ಮಂಗಳವಾರ, ಅಕ್ಟೋಬರ್ 15, 2019
26 °C
ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಹೇಳಿಕೆ

‘ತಪ್ಪು ಮಾಡಿದವರ ಮೇಲೆ ದಾಳಿ’

Published:
Updated:
Prajavani

ತುಮಕೂರು: ‘ತಪ್ಪು ಮಾಡಿದವರ ಮೇಲೆ ಐ.ಟಿ ದಾಳಿ ಆಗುತ್ತಿದೆ. ದಾಳಿ ಆಗಬಾರದು ಎಂದರೆ ತಪ್ಪು ಮಾಡಲೇಬಾರದು’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಶನಿವಾರ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ವೈದ್ಯಕೀಯ ಕಾಲೇಜು ನಡೆಸುತ್ತಿರುವ ಯಾರ ಬಳಿ ಹಣವಿಲ್ಲ ಹೇಳಿ? ಎಲ್ಲರ ಬಳಿ ಸಾಕಷ್ಟು ಹಣ ಇದೆ. ಬಹುತೇಕ ಮಠಾಧೀಶರು ವೈದ್ಯಕೀಯ ಕಾಲೇಜು ನಡೆಸುತ್ತಿದ್ದಾರೆ. ಯಾರ ಗ್ರಹಚಾರ ಸರಿ ಇರುವುದಿಲ್ಲವೊ ಅವರ ಮೇಲೆ ದಾಳಿ ಆಗುತ್ತಿದೆ’ ಎಂದರು.

‘ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಇತ್ತೀಚೆಗೆ ನನ್ನ ವಿಚಾರಣೆಗೆ ಕರೆದಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್‌ ಸಂಸ್ಥೆಗೆ ಅಪೆಕ್ಸ್ ಬ್ಯಾಂಕ್ ನೇತೃತ್ವದಲ್ಲಿ ವಿವಿಧ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ₹ 300 ಕೋಟಿ ಸಾಲ ನೀಡಿವೆ. ಈ ವಿಚಾರವಾಗಿ ಕೇಳಿದರು. ಒಂದಷ್ಟು ದಾಖಲೆ ನೀಡಿದೆ. ಮತ್ತೊಂದಿಷ್ಟು ದಾಖಲೆಗಳನ್ನು ಕೇಳಿದರು. ಅ.16ರಂದು ದಾಖಲೆಗಳನ್ನು ತೆಗೆದುಕೊಂಡು ಹೋಗುವೆ’ ಎಂದು ಮಾಹಿತಿ ನೀಡಿದರು.

‘ನಾವು ನಿಯಮಾನುಸಾರ ಸಾಲ ನೀಡಿದ್ದೇವೆ. ಸಾಲ ಪಡೆದವರು ಅದನ್ನು ಯಾವುದಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಬಗ್ಗೆ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್‌ ಇದುವರೆಗೂ ಅಪೆಕ್ಸ್ ಬ್ಯಾಂಕಿಗೆ ₹ 30 ಕೋಟಿ ಬಡ್ಡಿ ಕಟ್ಟಿದ್ದಾರೆ’ ಎಂದರು.

Post Comments (+)