ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಡೇರಲಿಲ್ಲ ನಿಕೋಟಿನ್‌ ರಹಿತ ತಂಬಾಕು ಶೋಧ’

Last Updated 20 ಮಾರ್ಚ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಕೋಟಿನ್‌ ಅಂಶವಿಲ್ಲದ ತಂಬಾಕನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಸಸ್ಯವಿಜ್ಞಾನಿ ಬಿ.ಜಿ.ಎಲ್‌.ಸ್ವಾಮಿ ತೊಡಗಿದ್ದರು. ಆದರೆ, ಅದನ್ನು ಆವಿಷ್ಕರಿಸುವ ಮುನ್ನವೇ ಅವರು ತೀರಿಕೊಂಡರು’ ಎಂದು ಕಥೆಗಾರ ಎಸ್‌.ದಿವಾಕರ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬಿ.ಜಿ.ಎಲ್‌.ಸ್ವಾಮಿ ಅವರ ಶತಮಾನೋತ್ಸವ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿಕೋಟಿನ್‌ರಹಿತ ತಂಬಾಕು ಕಂಡುಹಿಡಿದಿದ್ದರೆ ಅವರಿಗೆ ಅತ್ಯುನ್ನತ ಪ್ರಶಸ್ತಿಗಳು ಒಲಿದು ಬರುತ್ತಿದ್ದವು. ಅಲ್ಲದೆ, ಧೂಮಪಾನ ನಿಷೇಧಿಸುವ ಪ್ರಮೇಯ ಬರುತ್ತಿರಲಿಲ್ಲ’ ಎಂದರು.

ಬಿ.ಜಿ.ಎಲ್‌. ಸ್ವಾಮಿ ಲೇಖಕರಾಗಿ ಕನ್ನಡಿಗರಿಗೆ ಪರಿಚಿತರು. ಅವರ ಅನ್ಯ ಸಾಧನೆಗಳ ಬಗ್ಗೆ ಜನರಿಗೆ ಪರಿಚಯವಿಲ್ಲ. ಅವರು ಸಸ್ಯಶಾಸ್ತ್ರ, ಸಾಹಿತ್ಯ, ಚಿತ್ರಕಲೆ, ಸಂಗೀತ ಕ್ಷೇತ್ರಗಳಲ್ಲಿ ಪರಿಣತಿ ಗಳಿಸಿದ್ದರು. ಅಂತರರಾಷ್ಟ್ರೀಯ ಸಸ್ಯಶಾಸ್ತ್ರಜ್ಞರ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು ಎಂದು ತಿಳಿಸಿದರು.

ಅವರು ಕನ್ನಡದ ಜತೆಗೆ ತಮಿಳು, ಫ್ರೆಂಚ್‌, ಸ್ಪ್ಯಾನಿಷ್‌, ಇಟಲಿ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ಬೇರಿನಿಂದ ಕಾಂಡಕ್ಕೆ ಬರುವ ಕೊಳವೆ ಬಗ್ಗೆ 18ನೇ ಶತಮಾನದ ಫ್ರೆಂಚ್‌ ವಿಜ್ಞಾನಿ ಮಂಡಿಸಿದ ಸಿದ್ಧಾಂತದಲ್ಲಿದ್ದ ತಪ್ಪನ್ನು ಎತ್ತಿ ತೋರಿಸುವ ಉದ್ದೇಶದಿಂದ ಫ್ರೆಂಚ್‌ ಭಾಷೆಯನ್ನು ಕಲಿತಿದ್ದರು. ಆ ಭಾಷೆಯಲ್ಲಿ ಪ್ರಬಂಧ ಬರೆದಿದ್ದರು ಎಂದು ಸ್ಮರಿಸಿದರು.

‘ಬಿ.ಜಿ.ಎಲ್‌.ಸ್ವಾಮಿ ಮಹಾಕಾವ್ಯ’

‘ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಒಂದು ಮಹಾಕಾವ್ಯವಾದರೆ, ಅವರ ಮಗ ಪೂರ್ಣಚಂದ್ರ ತೇಜಸ್ವಿ ಮತ್ತೊಂದು ಮಹಾಕಾವ್ಯ. ಅದೇ ರೀತಿ, ಡಿ.ವಿ.ಜಿ ಅವರ ’ಮಂಕುತಿಮ್ಮನ ಕಗ್ಗ’ ಮಹಾಕಾವ್ಯವಾದರೆ, ಅವರ ಮಗ ಬಿ.ಜಿ.ಎಲ್‌.ಸ್ವಾಮಿ ಮತ್ತೊಂದು ಮಹಾಕಾವ್ಯ’ ಎಂದು ವಿಮರ್ಶಕ ಬೈರಮಂಗಲ ರಾಮೇಗೌಡ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT