ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ

7
ಎರಡು ಗುಂಪುಗಳ ಘರ್ಷಣೆ

ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ ಕಾರ್ಯಕ್ರಮದ ಅಂತ್ಯದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಜೊತೆ ಗುರುತಿಸಿಕೊಂಡಿರುವ ಇನ್‌ಟಕ್‌ ಸಂಘಟನೆಯ ಪುನೀತ್‌ ಶೆಟ್ಟಿ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್‌ ರೈ ಜೊತೆ ಗುರುತಿಸಿಕೊಂಡಿರುವ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಪುನೀತ್ ಶೆಟ್ಟಿ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ.

ರಾಷ್ಟ್ರಗೀತೆಯೊಂದಿಗೆ ಸಮಾರಂಭ ಅಂತ್ಯಗೊಂಡಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಐವನ್‌, ಮಿಥುನ್‌ ಸೇರಿದಂತೆ ವೇದಿಕೆಯಲ್ಲಿದ್ದವರು ಕೆಳಕ್ಕೆ ಬರುತ್ತಿದ್ದರು. ಅಷ್ಟರಲ್ಲಿ ಪುನೀತ್‌ ಶೆಟ್ಟಿ ಮತ್ತು ಮಿಥುನ್‌ ಬೆಂಬಲಿಗ ಶ್ರೀನಿವಾಸ್‌ ಹಾಗೂ ಗುಂಪಿನ ನಡುವೆ ಘರ್ಷಣೆ ಆರಂಭವಾಗಿದೆ. ಕೆಲಕಾಲ ಮಾರಾಮಾರಿ ನಡೆದಿದ್ದು, ಹಿರಿಯ ಮುಖಂಡರು ಮಧ್ಯ ಪ್ರವೇಶಿಸಿ ತಣ್ಣಗಾಗಿಸಿದ್ದಾರೆ.

ದೂರು ದಾಖಲು

ಪುನೀತ್‌ ಶೆಟ್ಟಿ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದು, ಮಿಥುನ್‌ ರೈ ಸೇರಿದಂತೆ 13ಕ್ಕೂ ಹೆಚ್ಚು ಮಂದಿ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲವು ದಿನಗಳಿಂದ ತನ್ನ ಮೇಲೆ ಹಲ್ಲೆಗೆ ಹೊಂಚು ಹಾಕುತ್ತಿದ್ದು, ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.

ಆದರೆ, ಪುನೀತ್ ಆರೋಪವನ್ನು ನಿರಾಕರಿಸಿರುವ ಮಿಥುನ್‌ ರೈ, ‘ಗುರುವಾರದ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಪಕ್ಷದ ಕಾರ್ಯಕರ್ತ ಲಾರೆನ್ಸ್ ಎಂಬುವವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !