ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಪರಿಹಾರ ತಡ | ಸಿ.ಎಂ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

Last Updated 4 ಅಕ್ಟೋಬರ್ 2019, 18:50 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದು, ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗದಿರುವುದು, ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ವರದಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ನಾಯಕರುಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯ ನೀಡಿರುವ ವರದಿ ಆಧಾರದ ಮೇಲೆ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು. ಈವರೆಗೂ ಪರಿಹಾರದ ಬಗ್ಗೆ ಚಕಾರವೆತ್ತದಿರುವುದು ದುರದೃಷ್ಟಕರ ಎಂದು ಹಿರಿಯ ಮುಖಂಡಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

‘ನೆರೆ ಪರಿಹಾರ ನೀಡಿಲ್ಲವೆಂದು ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಜನರು ಪರಿಹಾರ ನೀಡಿಲ್ಲವೆಂದು ಮೋದಿ, ಅಮಿತ್ ಶಾ ವಿರುದ್ಧ ಮಾತನಾಡುತ್ತಿದ್ದು, ಅವರೆಲ್ಲ ದೇಶದ್ರೋಹಿಗಳೇ? ಗಾಂಧಿ ಆದರ್ಶಗಳ ಪರ ಮಾತನಾಡಿದರೆ ದೇಶದ್ರೋಹಿಗಳು. ಬಿಜೆಪಿ, ಆರ್‌ಎಸ್‌ಎಸ್ ಪರ ಹೇಳಿಕೆ ನೀಡಿದರೆ ದೇಶಭಕ್ತರೆ ಎಂದು ಪ್ರಶ್ನಿಸಿದರು.

‘ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ತಕ್ಷಣ ರಾಜೀನಾಮೆ ನೀಡಿ. ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ರಾಜ್ಯ ಸರ್ಕಾರ ನೀಡಿದ ವರದಿಗೂ ಕಿಮ್ಮತ್ತಿಲ್ಲವಾಗಿದ್ದು, ಈಗಲಾದರೂ ಸರ್ವಪಕ್ಷ ಮುಖಂಡರ ಸಭೆ ಕರೆಯಬೇಕು. ಕೇಂದ್ರದ ಅನ್ಯಾಯದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು’ ಎಂದು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಶಾಸಕರಾದ ಜಿ.ಪರಮೇಶ್ವರ, ಎಂ.ಬಿ.ಪಾಟೀಲ, ಮುಖಂಡ ವಿ.ಎಸ್.ಉಗ್ರಪ್ಪ ಸಹ ಕೇಂದ್ರ ಹಾಗೂ ರಾಜ್ಯದ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT