ಮಂಗಳವಾರ, ನವೆಂಬರ್ 12, 2019
28 °C

ಸಿದ್ದರಾಮಯ್ಯ ಹೆಗಲಿಗೆ ಉಪಚುನಾವಣೆ

Published:
Updated:

ಬೆಂಗಳೂರು: ಉಪಚುನಾವಣೆಯ ಜವಾಬ್ದಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೆಗಲಿಗೇರಿದ್ದು, ಸೋಲು–ಗೆಲುವು ಏನೇ ಇದ್ದರೂ ಅದರ ಹೊಣೆಯನ್ನು ಅವರೇ ಹೊರಬೇಕಾಗಿದೆ.

‘ಸಿದ್ದರಾಮಯ್ಯ ಅವರಿಗೆ ಚುನಾವಣೆ ಜವಾಬ್ದಾರಿಯನ್ನು ವಹಿಸಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಹೆಚ್ಚು ಸ್ಥಾನ ಗೆಲ್ಲಬೇಕು’ ಎಂದು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಲಹೆ ಮಾಡಿದರು ಎಂದು ಮೂಲಗಳು ತಿಳಿಸಿವೆ.

ವೇಣುಗೋಪಾಲ್ ನೇತೃತ್ವದಲ್ಲಿ ಮಂಗಳವಾರ ಉಪಚುನಾವಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಆರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಮುಖಂಡರು ಅಭಿಪ್ರಾಯ ಪಡೆದುಕೊಂಡರು.

‘ನಿಮ್ಮ ಮೇಲೆ ಪಕ್ಷದ ಹಿರಿಯರು ಸಾಕಷ್ಟು ದೂರು ಸಲ್ಲಿಸಿದ್ದರು. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಮೈತ್ರಿ ಸರ್ಕಾರದ ಪತನಕ್ಕೆ ನಿಮ್ಮ ಬೆಂಬಲಿಗರೇ ಕಾರಣ ಎಂಬ ಆರೋಪ ವ್ಯಕ್ತವಾಗಿತ್ತು. ಇಷ್ಟೆಲ್ಲ ದೂರುಗಳಿದ್ದರೂ ವಿಶ್ವಾಸವಿಟ್ಟು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಮುಂದೆ ಗುಂಪುಗಾರಿಕೆ ಮಾಡಬಾರದು. ಹಿರಿಯ ಮುಖಂಡರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಮತ್ತೆ ದೂರು ಬರದಂತೆ ನೋಡಿಕೊಳ್ಳಬೇಕು. ನಿಮ್ಮ ಸುತ್ತಮುತ್ತ ಇರುವವರು ಅನಗತ್ಯವಾಗಿ ಟೀಕೆ ಮಾಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.

ದೆಹಲಿಗೆ ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಕಳೆದ ಬಾರಿ ದೆಹಲಿಗೆ ಹೋಗಿದ್ದ ಸಮಯದಲ್ಲಿ ಸೋನಿಯಾ ಭೇಟಿ ಸಾಧ್ಯವಾಗಿರಲಿಲ್ಲ. ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿದ ನಂತರ ಭೇಟಿಗೆ ಸಮಯ ಕೇಳಿದ್ದರು. ಬುಧವಾರ ಬೆಳಿಗ್ಗೆ ಸಮಯ ನೀಡಿದ್ದಾರೆ. ಉಪಚುನಾವಣೆ, ಕಾಂಗ್ರೆಸ್ ನಾಯಕರನ್ನೇ ಗುರಿಯನ್ನಾಗಿಸಿಕೊಂಡು ನಡೆಯುತ್ತಿರುವ ಐ.ಟಿ ದಾಳಿ, ಪಕ್ಷ ಸಂಘಟನೆ ಬಗ್ಗೆ ಈ ಸಮಯದಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)