ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಕತ್ತಿಲ್ಲದಿದ್ದರೆ ಕುರ್ಚಿಯಿಂದ ಇಳಿಯಿರಿ: ಸಿಎಂಗೆ ಸಿದ್ದರಾಮಯ್ಯ ಒತ್ತಾಯ

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್
Last Updated 24 ಸೆಪ್ಟೆಂಬರ್ 2019, 18:16 IST
ಅಕ್ಷರ ಗಾತ್ರ

ಬೆಳಗಾವಿ: ನೆರೆ ಸಂತ್ರಸ್ತರಿಗೆ ತ್ವರಿತವಾಗಿ ಸಮರ್ಪಕ ಪರಿಹಾರ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಗುಡುಗಿದರು.

ಸಂಗೊಳ್ಳಿರಾಯಣ್ಣ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ, ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರಕ್ಕೂ ಈ ವೇದಿಕೆ ಬಳಸಿಕೊಂಡ ಮುಖಂಡರು, ‘ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು’ ಎಂಬ ಮನವಿಯನ್ನೂ ಮಾಡಿದರು.

ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಸಮೀಕ್ಷೆ ನಡೆಸಿ ಹೋದರೂ ಕೇಂದ್ರದಿಂದ ಅನುದಾನ ಬಿಡುಗಡೆ ಆಗದಿರುವುದನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ‘₹10 ಸಾವಿರ ಪರಿಹಾರ ಕೊಟ್ಟಿದ್ದೇ ಜಾಸ್ತಿಯಾಯಿತು’ ಎಂದಿರುವ ಸಚಿವ ಕೆ.ಎಸ್. ಈಶ್ವರಪ್ಪ, ‘ಕೇಂದ್ರದಿಂದ ನೆರವು ಕೇಳುವ ಅಗತ್ಯವಿಲ್ಲ’ ಎಂಬ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕುರ್ಚಿಯಿಂದ ಇಳಿಯಿರಿ: ಸಿದ್ದರಾಮಯ್ಯ ಮಾತನಾಡಿ, ‘ಪ್ರವಾಹ ಬಂದು 50 ದಿನಗಳಾದರೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರೈತರು ಹಾಗೂ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಆದರೂ ಏನೂ ಆಗಿಲ್ಲ ಎನ್ನುವಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ. ಇವರದು ಮನುಷ್ಯರ ಚರ್ಮವಾ?’ ಎಂದು ಕೇಳಿದರು.

‘ಕೇಂದ್ರ ಸಚಿವರು ಕಾಟಾಚಾರಕ್ಕೆಂದು ಸಮೀಕ್ಷೆ ಮಾಡಿದ್ದಾರೆ. ಆದರೆ, ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಅವರಿಗೆ ಮನುಷ್ಯತ್ವ ಇದೆಯೇ? ಬಡವರು, ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಅಧಿಕಾರದಲ್ಲಿ ಇರಬೇಕೇಕೆ? ಯಡಿಯೂರಪ್ಪಗೆ ಆಡಳಿತ ನಡೆಸುವ ತಾಕತ್ತಿಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಲಿ. ನಾವು ಬಂದು ಜನರ ಕಷ್ಟಗಳನ್ನು ಬಗೆಹರಿಸುತ್ತೇವೆ’ ಎಂದರು.

‘ನಿಮಗೇನು ರೋಗ ಬಂದಿದೆಯೇ, ಯಾರ ಹಣ ಕೊಡುತ್ತೀರಿ, ಜನರ ತೆರಿಗೆ ಹಣಕೊಡುವುದಕ್ಕೂ ಕಷ್ಟವೇ?’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ನಮ್ಮನ್ನಾದರೂ ಕರೆದುಕೊಂಡು ಹೋಗಿ: ‘ಪರಿಹಾರಕ್ಕಾಗಿ ಪ್ರಧಾನಿಯನ್ನು ಕೇಳಲು ಧೈರ್ಯವಿಲ್ಲದಿದ್ದರೆ ನಮ್ಮನ್ನಾದರೂ ಕರೆದುಕೊಂಡು ಹೋಗಿ, ನಾವು ಕೇಳುತ್ತೇವೆ’ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

‘ಉಪ ಚುನಾವಣೆ ಬಳಿಕ ಬೆಳಗಾವಿಯಲ್ಲೇ ವಿಧಾನಮಂಡಲ ಅಧಿವೇಶನ ನಡೆಸಬೇಕು. ಇಲ್ಲದಿದ್ದರೆ ಉತ್ತರ ಕರ್ನಾಟಕದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಂತ್ರಸ್ತರ ವಿಷಯದಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ಕಾನೂನು ಉಲ್ಲಂಘನೆ, ಜೈಲ್‌ ಭರೋ ಚಳವಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮುಖಂಡರಾದ ಈಶ್ವರ ಖಂಡ್ರೆ, ಸಿ.ಎಂ. ಇಬ್ರಾಹಿಂ, ವಿ.ಎಸ್. ಉಗ್ರ‍ಪ್ಪ, ಶಾಸಕರಾದ ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಅಂಜಲಿ ನಿಂಬಾಳ್ಕರ್, ಆನಂದ ನ್ಯಾಮಗೌಡ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ ಇದ್ದರು.

‘ಟ್ರಂಪ್‌ ಪರ ಪ್ರಚಾರಕ್ಕೆ ಹೋಗಿದ್ದರು’
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಜನರು ಬೀದಿಪಾಲಾಗಿದ್ದಾರೆ. ಇಲ್ಲಿಗೆ ಬಂದು ಅವರನ್ನು ನೋಡದೇ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಚಾರಕ್ಕೆ ಹೋಗಿದ್ದೀರಲ್ಲಾ, ನಾಚಿಕೆ ಆಗುವುದಿಲ್ಲವೇ? ಸಬ್‌ ಕಾ ಸಾಥ್‌ ಸಬ್ ಕಾ ವಿಕಾಸ್ ಮಾಡಿದ್ದೇನೆ ಎಂದು ಅಲ್ಲೂ ಹೇಳಿಕೊಂಡಿದ್ದೀರಿ. ಇಲ್ಲಿನವರ ದುಃಸ್ಥಿತಿ ನೋಡಿದ್ದೀರಾ?’ ಎಂದು ಕೇಳಿದರು.

ರೋಹಿಣಿ ವರ್ಗಾವಣೆಗೆ ಖಂಡನೆ
‘ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಒಪ್ಪದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಈ ಸರ್ಕಾರ ವರ್ಗಾವಣೆ ಮಾಡಿದೆ. ಇದು ಖಂಡನೀಯ. ಪರಿಶಿಷ್ಟರಿಗೆಂದು ಮೀಸಲಿಟ್ಟಿರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ರಾಜ್ಯ ಮತ್ತು ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಆದರೆ, ಪ್ರದೇಶ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ಹುಬ್ಬಳ್ಳಿಯಲ್ಲಿ ಮಾತನಾಡಿ, ‘ರೋಹಿಣಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಾಗಿದೆ’ ಎಂದಿದ್ದಾರೆ.

‘ಮೂರ್ನಾಲ್ಕು ವರ್ಷಗಳ ಹಿಂದೆ ಸದಸ್ಯರಾದವರನ್ನು ನಕಲಿ ಸದಸ್ಯರೆಂದು ಅವರ ಸದಸ್ಯತ್ವ ರದ್ದು ಮಾಡಿದ್ದಾರೆ. ಆಗ ಕಟ್ಟಡ ಕಾರ್ಮಿಕರಾಗಿದ್ದವರು ಕೆಲಸ ದೊರೆಯಲಿಲ್ಲ ಎಂದು ಈಗ ಬೇರೆ ಕೆಲಸ ಮಾಡುತ್ತಿರಬಹುದು. ಅದನ್ನೇ ಕಾರಣವಾಗಿಟ್ಟುಕೊಂಡು ಅವರ ಸದಸ್ಯತ್ವ ರದ್ದು ಮಾಡಲಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT