ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಹಿಡಿದಿಟ್ಟುಕೊಳ್ಳಲು ‘ಕೈ’ ಕಸರತ್ತು

28ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Last Updated 24 ಮೇ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಆಪರೇಷನ್ ಕಮಲದ ಆತಂಕದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಶಾಸಕರ ಬಂಡಾಯ ಶಮನ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಆಲಿಸಲು ಇದೇ 28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಸದಾಶಿವನಗರ ಮನೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುವ ಸಚಿವರಿಗೆ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಹ ಪಾಲ್ಗೊಂಡಿದ್ದರು. ಲೋಕಸಭೆ ಚುನಾವಣೆಯ ಸೋಲಿನ ಬಗ್ಗೆ ಈ ವೇಳೆ ಆತ್ಮಾವಲೋಕನ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ ಸೋಲು ಅನುಭವಿಸಬೇಕಾಯಿತು ಎಂದು ಬಹುತೇಕ ನಾಯಕರು ಅಭಿಪ್ರಾಯಪಟ್ಟರು. ಮೈತ್ರಿ ಪಕ್ಷಗಳ ನಾಯಕರು ಪರಸ್ಪರ ವಿರೋಧಿ ಹೇಳಿಕೆ ನೀಡಿದ್ದು, ಅದು ಜನರ ಮೇಲೆ ಪರಿಣಾಮ ಬೀರಿತು ಎಂಬ ಬಗ್ಗೆಯೂ ಸಭೆ ಚರ್ಚೆ ನಡೆಸಿತು.

ಬಿಜೆಪಿಯು ಆಪರೇಷನ್ ಕಮಲ ನಡೆಸಿ, ಸರ್ಕಾರ ಪತನಕ್ಕೆ ಯತ್ನಿಸಬಹುದು. ಅದಕ್ಕೆ ಅವಕಾಶವಾಗದಂತೆ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮ್ಮಿಶ್ರ ಸರ್ಕಾರವನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು ಎಂದು ಗೊತ್ತಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ಬಗ್ಗೆ ಹೆಚ್ಚು ಚರ್ಚೆಯಾಗಿದ್ದು, ಕಲಬುರ್ಗಿ ಜಿಲ್ಲೆಯ ಪಕ್ಷದ ನಾಯಕರು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಷ್ಟು ಮತಗಳು ಬರುವುದಿಲ್ಲ ಎಂಬುದು ಗೊತ್ತಿದ್ದರೂ ಹೆಚ್ಚಿನ ಯತ್ನ ಹಾಕದೇ ಇದ್ದುದು ಹಿನ್ನಡೆಗೆ ಕಾರಣವಾಯಿತು ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು. ಶಾಸಕ ರೋಷನ್ ಬೇಗ್ ಅಸಹಕಾರ ತೋರುತ್ತಿದ್ದರೂ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಉತ್ತರದಲ್ಲಿ ಕೃಷ್ಣ ಬೈರೇಗೌಡ ಸಮರ್ಥ ಅಭ್ಯರ್ಥಿಯಾಗಿದ್ದರು. ಈ ಕ್ಷೇತ್ರದಲ್ಲಿ ಮೈತ್ರಿಕೂಟದ ಹೆಚ್ಚಿನ ಶಾಸಕರಿದ್ದಾರೆ ಹಾಗೂ ಒಕ್ಕಲಿಗ ಮತಗಳು ಸಾರಾಸಗಟಾಗಿ ಕೈ ಹಿಡಿಯಬಹುದು ಎಂಬ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆ ಸಭೆಯಲ್ಲಿ ನಡೆಯಿತು ಎಂದು ತಿಳಿದು ಬಂದಿದೆ.

ವೀರಪ್ಪ ಮೊಯಿಲಿ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವ ಬಗ್ಗೆ ಪಟ್ಟು ಹಿಡಿದಿದ್ದು ಅಲ್ಲಿನ ಹಿನ್ನಡೆಗೆ ಕಾರಣವಾಯಿತು. ಅವರ ಬದಲು ಬೇರೆಯವರನ್ನು ಕಣಕ್ಕೆ ಇಳಿಸಿದ್ದರೆ ಅನುಕೂಲಕರ ವಾತಾವರಣ ಇತ್ತು. ಜೆಡಿಎಸ್– ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆ.ಎಚ್‌. ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದರಿಂದಾಗಿ ಈ ಕ್ಷೇತ್ರವೂ ಕೈ ತಪ್ಪಿತು ಎಂಬ ವಿಷಯವೂ ಚರ್ಚೆಗೆ ಬಂದಿತು ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ ಕ್ಷೇತ್ರದ ಸಂಡೂರು ಭಾಗದಲ್ಲಿ ಕಾಂಗ್ರೆಸ್ ಮತಗಳಿಕೆ ಕಡಿಮೆಯಾಗಿರುವುದಕ್ಕೆ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವ ಇ.ತುಕಾರಾಂ ಹಾಗೂ ಸಚಿವ ಸ್ಥಾನ ಕೊಟ್ಟರೂ ಗೆಲುವಿಗೆ ಶ್ರಮಿಸದ ಪಿ.ಟಿ. ಪರಮೇಶ್ವರ ನಾಯ್ಕ್ ಅವರನ್ನುಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲಾಖಾವಾರು ಸಭೆ

ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್– ಜೆಡಿಎಸ್ ಮುಖಂಡರ ಜಂಟಿ ಸಭೆ ಕರೆದು ಚರ್ಚಿಸಬೇಕು. ಇಲಾಖಾವಾರು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕು ಎಂಬ ಸಲಹೆ ಸಭೆಯಲ್ಲಿ ಮೂಡಿ ಬಂದಿದೆ.

ಈ ಕೆಲಸವನ್ನು ಮಾಡದೇ ಇರುವುದರಿಂದಾಗಿ ಮೈತ್ರಿ ಸರ್ಕಾರ ಒಂದು ವರ್ಷ ಕಳೆದರೂ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ನಡೆದಿಲ್ಲ. ಇದು ಚುನಾವಣೆಯಲ್ಲಿ ಸೋಲಿಗೆ ಕಾರಣವಾಯಿತು. ಜೆಡಿಎಸ್‌ ಪ್ರತಿನಿಧಿಸುವ ಸಚಿವರು ಆಯಾ ಜಿಲ್ಲೆಯಲ್ಲಿ ಈ ಕೆಲಸ ಮಾಡುವಂತೆ ನಿರ್ದೇಶನ ನೀಡಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುವುದು ಸೂಕ್ತ ಎಂದೂ ಕೆಲವು ಸಚಿವರು ಹೇಳಿದರು ಎಂದು ಗೊತ್ತಾಗಿದೆ.

ರಾಜ್ಯ ರಾಜಕಾರಣದಲ್ಲಿ ಬದಲಾವಣೆ’

ಹಾವೇರಿ: ‘ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ ಹೇಳಿದರು.

ಯಾವ ರೀತಿಯ ಬದಲಾವಣೆ; ಸರ್ಕಾರ ಪತನವಾಗುತ್ತದೆಯೇ? ನಾಯಕತ್ವ ಬದಲಾವಣೆ ಆಗುತ್ತದೆಯೇ ಎನ್ನುವ ಪ್ರಶ್ನೆಗಳಿಗೆ ಅವರು ನೇರವಾಗಿ ಏನನ್ನೂ ಹೇಳಲಿಲ್ಲ.ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹಗಳ ಕುರಿತು ಕೇಳಿದ ಪ್ರಶ್ನೆಗೆ ಎಲ್ಲವೂ ಕಾರ್ಯಕರ್ತರ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದರು.

‘ಮೈತ್ರಿ ಸರ್ಕಾರದಲ್ಲಿನ ನಾಯಕರ ಪರಸ್ಪರ ದೂಷಣೆಯಿಂದ ಕಾಂಗ್ರೆಸ್‌ನ ಸ್ಥಿತಿ ಇತಿಹಾಸದಲ್ಲಿ ಕಂಡರಿಯದಷ್ಟು ಕೆಳಮಟ್ಟಕ್ಕೆ ಹೋಗಿದೆ. ಉತ್ತರ ಕರ್ನಾಟಕ; ವೀರಶೈವ ಲಿಂಗಾಯತ ಸಮುದಾಯದ ನಿರ್ಲಕ್ಷ್ಯ ಮತ್ತು ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT