ಶನಿವಾರ, ಜನವರಿ 25, 2020
28 °C
ಕೆಪಿಸಿಸಿ ಪುನರ್ರಚನೆಯ ವಿಶ್ವಾಸದಲ್ಲಿ ಮೂಲ ಕಾಂಗ್ರೆಸ್ಸಿಗರು

ಮುಖಂಡರಲ್ಲಿ ಮೂಡಿದೆ ‘ರಾಜೀನಾಮೆ’ ಕುತೂಹಲ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್‌ ಅವರು ಸ್ವಯಂ ಪ್ರೇರಣೆ ಯಿಂದ ಸಲ್ಲಿಸಿರುವ ರಾಜೀನಾಮೆ ಬಗ್ಗೆ ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಪಕ್ಷದ ರಾಜ್ಯ ಮುಖಂಡರಲ್ಲಿ ಮೂಡಿದೆ.

ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿಯನ್ನು ಅವಲೋಕಿಸಿರುವ ವರಿಷ್ಠರು, ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರ ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರುವ ಮುಖಂಡರು, ಈ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂಬ ಸಂದೇಶ ರವಾನಿಸಿದ್ದಾರೆ.

ಬದಲಾದ ಪರಿಸ್ಥಿತಿಗೆ ತಕ್ಕಂತೆ ರಾಜ್ಯ ನಾಯಕತ್ವ ಬದಲಾವಣೆಗೂ ಆದ್ಯತೆ ನೀಡಿ, ಪಕ್ಷದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡವನ್ನು ಹೈಕಮಾಂಡ್‌ ಮೇಲೆ ಹೇರುತ್ತಿರುವ ಮೂಲ ಕಾಂಗ್ರೆಸ್ಸಿಗರು, ಆಂತರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾತಾಳಕ್ಕೆ ಕುಸಿದಿರುವ ಪಕ್ಷದ ವರ್ಚಸ್ಸನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಬೂತ್‌ ಮಟ್ಟದಿಂದಲೇ ಕಾರ್ಯಕರ್ತರ ಪಡೆಯನ್ನು ಸನ್ನದ್ಧಗೊಳಿಸುವ ಅಗತ್ಯವಿದೆ. ಈ ಕುರಿತು ಎಲ್ಲ ಹಂತದ ನಾಯಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸುವಂತೆ ವರಿಷ್ಠರನ್ನು ಒತ್ತಾಯಿಸಲಾಗಿದೆ.

ಇಬ್ಬರೂ ಮುಖಂಡರು ರಾಜೀನಾಮೆ ಸಲ್ಲಿಸಿರುವ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕೆಲವು ನಾಯಕರು, ಶನಿವಾರ ಇಲ್ಲಿ ಪಕ್ಷ ಹಮ್ಮಿಕೊಂಡಿದ್ದ, ‘ಭಾರತ್‌ ಬಚಾವ್‌’ ಕಾರ್ಯಕ್ರಮದ ವೇಳೆ ವರಿಷ್ಠರಾದ ಅಹ್ಮದ್‌ ಪಟೇಲ್‌, ಮಧುಸೂಧನ ಮಿಸ್ತ್ರಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ್ದು, ಪ್ರದೇಶ ಕಾಂಗ್ರೆಸ್‌ ಸಮಿತಿಯ ಪುನರ್ರಚನೆಗೆ ಆದ್ಯತೆ ನಿಡುವಂತೆ ಕೋರಿದ್ದಾರೆ.

ವ್ಯಕ್ತಿ ಕೇಂದ್ರಿತವಾದ ಚುನಾವಣೆಗಳಲ್ಲಿ ಪಕ್ಷ ಸೋಲನ್ನು ಅನುಭವಿಸಿದೆ. ರಾಜ್ಯದಲ್ಲಿ ದಶಕದಿಂದ ಬದಲಾಗದ ನಾಯಕತ್ವವನ್ನು ವರ್ಗಾಯಿಸಲು ಈಗ ಕಾಲಪಕ್ವವಾಗಿದೆ. ಪಕ್ಷ ಬಲಪಡಿಸಲು ಕಾರ್ಯಕರ್ತರ ಪಡೆಯನ್ನು ಹುರಿದುಂಬಿಸಬೇಕಿದೆ. ಇದನ್ನು ವರಿಷ್ಠರು ಅರ್ಥೈಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು