ಲೋಕಸಭೆ: ಮೈತ್ರಿ ಮಧ್ಯೆ ಮುಂದುವರಿದ ಗೊಂದಲ

7
ನಮ್ಮದು ಸಣ್ಣ ಪಕ್ಷ –ದೇವೇಗೌಡ

ಲೋಕಸಭೆ: ಮೈತ್ರಿ ಮಧ್ಯೆ ಮುಂದುವರಿದ ಗೊಂದಲ

Published:
Updated:

ಬೆಂಗಳೂರು/ಹಾಸನ: ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ಸಂಸದರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಮಿತ್ರ ಪಕ್ಷದ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಪ್ರತಿಪಾದಿಸಿದ್ದಾರೆ.

‘28 ಲೋಕಸಭಾ ಕ್ಷೇತ್ರಗಳ ಪೈಕಿ ‘ಮೈತ್ರಿ ಒಪ್ಪಂದ’ದಂತೆ ಮೂರನೇ ಒಂದರಷ್ಟು ಕ್ಷೇತ್ರಗಳಿಗೆ ಬೇಡಿಕೆ ಸಲ್ಲಿಸುತ್ತೇವೆ, ಕನಿಷ್ಠ 12 ಸ್ಥಾನಗಳನ್ನಾದರೂ ನಮಗೆ ನೀಡಬೇಕು’ ಎಂದು ದೇವೇಗೌಡರು ಮೊದಲು ಹೇಳಿದ್ದರು. 

ಕಾಂಗ್ರೆಸ್‌ ವರಿಷ್ಠರಾದ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದ ಆ ಪಕ್ಷದ ಸಂಸದರು, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಮನವಿ ಮಾಡಿದ್ದರು. 

ಈ ಬೆಳವಣಿಗೆ ಬೆನ್ನಲ್ಲೇ, ಹಾಸನದಲ್ಲಿ ಶುಕ್ರವಾರ ಮಾತನಾಡಿರುವ ದೇವೇಗೌಡರು, ‘ನಮ್ಮದು ಸಣ್ಣ ಪಕ್ಷ. ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ಈ ಕುರಿತು ಇನ್ನೂ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ’ ಎಂದು ಹೇಳಿದರು. 

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇ ಜೆಡಿಎಸ್‌ಗೆ 10 ಸ್ಥಾನ ಬಿಟ್ಟು ಕೊಡಬೇಕು ಎಂದಿದ್ದಾರೆ’ ಎಂದರು.

ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ‘ಸಂಸದರು ಅವರ ಬೇಡಿಕೆ ಮಂಡಿಸಿದ್ದಾರೆ. ಅದು ತಪ್ಪಲ್ಲ. ಹಾಲಿ ಸದಸ್ಯರನ್ನು ಬದಲಾವಣೆ ಮಾಡುವ ಬಗ್ಗೆ ಮಾತುಕತೆಯಾಗಿಲ್ಲ. ಪರಿಸ್ಥಿತಿ ಆಧರಿಸಿ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಸಂಕ್ರಾಂತಿ ಬಳಿಕ ಈ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು. 

‘ಮಂಡ್ಯ ಹಾಗೂ ಹಾಸನ ಎರಡರಲ್ಲಿ ಒಂದು ಕ್ಷೇತ್ರ ಕಾಂಗ್ರೆಸ್ಸಿಗೆ ಬಿಟ್ಟು ಕೊಡಬೇಕು’ ಎಂದು ಮಾಜಿ ಸಚಿವ ಎ. ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು. 

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ‘ಚುನಾವಣೆಯಲ್ಲಿ ಗೆಲ್ಲುವುದೊಂದೇ ಮಾನದಂಡ. ದೇಶದ ಹಿತದೃಷ್ಟಿಯಿಂದ ಸಣ್ಣ ಪುಟ್ಟ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎಂದು ಹೇಳಿದರು. 

ಕೋಮುವಾದಿ ಪಕ್ಷವನ್ನು ತೊಡೆದು ಹಾಕಲು ಮೈತ್ರಿ ಕೂಟ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಜಿಲ್ಲೆಗಳಲ್ಲಿ ಯಾವ ಪಕ್ಷದ ವರ್ಚಸ್ಸು ಹೆಚ್ಚಿದೆ ಎಂಬುದರ ಆಧಾರದ ಮೇಲೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ. ಸೀಟು ಹೊಂದಾಣಿಕೆ ಎರಡೂ ಪಕ್ಷಗಳ ಮಧ್ಯೆ ಸಮಸ್ಯೆಯೇ ಅಲ್ಲ ಎಂದೂ ಅವರು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !