‘ಗೆದ್ದವರಷ್ಟೇ ಅಲ್ಲ, ಸೋಲುಂಡವರ ಸಹಕಾರವೂ ಅಗತ್ಯ’

7
ಕಾಂಗ್ರೆಸ್‌ ಆತ್ಮಾವಲೋಕನ ಸಭೆ; ಪರಾಜಿತ ಅಭ್ಯರ್ಥಿಗಳ ಪ್ರತಿಪಾದನೆ

‘ಗೆದ್ದವರಷ್ಟೇ ಅಲ್ಲ, ಸೋಲುಂಡವರ ಸಹಕಾರವೂ ಅಗತ್ಯ’

Published:
Updated:

ಬೆಂಗಳೂರು: ‘ಗೆದ್ದವರಷ್ಟೇ ಪಕ್ಷ ಕಟ್ಟಲು ಸಾಧ್ಯ ಇಲ್ಲ. ಸೋಲುಂಡವರ ಸಹಕಾರವೂ ಅಗತ್ಯ’ ಎಂದು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರತಿಪಾದಿಸಿದ್ದಾರೆ.

ಶಾಸಕರ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಆತ್ಮಾವಲೋಕನ ಸಭೆಯಲ್ಲಿ ಚುನಾವಣಾ ಸೋಲಿನ ಹಿಂದಿನ ಕಾರಣಗಳನ್ನು ಪಟ್ಟಿ ಮಾಡಿದ ಪರಾಜಿತ ಅಭ್ಯರ್ಥಿಗಳು, ‘ಪಕ್ಷದ ಮುಖಂಡರ ವರ್ತನೆ ಕೂಡಾ ಸೋಲಿಗೆ ಕಾರಣ. ಹಿರಿಯ ನಾಯಕರು ಪ್ರಚಾರಕ್ಕೆ ಬಾರದಿರುವುದೂ ಸಮಸ್ಯೆಯಾಯಿತು’ ಎಂದು ಅಸಮಾಧಾನ ತೋಡಿಕೊಂಡರು. ಕಡಿಮೆ ಅಂತರದಲ್ಲಿ ಸೋತಿರುವ ಕೆಲವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.

‘ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸೋಲಿಗೆ ಪ್ರಮುಖ ಕಾರಣವಾಯಿತು’ ಎಂದು ಉತ್ತರ ಕರ್ನಾಟಕ ಭಾಗದ ಕೆಲವರು ವಿಶ್ಲೇಷಿಸಿದರು. ಸಿದ್ದರಾಮಯ್ಯ ವಿರುದ್ಧವೂ ಪರೋಕ್ಷವಾಗಿ ಅತೃಪ್ತಿ ಹೊರ ಹಾಕಿದರು. ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದೂ ಸೋಲಿಗೆ ಕಾರಣ ಎಂದು ಮೈಸೂರು ಭಾಗದ ಕೆಲವರು ನೋವು ತೋಡಿಕೊಂಡರು.

‘ಕೆಲವು ಕಡೆ ಪಕ್ಷದ ಸೋಲಿಗೆ ನಮ್ಮವರೇ ಕಾರಣ. ಟಿಕೆಟ್ ಸಿಗದವರು ಪಕ್ಷ ವಿರೋಧಿ ಕೆಲಸ ಮಾಡಿದರು. ಈ ವಿಷಯವನ್ನು ಹಲವು ಬಾರಿ ಗಮನಕ್ಕೆ ತರಲಾಗಿದೆ. ಆದರೆ, ಬೆಂಗಳೂರಿನಲ್ಲಿ ಕುಳಿತವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ದೂರಿದರು. ವಿದ್ಯುತ್‌ ಮತ ಯಂತ್ರ (ಇವಿಎಂ) ಕೂಡಾ ಸೋಲಿಗೆ ಕಾರಣವಾಗಿದೆ. ಇವಿಎಂ ಇದ್ದರೆ ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಸೋಲು ಖಚಿತ ಎಂದೂ ಭವಿಷ್ಯ ನುಡಿದರು.

‘ಕೆಲವು ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಬಿಜೆಪಿಯವರ ಗೂಢಚಾರರಂತೆ ಅಧಿಕಾರಿಗಳು ಕೆಲಸ ಮಾಡಿದ್ದರು. ಜೆಡಿಎಸ್‌ನವರ ಮುಖಾಂತರವೂ ಈ ಕೆಲಸ ನಡೆದಿದೆ’ ಎಂದರು.

‘37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದೀರಿ. 80 ಸ್ಥಾನ ಗೆದ್ದವರಿಗೆ ಹಣಕಾಸು ಖಾತೆ ಪಡೆಯಲು ಸಾಧ್ಯವಾಗಲಿಲ್ಲ. ಪಕ್ಷಕ್ಕೆ ಎಂಥ ಸ್ಥಿತಿ ಬಂದಿದೆ’ ಎಂದು ಎ. ಮಂಜು ವಿಷಾದ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ ವಿಚಾರ ಪ್ರಸ್ತಾಪಿಸಿದ ಮಂಜು, ’ನೀವು ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆ ಮಾಡಿದ್ದ ಅಧಿಕಾರಿಯನ್ನು ಮತ್ತೆ ಹಾಸನ ಜಿಲ್ಲಾಧಿಕಾರಿ ಮಾಡಿದ್ದು ಎಷ್ಟು ಸರಿ’ ಎಂದೂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಸಭೆಯ ಬಳಿಕ ಮಾತನಾಡಿದ ಈಶ್ವರ ಖಂಡ್ರೆ, ‘ಪಕ್ಷದ ಸೋಲಿಗೆ ಕಾರಣಗಳೇನು, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದರು.

‘ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸೋಲು, ಮುಂದಿನ ಚುನಾವಣೆ ಎಲ್ಲದರ ಬಗ್ಗೆಯೂ ಚರ್ಚೆಯಾಗಿದೆ. ಚುನಾವಣಾ ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಸರ್ಕಾರ ರಚನೆ ಆಗಿದೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದಕ್ಕೆ ಆಕ್ಷೇಪ ಇಲ್ಲ. ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಂದುಕೊರತೆಗಳನ್ನು ಗಮನಕ್ಕೆ ತಂದಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಕಾಗೋಡು ತಿಮ್ಮಪ್ಪ, ಎಚ್. ಆಂಜನೇಯ, ಆರ್.ವಿ. ದೇವರಾಜ್, ಮಂಜುನಾಥ ಗೌಡ, ಎಂ.ಡಿ. ಲಕ್ಷ್ಮೀನಾರಾಯಣ, ಇಕ್ಬಾಲ್ ಅನ್ಸಾರಿ, ಯು.ಬಿ. ವೆಂಕಟೇಶ, ಶಿವರಾಜ ತಂಗಡಗಿ, ಎ.ಸಿ. ಶ್ರೀನಿವಾಸ, ಮಂಕಾಳ ವೈದ್ಯ, ಸತೀಶ ಸೈಲ್, ಷಡಕ್ಷರಿ, ಶಿವಮೂರ್ತಿ ನಾಯ್ಕ್, ಸುಧಾಕರ್, ಶಿವಣ್ಣನವರ, ಪ್ರಮೋದ್ ಮಧ್ವರಾಜ್ ಸೇರಿ ನೂರಕ್ಕೂ ಹೆಚ್ಚು ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿದ್ದರು.

* ಸೋಲಿಗೆ ಕಾರಣ ಮತ್ತು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ. ಪಕ್ಷದ ಚೌಕಟ್ಟಿನೊಳಗೆ ಎಲ್ಲ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ನಿಯೋಜಿತ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !