ಶನಿವಾರ, ಸೆಪ್ಟೆಂಬರ್ 19, 2020
21 °C
ಇದೇ 9–10ರಂದು ಜಿಲ್ಲಾವಾರು ಶಾಸಕರ ಸಭೆ ನಡೆಸಲಿರುವ ಮುಖ್ಯಮಂತ್ರಿ

ಮೈತ್ರಿಗೆ ಆಪತ್ತು: ಓಲೈಕೆ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಮಂಡಲದ ಅಧಿವೇಶನದ ಹೊತ್ತಿಗೆ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಬಿರುಸುಗೊಂಡು ಸರ್ಕಾರಕ್ಕೆ ಆಪತ್ತು ಬಂದೆರಗಬಹುದು ಎಂಬ ಆತಂಕದಲ್ಲಿರುವ ಮೈತ್ರಿ ಕೂಟದ ನಾಯಕರು ತಮ್ಮ ಪಕ್ಷದ ಶಾಸಕರ ಸಭೆ ನಡೆಸಿ, ಅಸಹನೆ–ಆಕ್ರೋಶ ತಣಿಸಲು ಮುಂದಾಗಿದ್ದಾರೆ.

ಏತನ್ಮಧ್ಯೆ, ರಾಜೀನಾಮೆ ಹೊಸ್ತಿಲಿನಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿರುವ ಅತೃಪ್ತ ಶಾಸಕರು ತಮ್ಮ ಮುಂದಿನ ನಡೆಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಸರ್ಕಾರ ಬೀಳುವ ಸನ್ನಿವೇಶ ಸೃಷ್ಟಿಯಾದರೆ ರಾಜೀನಾಮೆ ಕೊಡುವ ಆಲೋಚನೆ ಕಾಂಗ್ರೆಸ್‌–ಜೆಡಿಎಸ್‌ನ ಏಳೆಂಟು ಶಾಸಕರದ್ದಾಗಿದೆ ಎಂದು ಹೇಳಲಾಗುತ್ತಿದೆ. 

ಮೈತ್ರಿ ಸರ್ಕಾರದ ಬಗೆಗೆ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರಹಾಕುತ್ತಲೇ ಬಂದಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಚಿವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಶಾಸಕರಿಗೆ ಬೆಲೆಯೇ ಇಲ್ಲವಾಗಿದೆ ಎಂಬ ಕೂಗು ಒಂದು ವರ್ಷದಿಂದಲೂ ಇದೆ. ಇದನ್ನು ಪರಿಹರಿಸುವ ಗೋಜಿಗೆ ಯಾವ ನಾಯಕರೂ ಹೋಗಿರಲಿಲ್ಲ. ಅತೃಪ್ತಿ ಸ್ಫೋಟವಾಗಬಹುದೆಂಬ ಭೀತಿಯಿಂದ ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಮಿತ್ರ ಪಕ್ಷಗಳ ನಾಯಕರು ಶಾಸಕರು ಅಹವಾಲು ಆಲಿಸಲು ಅಣಿಯಾಗಿದ್ದಾರೆ.

ಈ ಪ್ರಯತ್ನದ ಮೊದಲ ಭಾಗವಾಗಿ ಇದೇ 9 ಹಾಗೂ 10ರಂದು ಶಾಸಕರ ಜತೆ ಸಭೆ ನಡೆಯಲಿದೆ. ವಿದೇಶ ಪ್ರವಾಸದಿಂದ ಮುಖ್ಯಮಂತ್ರಿ ವಾಪಸಾದ ನಂತರ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಆಯಾ ಜಿಲ್ಲೆಯ ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ಶಾಸಕರನ್ನು ಪ್ರತ್ಯೇಕವಾಗಿ ಭೇಟಿಮಾಡಿ, ಅವರ ಬೇಡಿಕೆಗಳು, ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಿದ್ದಾರೆ. ತಕ್ಷಣಕ್ಕೆ ಆಗುವ ಕೆಲಸಗಳನ್ನು ಮಾಡಿಕೊಟ್ಟು, ತುರ್ತು ಅಗತ್ಯ ಇರುವ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಲಿದ್ದಾರೆ. ಆ ಮೂಲಕ ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರವನ್ನು ಮೈತ್ರಿ ನಾಯಕರು ರೂಪಿಸಿದ್ದಾರೆ.

ಗುಟ್ಟು ಬಿಡದ ಅತೃಪ್ತರು: ನಾಯಕತ್ವದ ವಿರುದ್ಧ ಅಸಹನೆ ಹಾಗೂ ವೈಯಕ್ತಿಕ ಕಾರಣದಿಂದ ಬಂಡೆದ್ದಿರುವ ಅತೃಪ್ತರು ಮಾತ್ರ ತಮ್ಮ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಮನವೊಲಿಕೆ ಪ್ರಯತ್ನ ಮುಂದುವರಿದಿದೆ. ರಮೇಶ ಜಾರಕಿಹೊಳಿ ರಾಜೀನಾಮೆ ಪ್ರಕಟಿಸಿದ್ದರೂ ಈವರೆಗೂ ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಕೊಟ್ಟಿಲ್ಲ. 

ಕೆಲ ಅತೃಪ್ತ ಶಾಸಕರು ಬುಧವಾರ(ಜುಲೈ 3) ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಸಭಾಧ್ಯಕ್ಷ ರಮೇಶ್ ಕುಮಾರ್ ಸಹ ಮಧ್ಯಾಹ್ನದ ವರೆಗೆ ಕಚೇರಿಯಲ್ಲಿ ಇದ್ದರು. ಆದರೆ ಯಾವೊಬ್ಬ ಶಾಸಕರೂ ಅತ್ತ ಸುಳಿಯಲಿಲ್ಲ. ‘ಕಾದುನೋಡಿ’ ಎಂಬ ಉತ್ತರವನ್ನಷ್ಟೇ ಅತೃಪ್ತ ಶಾಸಕರ ಕಡೆಯಿಂದ ಬರುತ್ತಿದೆ.

ಬಿಜೆಪಿಯತ್ತ ವಿಶ್ವನಾಥ್ ಚಿತ್ತ ?

ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಎಚ್. ವಿಶ್ವನಾಥ್‌ ಅವರು ಬಿಜೆಪಿಯತ್ತ ತಮ್ಮ ಚಿತ್ತ ಹರಿಸಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. 

ತಮ್ಮ ಹಳೆಯ ಮಿತ್ರ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಿದ್ದ ವಿಶ್ವನಾಥ್‌, ಈಗ ಮೈತ್ರಿ ಸರ್ಕಾರದ ವಿರುದ್ಧವೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈತ್ರಿ ಪ್ರಯೋಗ ಸರಿದಾರಿಯಲ್ಲಿ ಸಾಗಿಲ್ಲ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಕಾರಣ. ಸಾಮರಸ್ಯ ಇಲ್ಲದೆ ಮೈತ್ರಿ ಮುಖಂಡರು ರಾಷ್ಟ್ರಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ’ ಎಂದು ಕುಟುಕಿದ್ದಾರೆ.

ದೆಹಲಿಗೆ ತೆರಳುವ ಮುನ್ನ ‘ಶೀಘ್ರ ಸಿಹಿ ಸುದ್ದಿ ತರುತ್ತೇನೆ’ ಎಂದು ಮೈಸೂರಿನ ತಮ್ಮ ಆಪ್ತರ ಬಳಿ ವಿಶ್ವನಾಥ್ ಹೇಳಿಕೊಂಡಿದ್ದರು ಎನ್ನಲಾಗಿದೆ. ಇದರ ಮುಂದುವರಿದ ಬೆಳವಣಿಗೆ ಎಂಬಂತೆ ದೆಹಲಿಯಲ್ಲಿ ರಾಜ್ಯದ ಬಿಜೆಪಿ ಸಂಸದರನ್ನು ಭೇಟಿಯಾಗಿದ್ದಾರೆ. ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಪದೇಪದೇ ಭೇಟಿಯಾಗುತ್ತಿದ್ದು, ದೆಹಲಿಯಲ್ಲಿ ಪಕ್ಷದ ರಾಷ್ಟ್ರಮಟ್ಟದ ನಾಯಕರೊಬ್ಬರ ಜತೆಗೂ ಸಂಪರ್ಕದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ.

***

ಶಾಸಕ ಆನಂದ್ ಸಿಂಗ್ ಅಸಮಾಧಾನಕ್ಕೆ ಬೇರೆ ಕಾರಣಗಳಿವೆ. ಮಂತ್ರಿ ಮಾಡಿಲ್ಲವೆಂದು ರಾಜೀನಾಮೆ ನೀಡಿಲ್ಲ.

- ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ಶಾಸಕರ ಸಭೆ ನಡೆಸಲಿರುವ ಮುಖ್ಯಮಂತ್ರಿ ಅವರು ಸಮಸ್ಯೆ ಆಲಿಸಿ, ಪರಿಹಾರ ನೀಡಲಿದ್ದಾರೆ.

- ಡಿ.ಕೆ. ಶಿವಕುಮಾರ್,  ಜಲಸಂಪನ್ಮೂಲ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು