ಕಾಂಗ್ರೆಸ್‌ಗೆ ಬಂಡಾಯದ ಬಿಸಿ

7

ಕಾಂಗ್ರೆಸ್‌ಗೆ ಬಂಡಾಯದ ಬಿಸಿ

Published:
Updated:
Deccan Herald

ಬೆಂಗಳೂರು: ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ‘ಮೈತ್ರಿ ರಾಜಕಾರಣ’ದ ಭಾಗವಾಗಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಸ್ಥಳೀಯ ಕಾಂಗ್ರೆಸ್‌ ನಾಯಕರು ತಿರುಗಿಬಿದ್ದಿದ್ದಾರೆ.

ಈ ಮಧ್ಯೆ, ರಾಮನಗರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸದ ಬಿಜೆಪಿ, ಕಾಂಗ್ರೆಸ್‌ ಒಳಗಿನ ಬೆಳವಣಿಗೆಗಳನ್ನು ಕಾದು ನೋಡಲು ಮುಂದಾಗಿದೆ. ಜೆಡಿಎಸ್‌ ಈಗಾಗಲೇ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಆ ಬೆನ್ನಲ್ಲೆ, ಪಕ್ಷದ ನಿಲುವಿನ ವಿರುದ್ಧ ಸಡ್ಡು ಹೊಡೆದಿರುವ ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ. ಲಿಂಗಪ್ಪ ಮತ್ತು ಕಳೆದ ಚುನಾವಣೆಯಲ್ಲಿ ಸೋತಿದ್ದ ಇಕ್ಬಾಲ್‌ ಹುಸೇನ್‌ ಸ್ವತಂತ್ರವಾಗಿ ಕಣಕ್ಕಿಳಿಯುವ ಬೆದರಿಕೆ ಒಡ್ಡಿದ್ದಾರೆ.

‘ನಮಗೆ ಸರ್ಕಾರದ ಉಳಿವಿಗಿಂತ ಕಾರ್ಯಕರ್ತರ ಹಿತ ಮುಖ್ಯ. ಹೀಗಾಗಿ, ಕಾಂಗ್ರೆಸ್‌ನಿಂದ ಇಕ್ಬಾಲ್‌ ಹುಸೇನ್‌ ಸ್ಪರ್ಧಿಸದಿದ್ದರೆ ನಾನೇ ಅಭ್ಯರ್ಥಿಯಾಗುತ್ತೇನೆ’ ಎಂದು ಲಿಂಗಪ್ಪ ಹೇಳಿದ್ದಾರೆ. ಆದರೆ ಹುಸೇನ್‌, ‘ಕಾರ್ಯಕರ್ತರ ಅಭಿಪ್ರಾಯ ಪಡೆದು ಭಾನುವಾರದೊಳಗೆ ನಿರ್ಧಾರ ಪ್ರಕಟಿಸುತ್ತೇನೆ’ ಎಂದಿದ್ದಾರೆ. ಲಿಂಗಪ್ಪ, ಹುಸೇನ್ ಸೇರಿದಂತೆ ಕೆಲವು ನಾಯಕರು ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದರು.

ಅದಕ್ಕೆ ಆಕ್ರೋಶಗೊಂಡ ಶಿವಕುಮಾರ್, ‘ನನ್ನ ತೀರ್ಮಾನವಲ್ಲ, ಹೈಕಮಾಂಡ್ ನಿರ್ಧಾರ. ಪಕ್ಷದ ತೀರ್ಮಾನದ ವಿರುದ್ಧ ಯಾರೂ ಹೋಗಬೇಡಿ’ ಎಂದಿದ್ದಾರೆ.

ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

‘ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಬಳ್ಳಾರಿಗೆ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಗೊಂದಲ ಇಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಯನ್ನು ಘೋಷಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

* ಜೆಡಿಎಸ್‌ ಜತೆ ಮೈತ್ರಿ ಹೈಕಮಾಂಡ್ ನಿರ್ಧಾರ. ಪಕ್ಷದ ಶಿಸ್ತು ಯಾರೂ ಮೀರಬಾರದು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಕೈಗೊಳ್ಳಲಾಗುವುದು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !