ಸೋಮವಾರ, ಮಾರ್ಚ್ 8, 2021
29 °C

ಕಾಂಗ್ರೆಸ್‌ ಪಕ್ಷದಲ್ಲಿನ ನಿರ್ಲಕ್ಷ್ಯ ರಾಮಲಿಂಗಾರೆಡ್ಡಿ ರಾಜೀನಾಮೆಗೆ ಕಾರಣವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ರಾಮಲಿಂಗಾರೆಡ್ಡಿ ಅವರ ಅಸಮಾಧಾನಕ್ಕೆ ಇಂದು ಬೆಂಕಿ ಹೊತ್ತಿಕೊಂಡಿದೆ. ಕಾಂಗ್ರೆಸ್‌ ಪಕ್ಷದಲ್ಲಿನ ನಿರ್ಲಕ್ಯವೇ ಅವರ ರಾಜೀನಾಮೆಗೆ ಕಾರಣವೇ? 

ರಾಜೀನಾಮೆಗೆ ಸ್ಪಷ್ಟ ಕಾರಣವನ್ನು ರಾಮಲಿಂಗಾರೆಡ್ಡಿ ಅವರು ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ. ರಾಜೀನಾಮೆ ನಂತರ ಮಾತನಾಡಿದ ಅವರು ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ವಾಪಸ್ ಪಡೆಯುವ ಮಾತೇ ಇಲ್ಲ. ನನ್ನ ರಾಜೀನಾಮೆ ಕಾರಣ ಮಾಧ್ಯಮದವರಿಗೆ ಗೊತ್ತು. ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ’ ಎಂದಷ್ಟೇ ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಕೆಲ ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದರು.

‘ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಹಾಗೂ ಕೆಲವು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆಯಿಂದಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು’ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ  ಆಕ್ರೋಶ ವ್ಯಕ್ತಪಡಿಸಿದ್ದರು.

‘ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ, ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ’ ಎಂದಿದ್ದರು.

‘ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ್ಯ. ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.

‘ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯವಾದೀತು’ ಎಂದು ಅಸಮಾಧಾನ ಹೊರಹಾಕಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು