ಶುಕ್ರವಾರ, ಡಿಸೆಂಬರ್ 6, 2019
20 °C

ಬಿಜೆಪಿಯವರಿಗೆ ಅಧಿಕಾರ ಹಿಡಿಯುವ ತಂತ್ರ ಗೊತ್ತೇ ಹೊರತು ದೇಶ ಮುನ್ನಡೆಸಲು ಬರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಡಾ.ಕೆ. ಸುಧಾಕರ್ ಅವರು ಯಾವ ತತ್ವ ಸಿದ್ಧಾಂತವನ್ನು ನಂಬಿ ಕಾಂಗ್ರೆಸ್‌ಗೆ ಬಂದಿದ್ದರು. ಯಾವ ಸಿದ್ಧಾಂತದ ಮೇಲೆ ಗೆದ್ದಿದ್ದರು ಮತ್ತು ಏಕೆ ಪಕ್ಷವನ್ನು ತೊರೆದರು ಎನ್ನುವುದನ್ನು ಅವರೇ ಉತ್ತರಿಸಬೇಕು  ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಪಕ್ಷಾಂತರ ಮಾಡಿದ್ದಕ್ಕೆ ನಮಗೆ ಬೈಯುವವರು ಮಹಾರಾಷ್ಟ್ರದಲ್ಲಿ ಶಿವಸೇನಾದೊಂದಿಗೆ ಕೈಜೋಡಿಸಿದ್ದಾರೆ. ಹಾಗಾದರೆ ಇವರು ಕೂಡ ಕೋಮುವಾದಿಗಳಲ್ಲವೇ ಎನ್ನುವ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಕಾಂಗ್ರೆಸ್‌ನ ಯಾವ ತತ್ವವನ್ನು ನಂಬಿ ಬಂದಿದ್ದರು ಮತ್ತು ಯಾವ ತತ್ವದ ಆಧಾರದ ಮೇಲೆ ಗೆದ್ದಿದ್ದರು. ಮತ್ತೆ ಯಾಕೆ ಪಕ್ಷ ತೊರೆದರು ಎಂಬುದನ್ನು ಅವರು ಮೊದಲು ತಿಳಿಸಲಿ. ಆಮೇಲೆ ನಾನು ಉತ್ತರಿಸುತ್ತೇನೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಒಂದೇ ಕಾರಣಕ್ಕೆ ಅನಿವಾರ್ಯವಾಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಅದೇ ರೀತಿ ಕರ್ನಾಟಕದಲ್ಲಿಯೂ ಕೂಡ ನಮ್ಮ ಸಂಖ್ಯಾಬಲ ಹೆಚ್ಚಿದ್ದರೂ ಕೂಡ ಚಿಕ್ಕ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ ನೀಡಿದ್ದೆವು. ಇದೂ ಕೂಡ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿಯೇ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕುರಿತಂತೆ ಪ್ರಶ್ನಿಸಿದ್ದಕ್ಕೆ, ನೀವು ಮೊದಲು ಈ ಚುನಾವಣೆಯನ್ನು ಗೆಲ್ಲಬೇಕು. ಈಗಲೇ ಏನನ್ನು ಹೇಳಲಾಗುವುದಿಲ್ಲ. ಮುಂದೆ ನೋಡೋಣ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಾವ ತಂತ್ರಗಳನ್ನು ಬಳಸಬೇಕು ಎನ್ನುವ ಕುರಿತು ನೋಡುತ್ತೇವೆ.

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತದೆ ಎನ್ನುವ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾ ಮತ್ತು ಮೋದಿ ಹೀಗೆ ಹೇಳುತ್ತಾ ಬಂದರು. ಆದರೆ ನಾವು ದಿನೇ ದಿನೆ ಬೆಳೆಯುತ್ತಿದ್ದೇವೆ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರದಲ್ಲಿ ಅವರ ಕಥೆ ಮುಗಿದಿದೆ. ಗೋವಾದಲ್ಲೂ ನಾವೇ ಬಂದಿದ್ದೆವು ಆದರೆ ನಮ್ಮವರನ್ನು ಸೆಳೆದು ಸರ್ಕಾರ ರಚಿಸಿದ್ದಾರೆ. ಮಣಿಪುರ ಮತ್ತು ಅರುಣಾಚಲದಲ್ಲಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದಾರೆ. ಬಿಜೆಪಿಯವರಿಗೆ ನೈತಿಕ ಬಲ ಇಲ್ಲ ಎಂದು ದೂರಿದರು.

ಕಳೆದ ಏಳು ವರ್ಷದಲ್ಲಿ ಅತ್ಯಂತ ಕಡಿಮೆ ಜಿಡಿಪಿಯಿದ್ದರೆ ಅದು ಶೇ. 4.5. ಯುಪಿಎ ಸರ್ಕಾರದ ಅವಧಿಯಲ್ಲಿ ಕೃಷಿ ಉತ್ಪಾದನೆಯಲ್ಲಿ ಶೇ. 4.5 ಇದ್ದದ್ದು ಶೇ. 2.5 ಆಗಿದೆ. ನಿರುದ್ಯೋಗ ಸಮಸ್ಯೆ, ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಎಲ್ಲ ದೃಷ್ಟಿಯಿಂದಲೂ ಎಲ್ಲ ಕ್ಷೇತ್ರದಲ್ಲೂ ಕುಸಿತ ಕಾಣುತ್ತಿದ್ದೇವೆ. ಸರ್ಕಾರಿ ಹುದ್ದೆಗಳನ್ನು ಕೂಡ ಭರ್ತಿ ಮಾಡುತ್ತಿಲ್ಲ. ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತವರು ನಮಗೆ ಪಾಠ ಮಾಡುತ್ತಿದ್ದಾರೆ. ದೇಶವನ್ನು ಮುನ್ನಡೆಸುವುದು ಗೊತ್ತಿಲ್ಲ ಆದರೆ ಮತ ಸಂಪಾದನೆ, ಅಧಿಕಾರಕ್ಕೆ ಬರುವ ತಂತ್ರ ಮಾತ್ರ ಅವರಿಗೆ ಗೊತ್ತಿದೆ. ಹೀಗಾಗಿ ದೇಶದ ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು