಕ್ಷದ ಏಕೈಕ ಶಾಸಕ. ಹಾಗಾಗಿ ಈ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವಂತೆ ಪಕ್ಷದ ವರಿಷ್ಠರು ಷರತ್ತು ವಿಧಿಸಿದ್ದಾರೆ. ಶೀಘ್ರ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಮತ್ತೆ ಬಂಡಾಯ ತೋರುವುದು, ಇಲ್ಲವೆ ಬಿಜೆಪಿ ಕಡೆಗೆ ಒಲವು ವ್ಯಕ್ತಪಡಿಸುವುದನ್ನು ತಡೆಯುವ ಸಲುವಾಗಿ ವಿಲೀನ ಸೂತ್ರ ರೂಪಿಸಲಾಗಿದೆ. ಈ ಷರತ್ತಿನ ಮೇಲೆ ಸಚಿವ ಸ್ಥಾನ ನೀಡಲಾಗುತ್ತಿದೆಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ನಡುವೆಯೇ ಮಾಜಿ ಶಾಸಕ ಕೆ.ಬಿ.ಕೋಳಿವಾಡ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.ಆಗಾಗ ಬ್ಲ್ಯಾಕ್ ಮೇಲ್ ಮಾಡುವ ಶಂಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು, ಆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವ ನಿಲುವು ತಾಳಬಾರದು ಎಂದು ಒತ್ತಾಯಿಸಿದ್ದಾರೆ.

ಶಂಕರ್, ರಾಣೆಬೆನ್ನೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಅವರ ವಿರುದ್ಧ ಸ್ಪರ್ಧಿಸಿದ್ದ ಕೋಳಿವಾಡ ಪರಾಭವಗೊಂಡಿದ್ದರು. ಶಂಕರ್ ಪಕ್ಷಕ್ಕೆ ಸೇರ್ಪಡೆಯಾದರೆ ಮುಂದೆ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT