ಕಾಂಗ್ರೆಸ್‌ನಲ್ಲಿ ‘ಉತ್ತರ– ದಕ್ಷಿಣ’ ತಾರತಮ್ಯ ಚರ್ಚೆ!

7
ಸಭಾಪತಿ ಸ್ಥಾನ ಸೃಷ್ಟಿಸಿದ ಗೊಂದಲ; ಸಿಎಲ್‌ಪಿಯಲ್ಲಿ ಬಿಸಿಬಿಸಿ ಚರ್ಚೆ ಸಾಧ್ಯತೆ

ಕಾಂಗ್ರೆಸ್‌ನಲ್ಲಿ ‘ಉತ್ತರ– ದಕ್ಷಿಣ’ ತಾರತಮ್ಯ ಚರ್ಚೆ!

Published:
Updated:

ಬೆಳಗಾವಿ: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಎಸ್‌. ಆರ್‌. ಪಾಟೀಲರನ್ನು ಪರಿಗಣಿಸದಿರುವ ಕಾಂಗ್ರೆಸ್ ನಾಯಕರ ನಡೆ ಪಕ್ಷದೊಳಗೆ ಉತ್ತರ– ದಕ್ಷಿಣ ತಾರತಮ್ಯ ಚರ್ಚೆಗೆ ವಸ್ತುವಾಗಿದೆ.

ಎಸ್‌.ಆರ್‌.ಪಾಟೀಲ ಇನ್ನೇನು ಸಭಾಪತಿ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವಷ್ಟರಲ್ಲಿ ಆ ಸ್ಥಾನಕ್ಕೆ ಪ್ರತಾಪ್‌ ಚಂದ್ರ ಶೆಟ್ಟಿ ಅವರನ್ನು ತಂದು ಕೂರಿಸಲಾಯಿತು. ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಟೀಲರು ನಿರಾಶರಾಗಿದ್ದಾರೆ. ಇದೀಗ ಉತ್ತರ ಕರ್ನಾಟಕ ಭಾಗದ ಕೈ ಶಾಸಕರು ಅವರ ಬೆನ್ನಿಗೆ ನಿಂತಿರುವುದು ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಕ್ಕೂ ಕಾರಣವಾಗಿದೆ.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಭಾನಾಯಕ, ಇದೀಗ ಸಭಾಪತಿ ಸ್ಥಾನವೂ ಉತ್ತರ ಕರ್ನಾಟಕ ಭಾಗಕ್ಕೆ ತಪ್ಪಿದೆ. ಈ ವಿಷಯವನ್ನು ಹೀಗೇ ಬಿಡುವುದು ಸರಿಯಲ್ಲ. ಪಾಟೀಲರಿಗೆ ಆಗಿರುವ ಅನ್ಯಾಯವನ್ನು ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಪ್ರಸ್ತಾಪಿಸಬೇಕು. ಅಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೆ ಸ್ಥಾನಮಾನ ಪಡೆದುಕೊಳ್ಳುವ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಈ ಭಾಗದ ಶಾಸಕರು ನಿರ್ಧರಿಸಿದ್ದಾರೆ.

ಇದೇ 18ರಂದು ಇಲ್ಲಿನ ಸುವರ್ಣಸೌಧದಲ್ಲಿ ಸಿಎಲ್‌ಪಿ ಸಭೆ ನಡೆಯಲಿದೆ. ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಪಸು ಬಂದಿದ್ದು, ಸೋಮವಾರದಿಂದ (ಡಿ. 17) ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಸಭಾಪತಿ ಸ್ಥಾನ ಕೈ ತಪ್ಪಿದ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲು ಕೂಡ ಶಾಸಕರು ತೀರ್ಮಾನಿಸಿದ್ದಾರೆ.

‘ಸಭಾಪತಿ ಸ್ಥಾನಕ್ಕೆ ಆಯ್ಕೆ ವೇಳೆ ಎಸ್‌.ಆರ್‌. ಪಾಟೀಲರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು’ ಎಂದಿರುವ ಹಿರಿಯ ಶಾಸಕ ಎಂ.ಬಿ. ಪಾಟೀಲ, ‘ಪಕ್ಷದ ಕೆಲವು ಮಾನದಂಡಗಳಿಂದ ಅವರಿಗೆ ಅವಕಾಶ ತಪ್ಪಿದೆ. ಇದರಿಂದ ಸ್ವಾಭಾವಿಕವಾಗಿ ಉತ್ತರ ಭಾಗದ ಎಲ್ಲ ಶಾಸಕರಿಗೆ ನೋವಾಗಿದೆ’ ಎಂದರು.

‘ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳಿದ್ದಂತೆ. ರಾಜ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಕಾಂಗ್ರೆಸ್‌ನಲ್ಲಿ ಹೆಚ್ಚು ಶಾಸಕರು ಉತ್ತರ ಭಾಗದಿಂದ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕದ 41 ಶಾಸಕರಲ್ಲಿ ಐವರು ಸಚಿವರಾಗಿದ್ದಾರೆ. ಆದರೆ, ದಕ್ಷಿಣ ಕರ್ನಾಟಕದ 36ರಲ್ಲಿ ಒಂಬತ್ತು ಮಂದಿ ಸಚಿರಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೆ ಇದು ನಿದರ್ಶನ’ ಎಂದು ಕಿಡಿಕಾರಿದರು.

‘ಈ ತಾರತಮ್ಯವನ್ನು  ಹೋಗಲಾಡಿಸಬೇಕು. ಪಕ್ಷದ ಪ್ರಮುಖ ಹುದ್ದೆಗಳು ಹಾಗೂ ಸರ್ಕಾರದ ಹುದ್ದೆಗಳು ಎಲ್ಲವೂದಕ್ಷಿಣ ಕರ್ನಾಟಕಕ್ಕೆ ಸಿಕ್ಕಿವೆ.  ಹೀಗಾಗಿ ಇದನ್ನು ಸರಿಪಡಿಸಿ ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕಕ್ಕೂ ಮಹತ್ವ ಕೊಡಬೇಕು’ ಎಂದು ಆಗ್ರಹಿಸಿದರು.

ರಾಹುಲ್‌ ಗಾಂಧಿಗೆ ಪತ್ರ?

ಪಕ್ಷದೊಳಗಿನ ‘ರಾಜಕೀಯ’ ವಿದ್ಯಮಾನಗಳ ಕುರಿತು ರಾಹುಲ್‌ ಗಾಂಧಿಗೆ ಪತ್ರ ಬರೆಯಲು ಹಿರಿಯ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿ ಶಾಸಕರು ಹಿರಿಯ ಶಾಸಕರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ.

ಪ್ರಮುಖ ಹುದ್ದೆಗಳಿಗೆ ಪಟ್ಟು

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಆಗಿರುವ ಅನ್ಯಾಯ ನಿವಾರಣೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮಂಡಿಸಲು ಉತ್ತರ ಕರ್ನಾಟಕದ ಕಾಂಗ್ರೆಸ್‌ ಶಾಸಕರು ತೀರ್ಮಾನಿಸಿದ್ದಾರೆ. ಗುರುವಾರ ಶಾಸಕರಾದ ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಸ್‌.ಆರ್‌.ಪಾಟೀಲ ಮತ್ತು ಇತರ ಶಾಸಕರು ಚರ್ಚೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !