ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌, ಹೋರ್ಡಿಂಗ್‌, ಬ್ಯಾನರ್‌ ತೆರವು

ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 30 ಮಾರ್ಚ್ 2018, 9:24 IST
ಅಕ್ಷರ ಗಾತ್ರ

ದಾವಣಗೆರೆ: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಪ್ರದೇಶಗಳಲ್ಲಿ ಹಾಗೂ ಬೀದಿ ಬದಿಯಲ್ಲಿ ಅಳವಡಿಸಿದ್ದ ಸರ್ಕಾರದ ವಿವಿಧ ಯೋಜನೆಗಳ ಹೋರ್ಡಿಂಗ್, ರಾಜಕೀಯ ಪಕ್ಷಗಳ ಬೆಂಬಲಿಗರು ಅಳವಡಿಸಿದ್ದ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯವು ಗುರುವಾರವೂ ಭರದಿಂದ ಸಾಗಿತ್ತು.ಪಾಲಿಕೆ ಆಯುಕ್ತ ಮಂಜುನಾಥ ಆರ್‌.ಬಳ್ಳಾರಿ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಆರಂಭವಾದ ತೆರವು ಕಾರ್ಯಾಚರಣೆಯು ಸಂಜೆ 6ರ ತನಕವೂ ಮುಂದುವರಿದಿತ್ತು.

ಎಲ್ಲೆಲ್ಲಿ ಕಾರ್ಯಾಚರಣೆ: ಯರಗುಂಟೆ ರಸ್ತೆ, ಗಾಂಧಿನಗರ, ಹಗೆದಿಬ್ಬ ವೃತ್ತ, ಶಿವಾಜಿನಗರ, ಚಾಮರಾಜ ಪೇಟೆ, ಮಂಡಿಪೇಟೆ, ಬಸವರಾಜ ಪೇಟೆ, ನರಸರಾಜ ರಸ್ತೆ, ಕೆ.ಆರ್.ರಸ್ತೆ, ಆಜಾದ್‌ ನಗರ, ಹೊಂಡದ ವೃತ್ತ, ಹಳೇ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಎದುರು, ಉಪ ವಿಭಾಗಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣದ ಎದುರು, ಪಾಲಿಕೆ ಎದುರು, ಶಿವಪ್ಪಯ್ಯ ಸರ್ಕಲ್‌, ನಿಟುವಳ್ಳಿ, ಡಾಂಗೆ ಉದ್ಯಾನ, ವಿಶ್ವೇಶ್ವರಯ್ಯ ಉದ್ಯಾನ, ಎವಿಕೆ ರಸ್ತೆ, ಗುಂಡಿ ವೃತ್ತ, ವಿದ್ಯಾನಗರ, ಹದಡಿ ರಸ್ತೆ, ಐಟಿಐ ಕಾಲೇಜು, ವಿನೋಬ ನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ಬಿಐಇಟಿ, ಎಂಸಿಸಿ ‘ಎ’ ಮತ್ತು ‘ಬಿ’ ಬ್ಲಾಕ್‌.. ಸೇರಿದಂತೆ ಪಿ.ಬಿ. ರಸ್ತೆಯುದ್ದಕ್ಕೂ ಅಳವಡಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತು ಫಲಕಗಳಿಗೆ ಬಟ್ಟೆ ಹಾಕುವ, ಪೇಪರ್‌ ಅಂಟಿಸುವ ಹಾಗೂ ಜನಪ್ರತಿನಿಧಿಗಳ ಹೆಸರಿನ ಫಲಕಗಳಿಗೆ ಬಣ್ಣ ಹಚ್ಚುವ ಕಾರ್ಯಾಚರಣೆ ನಡೆಯಿತು.

ಶೇ 100 ತೆರವು: ‘ಮಾರ್ಚ್‌ 27ರಂದು ಬೆಳಿಗ್ಗೆ 11ಕ್ಕೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರ ವಿವಿಧ ಯೋಜನೆಗಳ ಜಾಹೀರಾತು ಫಲಕ, ಫ್ಲೆಕ್ಸ್‌, ಹೋರ್ಡಿಂಗ್‌ಗಳ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ಕೆಲ ಫಲಗಳನ್ನು ತೆರವುಗೊಳಿಸಲಾಗಿದೆ. ಬೃಹತ್‌ ಹೋರ್ಡಿಂಗ್‌ಗಳನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಯಿತು. ಸ್ವಾಗತ ಕಮಾನುಗಳಲ್ಲಿದ್ದ ಸಚಿವ ಹಾಗೂ ಶಾಸಕರ ಹೆಸರು, ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ. ಒಟ್ಟಾರೆ ಶೇ 100ರಷ್ಟು ಫ್ಲೆಕ್ಸ್‌, ಹೋರ್ಡಿಂಗ್‌, ಬ್ಯಾನರ್‌ ತೆರವು ಕಾರ್ಯಚರಣೆ ಮಾಡಲಾಗಿದೆ’ ಎಂದು ಆಯುಕ್ತ ಮಂಜುನಾಥ ಆರ್. ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೋತಿವೀರಪ್ಪ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಶಾಮನೂರಿನ ಸರ್ಕಾರಿ ಶಾಲೆಗಳ ಕಟ್ಟಡಗಳ ಮೇಲೆ ಸಿಮೆಂಟ್‌ನಿಂದಲೇ ಜನಪ್ರತಿನಿಧಿಗಳ ಹೆಸರನ್ನು ಕೆತ್ತಲಾಗಿದೆ. ಅದರ ಮೇಲೆಯೂ ಬಟ್ಟೆ ಅಳವಡಿಸಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ ಕಟ್ಟಡದ ಮೇಲಿರುವ ಇಂದಿರಾ ಗಾಂಧಿ ಹಾಗೂ ಮುಖ್ಯಮಂತ್ರಿ ಭಾವಚಿತ್ರವನ್ನೂ ಸಹ ಬಿಳಿ ಪೇಪರ್‌ನಿಂದ ಮುಚ್ಚಲಾಗಿದೆ. ಬೆಳಿಗ್ಗೆ 6ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಪೌರಕಾರ್ಮಿಕರು, 20 ಆರೋಗ್ಯ ಅಧಿಕಾರಿಗಳು, 25 ಎಂಜಿನಿಯರ್‌ ಭಾಗವಹಿಸಿದ್ದರು ಎಂದು ಅವರು ಮಾಹಿತಿ ನೀಡಿದರು.

‘ಬಂದೂಕುಗಳನ್ನು ಠೇವಣಿಯಾಗಿ ಇರಿಸಿಕೊಂಡಿದ್ದೇವೆ’

ಜಿಲ್ಲೆಯಲ್ಲಿ ಪರವಾನಗಿ ಪಡೆದು ಖಾಸಗಿಯಾಗಿ ಬಂದೂಕು ಹೊಂದಿರುವ ವ್ಯಕ್ತಿಗಳಿಂದ ಬಂದೂಕು, ಶಸ್ತ್ರಸ್ತ್ರಗಳನ್ನು ಆಯಾ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಠೇವಣಿಯಾಗಿ ಇರಿಸಿಕೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿರಿಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಜಿಲ್ಲಾ ವ್ಯಾಪ್ತಿಯಲ್ಲಿನ ಬ್ಯಾಂಕ್‌, ಹಣಕಾಸು ಸಂಸ್ಥೆ ಹಾಗೂ ಕೈಗಾರಿಕೆಗಳ ಭದ್ರತೆಯ ದೃಷ್ಟಿಯಿಂದ ಅವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವಾಹನ ಮುಟ್ಟುಗೋಲು

ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಮೇಯರ್‌, ಉಪ ಮೇಯರ್‌, ‘ದೂಡಾ’ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ತಾಲ್ಲೂಕು ಮಟ್ಟದಲ್ಲಿನ ತಾಲ್ಲೂಕು ಪಂಚಾಯ್ತಿ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಎಲ್‌ಡಿ ಬ್ಯಾಂಕ್‌ಗಳ ಅಧ್ಯಕ್ಷ, ಉಪಾಧ್ಯಕ್ಷರ ವಾಹನ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉಪಯೋಗಿಸುತ್ತಿದ್ದ ಸರ್ಕಾರದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಕೆಲವೆಡೆ ಚೆಕ್‌ಪೋಸ್ಟ್‌ ಆರಂಭ

ನೀತಿ ಸಂಹಿತೆ ಜಾರಿ ಹಿನ್ನೆಯಲ್ಲಿ ಜಿಲ್ಲೆಯ ಪ್ರಮುಖ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ ತೆರೆಯುವ ಕಾರ್ಯ ಗುರುವಾರ ಆರಂಭವಾಯಿತು.ಜಿಲ್ಲೆಯಾದ್ಯಂತ ವಿವಿಧೆಡೆ ಒಟ್ಟು 47 ಚೆಕ್‌ಪೋಸ್ಟ್‌ಗಳನ್ನು ತೆರೆಯಲು ನಿರ್ಣಯಿಸಲಾಗಿದ್ದು, ಮೊದಲ ಹಂತದಲ್ಲಿ ಹರಿಹರ ಬಳಿಯ ಅಮರಾವತಿ, ನಂದಿಗಾವಿ, ಹರಪನಹಳ್ಳಿ ಮಾರ್ಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಯಿತು. ಈ ಚೆಕ್‌ಪೋಸ್ಟ್‌ಗಳು 24X7 ಕಾರ್ಯ ನಿರ್ವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT