ಶನಿವಾರ, ಫೆಬ್ರವರಿ 29, 2020
19 °C
ಮೈಸೂರು ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಹುಣಸೂರು ಉಪಚುನಾವಣೆ ಗೆಲುವಿನ ನಿರ್ಣಯ ಅಂಗೀಕಾರ

ಮತ್ತೊಮ್ಮೆ ಸಿದ್ದರಾಮಯ್ಯ: ನಾಯಕತ್ವಕ್ಕೆ ಪ್ರತಿಪಾದನೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯ ಕಾಂಗ್ರೆಸ್‌ನ ಚುಕ್ಕಾಣಿಗಾಗಿ ತೆರೆಮರೆಯ ಕಸರತ್ತು, ಲಾಬಿ ಬಿರುಸುಗೊಂಡಿದ್ದು, ಈ ಹೊತ್ತಿನಲ್ಲೇ ಕಾಂಗ್ರೆಸ್‌ ಮೈಸೂರು ಜಿಲ್ಲಾ ಘಟಕವು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವವನ್ನೇ ಮತ್ತೊಮ್ಮೆ ಪ್ರಬಲವಾಗಿ ಪ್ರತಿಪಾದಿಸಿದೆ.

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕದಲ್ಲಿ ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ‘ಕೈ’ ಮತ್ತೊಮ್ಮೆ ಮೇಲುಗೈ ಆಗಬಾರದು ಎಂಬ ಯತ್ನವನ್ನು ಪಕ್ಷದ ಹಲವು ಹಿರಿಯ ಮುಖಂಡರು ನಡೆಸಿದ್ದು, ನವದೆಹಲಿಯ ವರಿಷ್ಠರ ಬಳಿಯೂ ಒತ್ತಡ ಹಾಕಿದ್ದಾರೆ. ಡಾ.ಜಿ.ಪರಮೇಶ್ವರ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಇಬ್ಬರಿಗೆ ನೀಡುವ ಮೂಲಕ ಅಧಿಕಾರ ಹಂಚಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನೊಳಗಿನ ಬಣ ರಾಜಕಾರಣ ಮುನ್ನೆಲೆಗೆ ಬರುತ್ತಿದ್ದಂತೆ, ‘ಹುಣಸೂರು ವಿಧಾನಸಭಾ ಉಪ ಚುನಾವಣೆಯ ಗೆಲುವು ಸಿದ್ದರಾಮಯ್ಯ ನಾಯಕತ್ವಕ್ಕೆ ದೊರೆತ ಗೆಲುವು’ ಎಂಬ ನಿರ್ಣಯವನ್ನು ಕಾಂಗ್ರೆಸ್‌ ಮೈಸೂರು ಜಿಲ್ಲಾ ಘಟಕ ಸೋಮವಾರ ರಾತ್ರಿ ನಡೆಸಿದ ಸಭೆಯಲ್ಲಿ ಅಂಗೀಕರಿಸಿದ್ದು, ಇದಕ್ಕೆ ಮೈಸೂರು ನಗರ ಘಟಕ, ಚಾಮರಾಜನಗರ ಹಾಗೂ ಕೊಡಗು ಜಿಲ್ಲಾ ಘಟಕಗಳು ಸಹಮತ ವ್ಯಕ್ತಪಡಿಸಿವೆ.

ಈ ಸಭೆಯಲ್ಲಿ ಹಾಜರಿದ್ದ ಮೂರು ಜಿಲ್ಲೆಯ ನಾಲ್ಕು ಘಟಕಗಳ ಪ್ರಮುಖ ಪದಾಧಿಕಾರಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ಮುಖಂಡರು, ಹುಣಸೂರು ಉಪಚುನಾವಣೆಯಲ್ಲಿ ಒಂದೊಂದು ಭಾಗದ ಉಸ್ತುವಾರಿ ವಹಿಸಿಕೊಂಡಿದ್ದ ನೆರೆಯ ಜಿಲ್ಲೆಗಳ ನಾಯಕರು ಸಹ ತಮ್ಮ ಎರಡೂ ಕೈ ಮೇಲೆತ್ತಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಇನ್ನಿತರೆಡೆಯೂ ವ್ಯಾಪಿಸಲಿದೆ ಎನ್ನಲಾಗಿದೆ.

ಸಭೆಯಲ್ಲಿ ಮಾತನಾಡಿದ ಮೈಸೂರು ಭಾಗದ ಕಾಂಗ್ರೆಸ್‌ನ ಪ್ರಮುಖ ಮುಖಂಡರೆಲ್ಲರೂ ‘ಮತ್ತೊಮ್ಮೆ ಸಿದ್ದರಾಮಯ್ಯ’ ಎನ್ನುವ ಮೂಲಕ ಸಾಮೂಹಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

*
ಹುಣಸೂರಿನ ಗೆಲುವು ಎಲ್ಲ ಮುಖಂಡರು, ಕಾರ್ಯಕರ್ತರ ಸಾಂಘಿಕ ಜಯ. ಮೈಸೂರು ಜಿಲ್ಲಾ ಗ್ರಾಮಾಂತರ ಘಟಕ ನಿರ್ಣಯ ಅಂಗೀಕರಿಸುವ ಅಗತ್ಯವಿರಲಿಲ್ಲ.
–ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

*
ಸಿದ್ದರಾಮಯ್ಯ ನಾಯಕತ್ವಕ್ಕೆ ಹುಣಸೂರಿನ ಜನರು ಬಂಡೆಯಂತೆ ನಿಂತಿದ್ದಾರೆ. ಇಲ್ಲಿನಂತೆ ಉಳಿದೆಡೆ ಕೆಲಸ ಮಾಡಿದ್ದರೆ, ಉಪಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದೆವು.
–ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಸಚಿವ

*
ಪಕ್ಷದ ಸಂಘಟನೆಗೆ ಸೂಕ್ತ ಸಮಯವಿದು. ಸಿದ್ದರಾಮಯ್ಯ ನಾಯಕತ್ವವನ್ನು ಹುಣಸೂರಿನ ಜನರು ಪ್ರತಿಪಾದಿಸಿದ್ದಾರೆ.
–ಆರ್.ಧ್ರುವನಾರಾಯಣ, ಮಾಜಿ ಸಂಸದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು