ಶನಿವಾರ, ಡಿಸೆಂಬರ್ 14, 2019
23 °C

ಕೇಂದ್ರದ ವಿರುದ್ಧ ಕಾಂಗ್ರೆಸ್ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಸೋಮವಾರ ನಗರ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಆರ್ಥಿಕತೆ ಕುಸಿದಿದ್ದು, ಜಿಡಿಪಿ ಶೇ 6ಕ್ಕಿಂತ ಕಡಿಮೆ ಆಗಿದೆ. ಡಾಲರ್ ಎದುರು ರೂಪಾಯಿ
ಮೌಲ್ಯ ₹72 ದಾಟಿದೆ. ಆಟೊಮೊಬೈಲ್, ಜವಳಿ, ಗಾರ್ಮೆಂಟ್, ಸಿಮೆಂಟ್, ಕಬ್ಬಿಣ ತಯಾರಿಕೆ ಉದ್ಯಮಗಳು ನೆಲ ಕಚ್ಚಿದ್ದು, ಸಣ್ಣ ಕೈಗಾರಿಕೆಗಳು ಅವಸಾನದ ಅಂಚಿಗೆ ತಲುಪಿವೆ. ಇದರಿಂದ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, ನಿರುದ್ಯೋಗ ಪ್ರಮಾಣ ಶೇ 8.1ರಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.

ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಜನರ ಬದುಕು ದುಸ್ತರವಾಗಿದೆ. ರೈತರ ಉತ್ಪನ್ನಗಳಿಗೆ ಬೆಲೆ ಇಲ್ಲವಾಗಿದ್ದು, ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೋದಿ, ಅಮೆರಿಕದಲ್ಲಿ ‘ಹೌಡಿ ಮೋದಿ’ಯಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಾರತ ಸಮೃದ್ಧವಾಗಿದೆ ಎಂದು ವಿದೇಶಿ ನೆಲದಲ್ಲಿ ಸುಳ್ಳು ಹೇಳುತ್ತಾ ಜನರನ್ನು ನಂಬಿಸುತ್ತಿದ್ದಾರೆ ಎಂದು ಮುಖಂಡರು ದೂರಿದರು.

ಸ್ವದೇಶಿ ಅಭಿಯಾನದ ಹೆಸರಿನಲ್ಲಿ ‘ಮೇಕ್ ಇನ್ ಇಂಡಿಯಾ’, ‘ಮೇಡ್ ಇನ್ ಇಂಡಿಯಾ’ ಮೂಲಕ ವಿದೇಶಿ ವಸ್ತುಗಳಿಗೆ ದೇಶದಲ್ಲಿ ಮುಕ್ತ ಮಾರುಕಟ್ಟೆ ಒದಗಿಸಿ, ಲಾಭ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಈ ರೀತಿ ಮಾಡಿದರೆ ವಿದೇಶಿ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿಗಳ ರೀತಿಯಲ್ಲಿ ಆಕ್ರಮಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಬಿ.ಕೆ.ಹರಿಪ್ರಸಾದ್, ಎಸ್.ಆರ್.ಪಾಟೀಲ, ಈಶ್ವರ ಖಂಡ್ರೆ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು