‘ದೋಸ್ತಿ’ ಸರ್ಕಾರದ ಕಗ್ಗಂಟು ಇತ್ಯರ್ಥ

7
ರೈತರ ಸಾಲ ಮನ್ನಾ, ನೀರಾವರಿಗೆ ₹1.25 ಲಕ್ಷ ಕೋಟಿ ನಿಗದಿ ಒಪ್ಪಿಗೆ

‘ದೋಸ್ತಿ’ ಸರ್ಕಾರದ ಕಗ್ಗಂಟು ಇತ್ಯರ್ಥ

Published:
Updated:

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ‘ದೋಸ್ತಿ’ಗಳ ಒಂದು ತಿಂಗಳ ಮುಸುಕಿನ ಗುದ್ದಾಟದ ಬಳಿಕ ಭಾನುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ರೈತರ ಸಾಲ ಮನ್ನಾ ಸೇರಿ, ಐದು ವರ್ಷಗಳಲ್ಲಿ ಜಾರಿ ಮಾಡಬೇಕಾದ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತು.

ಸರ್ಕಾರ ರಚನೆ ಆದ ದಿನದಿಂದ ಕಗ್ಗಂಟಾಗಿ ಉಳಿದಿದ್ದ ಹಲವು ವಿಷಯಗಳನ್ನು ಇತ್ಯರ್ಥಗೊಳಿಸಲಾಯಿತು. ಎರಡೂ ಪಕ್ಷಗಳ ಸದಸ್ಯರು ಒಗ್ಗಟ್ಟಾಗಿರಬೇಕು ಮತ್ತು ದೋಸ್ತಿ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆಗಳನ್ನು ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು.

‘ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್‌ ಒಪ್ಪಿಕೊಂಡಿದೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ 2017 ರ ಕೊನೆಯವರೆಗೆ ಮಾಡಿರುವ ಕೃಷಿ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ’ ಎಂದು ಸಮನ್ವಯ ಸಮಿತಿಯ ಸಂಚಾಲಕ ಡ್ಯಾನಿಷ್‌ ಅಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕುರಿತು ಎರಡು ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿ ನೀಡಿರುವ ವರದಿಯನ್ನು ಒಪ್ಪಿಕೊಳ್ಳಲಾಗಿದೆ. ಅದರ ಅನ್ವಯ, 5 ವರ್ಷಗಳ ಅವಧಿಗೆ ನೀರಾವರಿ ಕ್ಷೇತ್ರಕ್ಕೆ ₹ 1,25,000 ಕೋಟಿ ನಿಗದಿ ಮಾಡಲಾಗುವುದು. ವಸತಿರಹಿತರಿಗಾಗಿ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ ಮತ್ತು ಕೌಶಲ ಅಭಿವೃದ್ಧಿ ಯೋಜನೆಯಡಿ 1 ಕೋಟಿ ಹೊಸ ಉದ್ಯೋಗಗಳ ಸೃಷ್ಟಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಮನ್ವಯ ಕಸರತ್ತು: ಎರಡೂ ಪಕ್ಷಗಳ ಪ್ರಣಾಳಿಕೆಗಳಿಗೆ ಆದ್ಯತೆ ನೀಡುವ ಕಸರತ್ತು ಸಭೆಯಲ್ಲಿ ನಡೆಯಿತು. ವಿಶೇಷವಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನೇ ಮುಂದುವರಿಸಲು ನಿರ್ಧರಿಸಲಾಯಿತು.

ಹೊಸ ಸರ್ಕಾರ ರಚನೆ ಆದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಯಶಸ್ವಿನಿ’ ಯೋಜನೆ ಮುಂದುವರಿಸುವ ಬಯಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ಅವಧಿಯಲ್ಲಿ ಆರಂಭಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕು ಎಂಬ ತೀರ್ಮಾನ ಆಯಿತು.

ಅಧಿವೇಶನ ಬಳಿಕ ಸಂಪುಟ ವಿಸ್ತರಣೆ: ವಿಧಾನಮಂಡಲ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು ಎಂದು ಡ್ಯಾನಿಷ್‌ ಅಲಿ ಮತ್ತು ವೇಣುಗೋಪಾಲ್‌ ತಿಳಿಸಿದರು.

‘ಸರ್ಕಾರದಲ್ಲಿ ಗೊಂದಲವಿದೆ ಎಂದು ಮಾಧ್ಯಮಗಳಲ್ಲಿ ಊಹಾಪೋಹ ಹರಡಿತ್ತು. ಅಂತಹದ್ದು ಏನೂ ಇಲ್ಲ. ಇಂದಿನ ಸಭೆ ಸೌಹಾರ್ದವಾಗಿ ನಡೆಯಿತು. ರೈತರ ಸಾಲ ಮನ್ನಾದ ಬಗ್ಗೆ ಕಾಂಗ್ರೆಸ್‌ ವಿರೋಧವಿಲ್ಲ. ನಮ್ಮ ನಾಯಕರು ಸಾಲ ಮನ್ನಾ ಪರ ಇದ್ದಾರೆ. ಇದಕ್ಕೆ ಹಣ ಹೊಂದಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದು ವೇಣುಗೋಪಾಲ್‌ ತಿಳಿಸಿದರು.

ಸಭೆಯ ಬಳಿಕ ವೇಣುಗೋಪಾಲ್‌ ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ, ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದರು. ‘ವಿಸ್ತರಣೆ ತಡ ಮಾಡುವುದರಿಂದ ಇನ್ನಷ್ಟು ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ. ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಕಷ್ಟವಾಗುತ್ತದೆ’ ಎಂದು ಸಿದ್ದರಾಮಯ್ಯ ಅವರು ವೇಣುಗೋಪಾಲ್‌ ಅವರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.‌

**

ಮೇಲ್ಮನೆ: ಬಿಲ್ಲವರು, ಬಲ್ಲವರು

ಏಳು ಬಾರಿ ಸದಸ್ಯರಾಗಿ ಚುನಾಯಿತಾಗಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಂಗಾಮಿ ವಿಧಾನಪರಿಷತ್‍ ಸಭಾಪತಿಯಾಗಿ ಪ್ರಥಮ ಬಾರಿಗೆ ಅಧಿವೇಶನ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.

ಹಲವು ವರ್ಷಗಳ ಬಳಿಕ ಒಂದೇ ಪ್ರದೇಶಕ್ಕೆ ಹಾಗೂ ಒಂದೇ ಸಮುದಾಯಕ್ಕೆ ಸೇರಿದವರು ವಿಧಾನಪರಿಷತ್ತಿನಲ್ಲಿ ಸಭಾನಾಯಕಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಬಾರಿ ವಿಶೇಷ.

ಸಚಿವೆ ಜಯಮಾಲಾ ಅವರಿಗೆ ಸಭಾನಾಯಕಿ ಸ್ಥಾನ ಒಲಿದು ಬಂದಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇಬ್ಬರೂ ಕರಾವಳಿಯವರಾಗಿದ್ದು, ಬಿಲ್ಲವ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ.

**

ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗಿವೆ. ಆದರೆ, ಮಂತ್ರಿಗಳು ತಮ್ಮ ಇಲಾಖೆ ವಿಷಯ ಬಿಟ್ಟು ಬೇರೇನೂ ಮಾತಾಡಬಾರದು.
– ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್‌ ಉಸ್ತವಾರಿ

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !