ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಹಿಂಬಾಗಿಲ ರಾಜಕಾರಣಿ: ಸಿದ್ದರಾಮಯ್ಯ ವಾಗ್ದಾಳಿ

Last Updated 1 ಡಿಸೆಂಬರ್ 2019, 13:02 IST
ಅಕ್ಷರ ಗಾತ್ರ

ಹಾವೇರಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲದ ಪಿತಾಮಹ. ಅವರಿಗೆ ಹೆಬ್ಬಾಗಿಲ ರಾಜಕಾರಣ ಗೊತ್ತಿಲ್ಲ. ಅವರಿಗೆ ಹಿಂಬಾಗಿಲಿನಿಂದಲೇ ಬಂದು ಅಭ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ರಾಣೆಬೆನ್ನೂರಿನಲ್ಲಿ ಮಂಗಳವಾರ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘‌2008ರಲ್ಲಿ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದ್ದ ಯಡಿಯೂರಪ್ಪ, ಆಗ 9 ಶಾಸಕರಿಂದ ರಾಜೀನಾಮೆ ಕೊಡಿಸಿದ್ದರು. ಈಗ 17 ಮಂದಿಯಿಂದ ರಾಜೀನಾಮೆ ಕೊಡಿಸಿದ್ದಾರೆ. ಆ ಮೂಲಕ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ಇಂತಹ ರಾಜಕಾರಣ ಮಾಡುವುದಕ್ಕೆ ನಾಚಿಕೆಯಾಗಬೇಕು’ ಎಂದರು.

ಕೈ, ಬಾಯಿ ಶುದ್ಧವಿಲ್ಲದ ಶಂಕರ: ‘ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಆರ್‌. ಶಂಕರ್‌ನನ್ನು ಕರೆದು ಸಚಿವನನ್ನಾಗಿ ಮಾಡಿದೆ. ಆದರೆ, ನನ್ನ ಬೆನ್ನಿಗೇ ಚೂರಿ ಹಾಕಿ, ಯಡಿಯೂರಪ್ಪ ಜತೆ ಓಡಿ ಹೋದ. ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಲಿಲ್ಲ. ಉಪ ಚುನಾವಣೆಯಲ್ಲಿ ಅವನಿಗೆ ಟಿಕೆಟ್ ಕೊಟ್ಟರೆ, ಸೋಲುತ್ತಾನೆ ಎಂದು ಯಡಿಯೂರಪ್ಪನಿಗೆ ಗೊತ್ತಾಗಿಯೇ, ಕ್ರಿಮಿನಲ್ ಹಿನ್ನೆಲೆ ಇರೊ ಅರುಣ್‌ಕುಮಾರ್‌ಗೆ ಟಿಕೆಟ್ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಆ ಅಸಾಮಿ ವಿರುದ್ಧ ಒಂದಲ್ಲ, ಎರಡಲ್ಲ ಐದು ಕ್ರಿಮಿನಲ್ ಕೇಸ್ ಇವೆ. ಇಂತಹವರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬೇಡಿ. ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಕೆ.ಬಿ. ಕೋಳಿವಾಡ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ’ ಎಂದು ಕರೆ ನೀಡಿದರು.

ಈಶ್ವರಪ್ಪ ಪೆದ್ದ: ‘ಬಿಜೆಪಿಯಲ್ಲಿ ಕೆ.ಎಸ್. ಈಶ್ವರಪ್ಪ ಅಂತ ಒಬ್ಬ ಪೆದ್ದ ಇದ್ದಾನೆ. ಅವನ ಪ್ರಕಾರ, ಮುಸ್ಲಿಮರಿಗೆ ಟಿಕೆಟ್ ಕೊಡಬೇಕಾದರೆ ಬಿಜೆಪಿ ಕಚೇರಿಯಲ್ಲಿ ಹತ್ತು ವರ್ಷ ಕಸ ಗುಡಿಸಬೇಕಂತೆ. ಇದು ಡೋಂಗಿತನ ಅಲ್ವೇನ್ರಿ. ಹಾಗಾದರೆ, ಮೋದಿ ಹೇಳುವಂತೆ ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್ ಅರ್ಥ ಏನು?’ ಎಂದು ಕುಟುಕಿದರು.

ಕಾಂಗ್ರೆಸ್‌ ಬಹಿರಂಗ ಸಭೆಗೆ ಬರುವವರಿಗೆ, ಕಾರ್ಯಕರ್ತರು ರಾಣೆಬೆನ್ನೂರಿನ ಮೈದೂರ ಕ್ರಾಸ್‌ ಬಳಿ ₹100, ₹200, ₹500 ನೋಟುಗಳನ್ನು ಹಂಚುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಸಿದ್ದರಾಮಯ್ಯ ಎಷ್ಟು ಹಣ ಪಡೆದು ಕಾಂಗ್ರೆಸ್‌ ಸೇರಿದರು?’

ಹರಿಹರ: ‘ಜೆಡಿಎಸ್‍ನಲ್ಲಿ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರು ಎಷ್ಟು ಹಣ ಪಡೆದು ಕಾಂಗ್ರೆಸ್‍ ಸೇರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲಿ’ ಎಂದು ಹಿರೇಕೇರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಸವಾಲು ಹಾಕಿದರು.

ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠಕ್ಕೆ ಮಂಗಳವಾರ ಭೇಟಿ ನೀಡಿ ಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

‘ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಹೀಗಿದ್ದರೂ ಪದೇ ಪದೇ ಅನರ್ಹರು ಎಂದು ಟೀಕಿಸುವ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್‌ಗಿಂತಲೂ ದೊಡ್ಡವರಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT